
ಮೈಸೂರು, ಜು. ೨೮- ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ ೧ ರಂದು ಮೈಸೂರಿಗೆ ಭೇಟಿ ನೀಡಲಿದ್ದು, ಅಂದು ಮೈಸೂರಿನಲ್ಲಿ ಸ್ವಾಮಿ ವಿವೇಕಾನಂದ ಸ್ಮಾರಕವನ್ನು ಲೋಕಾರ್ಪಣೆ ಮಾಡುವರು.
ಮೈಸೂರಿನ ದೇವರಾಜ ಮೊಹಲ್ಲಾ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಈ ಸ್ಮಾರಕ ಸ್ಥಳದಲ್ಲಿ ಹಿಂದೆ ಸ್ವಾಮಿ ವಿವೇಕಾನಂದರು ತಂಗಿದ್ದರು ಎನ್ನಲಾಗಿದ್ದು, ಇದು ಅವರ ನೆನಪಿನಲ್ಲಿ ಈಗ ಇಲ್ಲಿ ಸಾಂಸ್ಕೃತಿಕ ಮತ್ತು ಯುವಜನ ಚಟುವಟಿಕೆಗಳ ಕೇಂದ್ರವನ್ನು ಮೈಸೂರಿನ ರಾಮಕೃಷ್ಣ ಆಶ್ರಮ ಅಭಿವೃದ್ಧಿಪಡಿಸಿದೆ.
ಈ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡುವರು ಎಂದು ಮೈಸೂರು ರಾಮಕೃಷ್ಣ ಆಶ್ರಮದ ಮುಕ್ತಿದಾನಂದ ಜೀ ಮಹಾರಾಜ್ ತಿಳಿಸಿದರು.
ಈ ಸ್ಮಾರಕವನ್ನು ಸುಮಾರು ೪೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ಸ್ಮಾರಕ ಹಾಗೂ ಸಾಂಸ್ಕೃತಿ ಯುವ ಕೇಂದ್ರವನ್ನು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದ ನಂತರ ರಾಮಕೃಷ್ಣ ಆಶ್ರಮಕ್ಕೆ ತೆರಳಿ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವರು. ಹಾಗೆಯೇ ರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ವಿಶೇಷ ವೇದಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಸುಮಾರು ೬ ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ವಿಶೇಷ ಪಾಸ್ ವಿತರಿಸಲಾಗುತ್ತಿದೆ. ಪಾಸ್ ಹೊಂದಿರುವವರಿಗೆ ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.
ವೇದಿಕೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರೊಂದಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಂಸದ ಯದುವೀರ್ ಒಡೆಯರ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಶಾಸಕ ಹರೀಶ್‌ಗೌಡ ಭಾಗಿಯಾಗುವರು.
ಅರುಣ್ ಯೋಗಿ ರಾಜ್ ಕೆತ್ತನೆಯ ನೆನಪಿನ ಕಾಣಿಕೆ
ಸ್ವಾಮಿ ವಿವೇಕಾನಂದ ಸ್ಮಾರಕವನ್ನು ಲೋಕಾರ್ಪಣೆ ಮಾಡಲಿರುವ ಪ್ರಧಾನಿ ಮೋದಿಯವರಿಗೆ ಅಯೋಧ್ಯೆಯ ಬಾಲ ರಾಮನನ್ನು ಕೆತ್ತಿರುವ ಖ್ಯಾತ ಶಿಲ್ಪಿ ಅರುಣ್ ಯೋಗಿ ರಾಜ್‌ರವರ ಕೆತ್ತನೆಯ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ವಿಶೇಷ ನೆನಪಿನ ಕಾಣಿಕೆಯಾಗಿ ನೀಡಲಾಗುತ್ತದೆ. ಜತೆಗೆ ಮೈಸೂರಿನ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ವಿಶೇಷ ನೆನಪಿನ ಕಾಣಿಕೆಯನ್ನು ಪ್ರಧಾನಿಗೆ ಅರ್ಪಿಸಲಾಗುತ್ತದೆ ಎಂದು ಮೈಸೂರು ರಾಮಕೃಷ್ಣ ಆಶ್ರಮದ ಮುಕ್ತಿದಾನಂದ ಜೀ ಮಹಾರಾಜ್ ಹೇಳಿದರು.































