
ಕಲಬುರಗಿ,ಅ.2-ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿನ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳು ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ನಿಗಾವಹಿಸಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅ.1 ರಂದು ನಗರ ಪೊಲೀಸ್ ಆಯುಕ್ತಾಲಯದಲ್ಲಿ ಮಾದಕ ವಸ್ತುಗಳ ಅಕ್ರಮ ಮಾರಾಟಗಾರರ (ಪೆಡ್ಲರ್) ಪರೇಡ್ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯ 10 ಪೊಲೀಸ್ ಠಾಣೆಗಳಿಂದ ಒಟ್ಟು 67 ಜನ ಗಾಂಜಾ ಪೆಡ್ಲರ್ಗಳನ್ನು ಪರೇಡ್ಗೆ ಹಾಜರುಪಡಿಸಲಾಯಿತು. 29 ಜನ ಗಾಂಜಾ ಪೆಡ್ಲರ್ಗಳ ವಿರುದ್ಧ ಪಿ.ಎ.ಆರ್. ಕ್ರಮ ಕೈಗೊಳ್ಳಲಾಯಿತು. 19 ಜನ ಗಾಂಜಾ ಪೆಡ್ಲರ್ಗಳ ವಿರುದ್ಧ ಬಾಂಡ್ ಓವರ್ ಮಾಡಲಾಯಿತು.
ಈ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಡಿ.ಅವರು ಮಾದಕ ವಸ್ತುಗಳ ಮಾರಾಟಗಾರ (ಪೆಡ್ಲರ್)ರಿಗೆ ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸದಂತೆ, ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟದಂತಹ ಚಟುವಟಿಕೆಗಳಿಂದ ಮುಕ್ತಗೊಂಡು ಸುಂದರ ಜೀವನ ಸಾಗಿಸುವಂತೆ ಮತ್ತು ಸ್ವಾಸ್ಥ್ಯ ಸಮಾಜವನ್ನು ಹದಗೆಡಿಸುವಂತಹ ಮಾದಕ ವಸ್ತುಗಳ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದರು. ಮಾದಕ ವಸ್ತುಗಳನ್ನು ಮಾರಾಟ ಮಾಡಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.





















