Home Lead News ಬಾಲಕಿ ಮೇಲೆ ಅತ್ಯಾಚಾರ

ಬಾಲಕಿ ಮೇಲೆ ಅತ್ಯಾಚಾರ

ನವದೆಹಲಿ.ಆ೩೧: ಚಲಿಸುತ್ತಿದ್ದ ಸ್ವೀಪರ್ ಬಸ್‌ನಲ್ಲಿ ಸಾಮೂಹಿಕ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಹೀನ ಕೃತ್ಯವು ನಡೆದಿದ್ದು,ದೇಶದ ರಾಜಧಾನಿಯನ್ನು ಬೆಚ್ಚಿ ಬೀಳಿಸಿದೆ.


ಕಳೆದ ಆ. ೪ರಂದು ರಾತ್ರಿ ಕಾಶ್ಮೀರಿ ಗೇಟ್ ಪ್ರದೇಶದಲ್ಲಿ ಉತ್ತರ ಪ್ರದೇಶ ಮೂಲದ ೧೬ ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ
ಚಲಿಸುತ್ತಿದ್ದ ಸ್ವೀಪರ್ ಬಸ್‌ನಲ್ಲಿ ಸಾಮೂಹಿಕಅತ್ಯಾಚಾರ ನಡೆಸಿದ ಬಸ್ ಚಾಲಕ ಹಾಗೂ ಕಂಡಕ್ಟರ್‌ರನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರ ನಡೆಸಿದ ಬಾಲಕಿಯನ್ನು ನಗರದಿಂದ ಸುಮಾರು ೪೭ ಕಿಲೋಮೀಟರ್ ದೂರ ಕರೆದೊಯ್ದು ಬಳಿಕ ಕಾಶ್ಮೀರಿ ಗೇಟ್ ಬಸ್ ಟರ್ಮಿನಲ್ ಸಮೀಪದ ರಿಂಗ್ ರೋಡ್ ಬಳಿ ಆರೋಪಿಗಳು ಬಿಟ್ಟು ಪರಾರಿಯಾಗಿದ್ದಾರೆ.


ಸಂತ್ರಸ್ತ ಬಾಲಕಿಯು ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ನಿವಾಸಿಯಾಗಿದ್ದು, ೧೧ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು,ಆಕೆ ನೀಡಿದ ಮಾಹಿತಿಯನ್ನು ಆಧರಿಸಿ ಬಸ್ ಚಾಲಕ ಕುಲದೀಪ್ ಹಾಗೂ ಕಂಡಕ್ಟರ್ ಸಂದೀಪ್‌ನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗಿದೆ.


ಕಳೆದ ಆಗಸ್ಟ್ ೪ರಂದು ಕುಟುಂಬದವರೊಂದಿಗೆ ಉಂಟಾದ ಮನಸ್ತಾಪದ ಹಿನ್ನೆಲೆಯಲ್ಲಿ ಬಾಲಕಿ ಯಾರಿಗೂ ತಿಳಿಸದೆ ಮನೆಯಿಂದ ಹೊರಟು ನೋಯ್ಡಾದಲ್ಲಿರುವ ತನ್ನ ಸಂಬಂಧಿಕರನ್ನು ಭೇಟಿಯಾಗಲು ಆಕೆ ತೆರಳುತ್ತಿದ್ದಳು. ಭಾರಿ ಮಳೆ ಹಾಗೂ ಕತ್ತಲಿನ ಕಾರಣದಿಂದಾಗಿ ದಾರಿ ತಪ್ಪಿದ ಬಾಲಕಿ ತಪ್ಪಾಗಿ ಪರಿಚೌಕ್‌ನಲ್ಲಿ ಇಳಿದಿದ್ದಳು.


ಈ ವೇಳೆ ಖಾಲಿ ಕ್ಲೀಪರ್ ಬಸ್‌ವೊಂದು ಅಲ್ಲಿಂದ ಹಾದುಹೋಗುತ್ತಿತ್ತು. ಭಾರಿ ಮಳೆಯಲ್ಲಿ ಸಿಲುಕಿದ್ದ ಬಾಲಕಿ ಸಹಾಯಕ್ಕಾಗಿ ಬಸ್ ನಿಲ್ಲಿಸುವಂತೆ ಕೈ ಸನ್ನೆ ಮಾಡಿದ್ದಾಳೆ. ಚಾಲಕ ಮತ್ತು ಕಂಡಕ್ಟರ್ ಬಸ್ ನಿಲ್ಲಿಸಿ, ಅದು ನೋಯ್ಡಾ ಸೆಕ್ಟರ್-೬೩ಕ್ಕೆ ತೆರಳುತ್ತಿದೆ ಎಂದು ಹೇಳಿ ಆಕೆಯನ್ನು ಬಸ್‌ಗೆ ಹತ್ತಿಸಿಕೊಂಡಿದ್ದಾರೆ.


ಬಸ್ ಚಲಿಸಲು ಆರಂಭಿಸಿದ ಕೆಲವೇ ಸಮಯದಲ್ಲಿ ಕಂಡಕ್ಟರ್ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಚಾಲಕ ಮತ್ತು ಕಂಡಕ್ಟರ್ ಇಬ್ಬರೂ ಬಾಲಕಿ ಮೇಲೆ
ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ಪ್ರತಿರೋಧ ವ್ಯಕ್ತಪಡಿಸಿದಾಗ ಆರೋಪಿಗಳು ಆಕೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.


ನಂತರ ಆರೋಪಿಗಳು ಬಾಲಕಿಯನ್ನು ತಡರಾತ್ರಿ ಕಾಶ್ಮೀರಿ ಗೇಟ್ ಬಸ್ ಟರ್ಮಿನಲ್ ಸಮೀಪದ ರಿಂಗ್ ರೋಡ್ ಬಳಿ ಇಳಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಭಯಭೀತಳಾದ ಬಾಲಕಿ ಕಾಶ್ಮೀರಿ ಗೇಟ್ ಪೊಲೀಸರನ್ನು ಸಂಪರ್ಕಿಸಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಂತರ ಪೊಲೀಸರು ಟಿಮಾರ್ಪುರದಲ್ಲಿರುವ ಬಸ್ ಪಾರ್ಕಿಂಗ್ ಸ್ಥಳದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಸ್ವೀಪರ್ ಬಸ್ ವಶಪಡಿಸಿಕೊಂಡಿದ್ದು, ಅದನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.


ಪೊಲೀಸರ ಪ್ರಕಾರ, ಆರೋಪಿಗಳು ಈ ಬಸ್ ಅನ್ನು ಸೂರಜ್‌ಪುರದಲ್ಲಿರುವ ವರ್ಕ್ ಶಾಪ್ ಗೆ ದುರಸ್ತಿಗಾಗಿ ತೆಗೆದುಕೊಂಡು ಹೋಗಿ ಯಾಂತ್ರಿಕ ದೋಷ ಸರಿಪಡಿಸಿದ ಬಳಿಕ ಖಾಲಿ ಬಸ್ ಅನ್ನು ಟಿಮಾರ್ಪುರಕ್ಕೆ ಕೊಂಡೊಯ್ಯುತ್ತಿದ್ದ ವೇಳೆ ಪರಿಚೌಕ್ ಬಳಿ ಬಾಲಕಿಯನ್ನು ಆರೋಪಿಗಳು ಕಂಡಿದ್ದರು. ಸ್ವೀಪರ್ ಬಸ್‌ನಲ್ಲಿ ಪ್ರಯಾಣಿಕರ ಮಲಗುವ ಸ್ಥಳಗಳಿಗೆ ಪರದೆಗಳನ್ನು ಅಳವಡಿಸಲಾಗಿರುವುದರಿಂದ ಹೊರಗಿನಿಂದ ಒಳಗೆ ನಡೆಯುತ್ತಿದ್ದ ಘಟನೆಗಳು ಗೋಚರಿಸುವ ಸಾಧ್ಯತೆ ಕಡಿಮೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.


ಪರಿಚೌಕ್‌ನಿಂದ ಕಾಶ್ಮೀರಿ ಗೇಟ್‌ವರೆಗೆ ಬಸ್ ಸುಮಾರು ೪೭ ಕಿಲೋಮೀಟರ್ ಸಂಚರಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದು, ಬಸ್‌ನಲ್ಲಿನ ಸಾಕ್ಷ್ಯಗಳು ಸೇರಿದಂತೆ ಹಲವು ಅಂಶಗಳನ್ನು ಪರಿಶೀಲಿಸಲಾಗುತ್ತಿದೆ.