
ಬೆಂಗಳೂರು, ಅ. ೨- ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಿಎಂಐಸಿ/ನೈಸ್ ಯೋಜನೆ ಹಾಗೂ ಆಸ್ತಿ ಜಮೀನುಗಳಿಗೆ ಸಂಬಂಧಿಸಿದಂತೆ ಹಲವು ಆರೋಪಗಳನ್ನು ಮಾಡಿದ್ದಾರೆ. ಈ ಆರೋಪಗಳ ಕುರಿತು ಸಾರ್ವಜನಿಕರಿಗೆ ಸ್ಪಷ್ಟತೆ ದೊರೆಯುವ ನಿಟ್ಟಿನಲ್ಲಿ, ಎಚ್.ಡಿ. ಕುಮಾರಸ್ವಾಮಿ ಅವರು ಅಧಿಕೃತ ದಾಖಲೆಗಳು ಮತ್ತು ಸರ್ಕಾರಿ ದಾಖಲೆಗಳ ಆಧಾರದ ಮೇಲೆ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಬೇಕೆಂದು ಕಾಂಗ್ರೆಸ್ ಮುಖಂಡರು ಮನವಿ ಮಾಡಿದ್ದಾರೆ.
ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ಮಾಧ್ಯಮಗಳ ಮೂಲಕ ನೈಸ್ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಹಾಗೂ ಮುಖ್ಯಮಂತ್ರಿ ಹಾಗೂ ಕುಟುಂಬದವರು ಈ ವ್ಯಾಪ್ತಿಯಲ್ಲಿ ಜಾಗ ಖರೀದಿಸಿದ್ದಾರೆ ಎಂಬುವ ಆರೋಪವನ್ನು ಮಾಡಿದ್ದಾರೆ,
ಇದಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನವದೆಹಲಿ ಯಿಂದ ಎರಡನೇ ಅವಧಿಯಲ್ಲಿ ಅಕ್ರಮ ಯಾವುದೂ ನಡೆದಿಲ್ಲ, ಕಾನೂನುಬದ್ಧವಾಗಿ ಖರೀದಿಸಿದ್ದೇವೆ, ವ್ಯವಹಾರ ನಡೆಸಿದ್ದೇವೆ ಎಂದು ದಿಟ್ಟತನದಿಂದ ಉತ್ತರ ನೀಡಿದ್ದಾರೆ,
ಕೇಂದ್ರದ ಸಚಿವರು, ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ನೈಸ್ ಯೋಜನೆಯ ವಿಷಯದಲ್ಲಿ ಈ ಕೆಳಗಿನ ಪ್ರಶ್ನೆಗಳು.
ಎಚ್.ಡಿ. ಕುಮಾರಸ್ವಾಮಿ ಅವರೇ, ನೈಸ್ ಯೋಜನೆಯನ್ನು ವಿರೋಧಿಸುವ ನೀವು ಹಾಗೂ ನೈಸ್ ಯೋಜನೆಯ ವ್ಯಾಪ್ತಿಯಲ್ಲಿ ನಿಮ್ಮ ಕುಟುಂಬದ ಆಸ್ತಿ ಹಾಗೂ ಭೂಮಿ ಇರುವ ಬಗ್ಗೆ ನೀವು ಏಕೆ ಬಹಿರಂಗಪಡಿಸಿಲ್ಲ? ನೈಸ್ ಯೋಜನೆಯಲ್ಲಿ ಸಾವಿರಾರು ಎಕರೆ ಭೂಮಿಯನ್ನು ಹೆಚ್ಚುವರಿ ಯಾಗಿ ನೀಡಲಾಗಿದೆ ಎಂಬ ಆರೋಪ ಮಾಡಿದ್ದೀರಿ. ಹಾಗಾದರೆ ನ್ಯಾಯಾಲಯದಲ್ಲಿ ತೀರ್ಮಾನವಾಗಿರುವ ಬಗ್ಗೆ ಏಕೆ ನೀವು ಉತ್ತರಿಸುತ್ತಿಲ್ಲ? ಡಿ.ಕೆ. ಶಿವಕುಮಾರ್ ಅವರ ಚುನಾವಣಾ ಪ್ರಮಾಣ ಪತ್ರದಲ್ಲಿ ೧೪೦೦ ಕೋಟಿ ಘೋಷಣೆ ಮಾಡಿದ್ದಾರೆ ಎಂದು ಹೇಳಿದ್ದೀರಿ, ಹಾಗಾದರೆ ನಿಮ್ಮ ಕುಟುಂಬದ ಆಸ್ತಿ ಘೋಷಣೆಯ ಬಗ್ಗೆ ತಾವು ಯಾಕೆ ಬಹಿರಂಗಪಡಿಸಿಲ್ಲ? ಗೌರವಾನ್ವಿತ ಪ್ರಧಾನಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ ದೇಶದಲ್ಲಿ, ರಾಜ್ಯದಲ್ಲಿ ಸುಮಾರು ೬೫ ವರ್ಷಗಳ ಕಾಲ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಎಚ್.ಡಿ. ದೇವೇಗೌಡ ಸಾಹೇಬರ ಆಸ್ತಿ ಕೇವಲ ಎಂಟು ಕೋಟಿ ಅಷ್ಟೇ. ಆದರೆ ನಿಮ್ಮ ಮಗ ನಿಖಿಲ್ ಕುಮಾರಸ್ವಾಮಿ ಚುನಾವಣೆಯಲ್ಲಿ ೧೧೪ ಕೋಟಿ ಘೋಷಣೆ ಮಾಡಿದ್ದಾರೆ. ಕೇವಲ ೩೫ ವರ್ಷ ವಯಸ್ಸಿಗೆ ಇಷ್ಟು ಹಣ ಯಾವ ಮೂಲದಿಂದ ಬಂದಿದೆ ಎಂದು ಉತ್ತರಿಸಲಿಲ್ಲ ಯಾಕೆ? ಎಚ್.ಡಿ. ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಕೇವಲ ಮೂರು ಜನರ ಆಸ್ತಿ ೫೫೦ ಕೋಟಿ ಇದೆ. ಇದನ್ನು ತಾವು ಯಾಕೆ ಬಹಿರಂಗಪಡಿಸಿಲ್ಲ ಎಂದು ನಾಯಕರು ಪ್ರಶ್ನಿಸಿದ್ದಾರೆ.
ಈ ಜಂಟಿ ಸುದ್ದಿಗೋಷ್ಠಿಯ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಮನೋಹರ್, ಜಿ.ಪ್ರಕಾಶ್, ಚಂದ್ರಶೇಖರ್, ಉಮೇಶ್, ಪುಟ್ಟರಾಜು, ಆನಂದ್, ಕುಶಾಲ್ ಹರುವೇಗೌಡ, ರಂಜೀತ್ ಕುಮಾರ್, ಮಾಧವಹನೂರು, ಸಾಯಿನವೀನ್ ಲಕ್ಷ್ಮೀನಾರಾಯಣ, ಪುಟ್ಟರಾಜು, ಕಿಶೋರ್, ಸಾಯಿ ನವೀನ್ ಹಾಗೂ ಕಾಂಗ್ರೆಸ್ ಮುಖಂಡರು ಭಾಗವಹಿಸಿದರು.

























