
ಕಲಬುರಗಿ,ಅ.13-ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಇಂದು “ಸಸ್ಯ ವಿಜ್ಞಾನದಲ್ಲಿ ಹೊಸ ಆಯಾಮಗಳು: ಶೈಕ್ಷಣಿಕ ಶ್ರೇಷ್ಠತೆಯಿಂದ ಸಾಂಸ್ಥಿಕ ನಾಯಕತ್ವದತ್ತ” ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಯಿತು. ಇದೇ ಸಂದರ್ಭದಲ್ಲಿ ಸಿಯುಕೆ ಸಸ್ಯಶಾಸ್ತ್ರ ಸಂಘಕ್ಕೆ ಚಾಲನೆ ನೀಡಲಾಯಿತು ಹಾಗೂ ಸಂಘದ ಲಾಂಛನವನ್ನು
ಅನಾವರಣಗೊಳಿಸಲಾಯಿತು.
ಮುಖ್ಯ ಅತಿಥಿಯಾಗಿ ಮಾತನಾಡಿದ ಪಿತಾಂಬರ್ ಪಂತ್ ರಾಷ್ಟ್ರೀಯ ಪರಿಸರ ಫೆಲೋ ಹಾಗೂ ಕರ್ನಾಟಕ ರಾಜ್ಯ ಪರಿಸರ ಪ್ರಭಾವ ಮೌಲ್ಯಮಾಪನ ಸಮಿತಿಯ ಅಧ್ಯಕ್ಷರಾದ ಡಾ. ಆರ್. ರಾಘವೇಂದ್ರ ರಾವ್ ಅವರು, ದೇಶದಲ್ಲಿ ಅಪಾರ ಔಷಧೀಯ ಗುಣಗಳನ್ನು ಹೊಂದಿರುವ ಸಾವಿರಾರು ಸಸ್ಯ ಪ್ರಭೇದಗಳಿವೆ. ದಖನ್ ಪ್ರಸ್ಥಭೂಮಿ, ಪಶ್ಚಿಮ ಘಟ್ಟಗಳು, ಈಶಾನ್ಯ ಭಾರತ, ಪೂರ್ವ ಹಿಮಾಲಯ ಹಾಗೂ ಅಂಡಮಾನ್-ನಿಕೋಬಾರ್ ದ್ವೀಪಗಳು ವೈವಿಧ್ಯಮಯ ಸಸ್ಯ ಸಂಪತ್ತಿನ ನೆಲೆಗಳಾಗಿವೆ. ಈ ಸಸ್ಯಗಳ ಔಷಧೀಯ ಗುಣಗಳ ಕುರಿತು ವೈಜ್ಞಾನಿಕ ಸಂಶೋಧನೆ ನಡೆಸಿ, ಅವುಗಳನ್ನು ಮೌಲ್ಯವರ್ಧಿತ ಔಷಧೀಯ ಉತ್ಪನ್ನಗಳಾಗಿ ಅಭಿವೃದ್ಧಿಪಡಿಸುವ ಮೂಲಕ ದೇಶದ ಆರ್ಥಿಕತೆಯನ್ನು ಬಲಪಡಿಸಬೇಕು ಹಾಗೂ ಭಾರತೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಬೇಕು ಎಂದು ಹೇಳಿದರು.
ಭಾರತದ ಸಸ್ಯಶಾಸ್ತ್ರ ಮತ್ತು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸುಶ್ರುತ ಮತ್ತು ಚರಕ ಅವರಂತಹ ಪ್ರಾಚೀನ ವೈದ್ಯರು ಔಷಧೀಯ ಸಸ್ಯಗಳ ಗುಣಗಳನ್ನು ಗುರುತಿಸಿ, ಆರೋಗ್ಯ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಈ ಪರಂಪರೆಯನ್ನು ಮುಂದುವರಿಸಲು ದೇಶದ ಔಷಧೀಯ ಸಸ್ಯ ಸಂಪತ್ತನ್ನು ಗುರುತಿಸಿ, ಸಂರಕ್ಷಿಸುವುದರ ಜೊತೆಗೆ ಅದರ ಔಷಧೀಯ ಸಾಮಥ್ರ್ಯವನ್ನು ವೈಜ್ಞಾನಿಕವಾಗಿ ಬಳಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಸಸ್ಯಶಾಸ್ತ್ರ, ರಸಾಯನಶಾಸ್ತ್ರ ಮತ್ತು ಅಣ್ವಿಕ ಜೀವಶಾಸ್ತ್ರ ಸೇರಿದಂತೆ ವಿವಿಧ ವಿಜ್ಞಾನ ವಿಭಾಗಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಬಹುಶಿಸ್ತೀಯ ಸಂಶೋಧನೆಯ ಮೂಲಕ ಔಷಧೀಯ ಸಸ್ಯಗಳ ಗುಣಗಳನ್ನು ಗುರುತಿಸಿ, ಅವುಗಳ ಸಂಪೂರ್ಣ ಸಾಮಥ್ರ್ಯವನ್ನು ಬಳಸಿಕೊಳ್ಳುವ ಅಗತ್ಯವಿದೆ ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಯುಕೆ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಮಾತನಾಡಿ, ವಿದ್ಯಾರ್ಥಿಗಳು ಸಸ್ಯಶಾಸ್ತ್ರ ಕ್ಷೇತ್ರದಲ್ಲಿ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕು. ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಶೈಕ್ಷಣಿಕ ಹಾಗೂ ಸಂಶೋಧನಾ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಜ್ಞಾನ ಮತ್ತು ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಅಸ್ಸಾಂ ರಾಜ್ಯದ ಮಾಜಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿ.ಸಿ.ಸಿಎಫ್) ಹಾಗೂ ಮುಖ್ಯ ವನ್ಯಜೀವಿ ವಾರ್ಡನ್ ಟಿ. ವೇಣುಧರ್ ರೆಡ್ಡಿ, ಐಎಫ್ಎಸ್ (ನಿವೃತ್ತ) ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಸಸ್ಯಶಾಸ್ತ್ರವು ಪರಿಸರ ವ್ಯವಸ್ಥೆ ಮತ್ತು ಸುಸ್ಥಿರ ಅಭಿವೃದ್ಧಿಯೊಂದಿಗೆ ನಿಕಟ ಸಂಬಂಧ ಹೊಂದಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯ ಜೊತೆಗೆ ವೃತ್ತಿಜೀವನದ ವಿವಿಧ ಅವಕಾಶಗಳು ಹಾಗೂ ಸಮಾಜಕ್ಕೆನೀಡಬಹುದಾದ ಕೊಡುಗೆಗಳ ಬಗ್ಗೆಯೂ ಗಮನಹರಿಸಬೇಕು ಎಂದು ಹೇಳಿದರು.
ಜೀವ ವಿಜ್ಞಾನ ನಿಕಾಯದ ಡೀನ್ ಹಾಗೂ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪೆÇ್ರ. ಎನ್. ಸತ್ಯನಾರಾಯಣ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ಡಾ. ರಾಕೇಶ್ ಕುಮಾರ್ ವಂದನಾರ್ಪಣೆ ಸಲ್ಲಿಸಿದರು. ಸಿಯುಕೆ ಸಸ್ಯಶಾಸ್ತ್ರ ಸಂಘದ ನೂತನ ಕಾರ್ಯದರ್ಶಿಯಾಗಿ ಡಾ. ಪ್ರಶಾಂತ್ ಕುಮಾರ್ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಪೆÇ್ರ. ಪಲ್ಲೆಪೆÇೀಗು ರಾಘವಯ್ಯ, ಪೆÇ್ರ. ರಾಜೀವ್ ಶೇಷ ಜೋಶಿ, ಪೆÇ್ರ. ವೆಂಕಟ ರಮಣ ದೊಡ್ಡಿ, ಡಾ. ಅದುಶ್ ಭಟ್, ಡಾ. ಕೃಷ್ಣ ಚೈತನ್ಯ, ಡಾ. ಪ್ರಶಾಂತ್ ಕುಮಾರ್, ಡಾ. ಪ್ರಬಂಜನ್ ಗಾಯಿ, ಡಾ. ಸ್ವಾತಿ, ಡಾ. ಕವಿಶಂಕರ್, ಡಾ. ರಶ್ಮಿತಾ, ಡಾ. ಕವಿತಾ, ಡಾ. ಸೀನಮ್ ಸೇರಿದಂತೆ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.


























