Home ಜಿಲ್ಲೆ ಕಲಬುರಗಿ ರೋಗನಿರ್ಣಯದಲ್ಲಿ ತಂತ್ರಜ್ಞಾನದ ಹೊಸ ಕ್ರಾಂತಿ

ರೋಗನಿರ್ಣಯದಲ್ಲಿ ತಂತ್ರಜ್ಞಾನದ ಹೊಸ ಕ್ರಾಂತಿ

ಕಲಬುರಗಿ,ಸೆ.28: ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನವು ದಿನದಿಂದ ದಿನಕ್ಕೆ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿದ್ದು, ರೋಗನಿರ್ಣಯದಲ್ಲಿ ರೇಡಿಯಾಲಜಿ ವಿಭಾಗದ ಮಹತ್ವ ಮತ್ತಷ್ಟು ಹೆಚ್ಚುತ್ತಿದೆ ಎಂದು ಕರ್ನಾಟಕ ರಾಜ್ಯ ಇಂಡಿಯನ್ ರೇಡಿಯೋಲಾಜಿಕಲ್ ಅಂಡ್ ಇಮೇಜಿಂಗ್ ಅಸೋಸಿಯೇಷನ್ ಅಧ್ಯಕ್ಷ ಡಾ. ಸುಧೀರ್ ಕಾಳೆ ಹೇಳಿದರು.
ನಗರದ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಐಆರ್‍ಐಎ ಕರ್ನಾಟಕ ರಾಜ್ಯ ಚಾಪ್ಟರ್ ಹಾಗೂ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ರೇಡಿಯಾಲಜಿ ವಿಭಾಗದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ಪೆÇ್ರೀಬ್‍ನಿಂದ ಪ್ರಾಕ್ಟೀಸ್‍ವರೆಗೆ’ ರೇಡಿಯಾಲಜಿ ಲೈವ್ ವಿಶೇಷ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಅವರು ಮಾತನಾಡಿದರು.
ರೇಡಿಯಾಲಜಿ ಕ್ಷೇತ್ರದಲ್ಲಿ ಬಳಕೆಯಾಗುತ್ತಿರುವ ಅತ್ಯಾಧುನಿಕ ಅಲ್ಟ್ರಾಸೌಂಡ್, ಸೋನೋಗ್ರಫಿ, ಡಾಪ್ಲರ್, ಇಮೇಜಿಂಗ್ ಸೇರಿದಂತೆ ವಿವಿಧ ರೋಗನಿರ್ಣಯ ತಂತ್ರಜ್ಞಾನಗಳ ಕುರಿತು ಅವರು ವಿವರಿಸಿದರು. ಆಧುನಿಕ ತಂತ್ರಜ್ಞಾನಗಳು ಕೇವಲ ಸೈದ್ಧಾಂತಿಕ ಜ್ಞಾನಕ್ಕೆ ಸೀಮಿತವಾಗದೆ, ರೋಗಿಯ ಪರೀಕ್ಷೆಯಿಂದ ಆರಂಭಿಸಿ ನಿಖರವಾದ ಚಿತ್ರಣ ಪಡೆಯುವುದು, ಅದರ ವೈಜ್ಞಾನಿಕ ವಿಶ್ಲೇಷಣೆ ನಡೆಸುವುದು ಹಾಗೂ ಅಂತಿಮ ರೋಗನಿರ್ಣಯಕ್ಕೆ ಸಹಕಾರಿಯಾಗುವವರೆಗೆ ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ರೋಗನಿರ್ಣಯದ ನಿಖರತೆ ಹಾಗೂ ವೇಗವನ್ನು ಹೆಚ್ಚಿಸುವಲ್ಲಿ ಆಧುನಿಕ ರೇಡಿಯಾಲಜಿ ತಂತ್ರಜ್ಞಾನಗಳು ಪ್ರಮುಖವಾಗಿವೆ. ವೈದ್ಯರು ಹೊಸ ತಂತ್ರಜ್ಞಾನಗಳ ಕುರಿತು ನಿರಂತರವಾಗಿ ಜ್ಞಾನವನ್ನು ನವೀಕರಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇಂತಹ ಪ್ರಾಯೋಗಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳು ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನಕಾರಿಯಾಗಿವೆ ಎಂದು ಹೇಳಿದರು.
ಬಸವೇಶ್ವರ ಆಸ್ಪತ್ರೆಯಲ್ಲಿ ಆಧುನಿಕ ವೈದ್ಯಕೀಯ ಸೌಲಭ್ಯಗಳು
ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಧುನಿಕ ರೇಡಿಯಾಲಜಿ ಮತ್ತು ರೋಗನಿರ್ಣಯಕ್ಕೆ ಅಗತ್ಯವಿರುವ ಹಲವು ಸೌಲಭ್ಯಗಳು ಲಭ್ಯವಿದ್ದು, ಆಸ್ಪತ್ರೆಯು ಈ ಭಾಗದ ಅತ್ಯುತ್ತಮ ಹಾಗೂ ಅತ್ಯಾಧುನಿಕ ಆಸ್ಪತ್ರೆಗಳ ಸಾಲಿನಲ್ಲಿ ಗುರುತಿಸಿಕೊಳ್ಳುವತ್ತ ಮುನ್ನಡೆಯುತ್ತಿದೆ ಎಂದು ಡಾ. ಸುಧೀರ್ ಕಾಳೆ ಹೇಳಿದರು.
ಕಾರ್ಯಕ್ರಮದಲ್ಲಿ ಇಂಡಿಯನ್ ರೇಡಿಯೋಲಾಜಿಕಲ್ ಅಂಡ್ ಇಮೇಜಿಂಗ್ ಅಸೋಸಿಯೇಷನ್ ಕರ್ನಾಟಕ ರಾಜ್ಯ ಅಧ್ಯಾಯದ ಕಾರ್ಯಚಟುವಟಿಕೆಗಳ ಕುರಿತು ಅವರು ಮಾಹಿತಿ ನೀಡಿದರು. ಕರ್ನಾಟಕ ರಾಜ್ಯ ಅಧ್ಯಾಯವು ರೇಡಿಯಾಲಜಿಸ್ಟ್‍ಗಳ ಅಧಿಕೃತ ನೋಂದಾಯಿತ ರಾಜ್ಯ ಸಂಘಟನೆಯಾಗಿದ್ದು, ತನ್ನ ಸದಸ್ಯರಿಗಾಗಿ ನಿರಂತರವಾಗಿ ಶೈಕ್ಷಣಿಕ ಕಾರ್ಯಕ್ರಮಗಳು, ವೈದ್ಯಕೀಯ ಸಮ್ಮೇಳನಗಳು ಹಾಗೂ ವಿವಿಧ ಚಟುವಟಿಕೆಗಳನ್ನು ಆಯೋಜಿಸುತ್ತಿದೆ ಎಂದರು.ರೇಡಿಯಾಲಜಿಸ್ಟ್‍ಗಳ ವೃತ್ತಿಪರ ಬೆಳವಣಿಗೆಯ ಜೊತೆಗೆ ಕ್ರೀಡೆ ಮತ್ತು ಮನರಂಜನೆಗೂ ಉತ್ತೇಜನ ನೀಡುವ ಉದ್ದೇಶದಿಂದ ಕರ್ನಾಟಕ ರೇಡಿಯಾಲಜಿಸ್ಟ್ಸ್ ಪ್ರೀಮಿಯರ್ ಲೀಗ್ ಎಂಬ ವಿಶೇಷ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಮಹಾವಿದ್ಯಾಲಯದ ಸಂಚಾಲಕ ಹಾಗೂ ಆಡಳಿತ ಮಂಡಳಿ ಸದಸ್ಯ ಡಾ. ಶರಣಬಸಪ್ಪ ಹರವಾಳ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಡೀನ್ ಡಾ. ಶರಣಗೌಡ ಪಾಟೀಲ ವಹಿಸಿದ್ದರು. ಐಆರ್‍ಐಎ ರಾಜ್ಯ ಕಾರ್ಯದರ್ಶಿ ಡಾ. ವಿಜಯ ಸಾರಥಿ, ರೇಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ. ಶಿವಾನಂದ ಮೇಳಕುಂದಿ ಹಾಗೂ ಕೆಎಂಸಿ ವೀಕ್ಷಕ ಡಾ. ರಾಯಕೋಡ್ ಪಾಟೀಲ ವೇದಿಕೆಯಲ್ಲಿದ್ದರು.ಡಾ. ಶೃತಿ ಪಾಟೀಲ ಸ್ವಾಗತಿಸಿದರು. ಡಾ. ಸಂಜನಾ ದೇವರಮನಿ ಕಾರ್ಯಕ್ರಮ ನಿರೂಪಿಸಿದರು.