Home ಜಿಲ್ಲೆ ಬೆಂಗಳೂರು ಇ-ಗವ್ ಟೆಕ್ನಾಲಜೀಸ್‌ನಿಂದ ಡಿಪಿಐ ವರದಿ ಬಿಡುಗಡೆ

ಇ-ಗವ್ ಟೆಕ್ನಾಲಜೀಸ್‌ನಿಂದ ಡಿಪಿಐ ವರದಿ ಬಿಡುಗಡೆ

ಬೆಂಗಳೂರು, ಅ.೨: ಐಐಎಂ ಬೆಂಗಳೂರು, ಇಗವ್ ಫೌಂಡೇಶನ್ ಸಹಯೋಗದೊಂದಿಗೆ `State of DPI in India ವರದಿಯ ಎರಡನೇ ಆವೃತ್ತಿಯನ್ನು ಬಿಡುಗಡೆ ಮಾಡಿದೆ.


ಐಐಎಂ ಬೆಂಗಳೂರಿನ ’ಸೆಂಟರ್ ಫಾರ್ ಡಿಜಿಟಲ್ ಪಬ್ಲಿಕ್ ಗೂಡ್ಸ್’ ಆಯೋಜಿಸಿದ್ದ ವಾರ್ಷಿಕ ನೀತಿ ಸಮ್ಮೇಳನದಲ್ಲಿ ಈ ವರದಿಯನ್ನು ಬಿಡುಗಡೆಗೊಳಿಸಲಾಯಿತು. ಪ್ರೋಟಿಯನ್ ಇ-ಗವ್ ಟೆಕ್ನಾಲಜೀಸ್‌ನ ಸಿಒಒ ವಿ. ಈಶ್ವರನ್, ಸಿಇಒ ವಿರಾಜ್ ತ್ಯಾಗಿ ಮತ್ತು ಸಿಡಿಪಿಜಿ ಅಧ್ಯಕ್ಷ ಹಾಗೂ ಐಐಎಂಬಿಯ ಸ್ಟ್ರಾಟಜಿ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಆರ್. ಶ್ರೀನಿವಾಸನ್ ಅವರು ಈ ವರದಿಯನ್ನು ಅನಾವರಣಗೊಳಿಸಿದರು.


ಈ ವರದಿಯು ಭಾರತದ ಡಿಪಿಐ ಪರಿಸರ ವ್ಯವಸ್ಥೆಯ ವಿಕಸನ ಹಾಗೂ ಹಣಕಾಸು ಸೇವೆಗಳು, ಆರೋಗ್ಯ ರಕ್ಷಣೆ, ಕೃಷಿ, ವಾಣಿಜ್ಯ ಮತ್ತು ಶಿಕ್ಷಣ ಎಂಬ ಐದು ಕ್ಷೇತ್ರಗಳಲ್ಲಿ ಇದರ ಅನುಷ್ಠಾನವನ್ನು ಮೌಲ್ಯಮಾಪನ ಮಾಡುತ್ತದೆ. ಮೊದಲ ಆವೃತ್ತಿಯಲ್ಲಿ ಪರಿಚಯಿಸಲಾದ ಡಿಪಿಐ ಇತಿಮಿತಿಗಳನ್ನು ಆಧರಿಸಿ, ಎರಡನೇ ಆವೃತ್ತಿಯು ತನ್ನ ವಿಶ್ಲೇಷಣೆಯನ್ನು ಹೆಚ್ಚುವರಿ ಮೂರು ಕ್ಷೇತ್ರಗಳಿಗೆ ವಿಸ್ತರಿಸಿದೆ. ಅಲ್ಲದೆ, ಹಂಚಿಕೆಯ ಡಿಜಿಟಲ್ ಮೂಲಸೌಕರ್ಯವು ಹೆಚ್ಚು ಸಂಕೀರ್ಣವಾಗುತ್ತಿರುವ ಪರಿಸರ ವ್ಯವಸ್ಥೆಗಳ ನಡುವೆ ಹೇಗೆ ಸಮನ್ವಯವನ್ನು ಸಾಧ್ಯವಾಗಿಸುತ್ತಿದೆ ಎಂಬುದನ್ನು ಇದು ಪರಿಶೀಲಿಸುತ್ತದೆ.


‘ಈ ವರದಿ ಡಿಪಿಐ ಸಮಗ್ರ ಬೆಳವಣಿಗೆ, ಸಾಂಸ್ಥಿಕ ಸಮನ್ವಯ ಮತ್ತು ಸಾರ್ವಜನಿಕ-ಸೇವಾ ಪರಿಸರ ವ್ಯವಸ್ಥೆಗಳನ್ನು ಹೇಗೆ ಮುನ್ನಡೆಸಬಹುದು ಎಂಬುದರ ಕುರಿತು ಜಾಗತಿಕ ಚರ್ಚೆಗೆ ಕೊಡುಗೆ ನೀಡುವ ಪ್ರಯತ್ನವಾಗಿದೆ’ ಎಂದು ಐಐಎಂ ಬೆಂಗಳೂರಿನ ಡಿಜಿಟಲ್ ಪಬ್ಲಿಕ್ ಗೂಡ್ಸ್ ಕೇಂದ್ರದ (ಸಿಡಿಪಿಜಿ) ಅಧ್ಯಕ್ಷ ಪ್ರೊ. ಆರ್ ಶ್ರೀನಿವಾಸನ್ ಹೇಳಿದರು.