
ಯಾದಗಿರಿ,ಆ.31-ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಎಐಡಿಎಸ್‍ಓ ವತಿಯಿಂದ ಒಂದು ದಿನದ ಜಿಲ್ಲಾಮಟ್ಟದ ವಿದ್ಯಾರ್ಥಿ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ಶಿಬಿರದಲ್ಲಿ “ವಿದ್ಯಾರ್ಥಿಗಳಿಗೆ ಯಾರು ಆದರ್ಶವಾಗಬೇಕು” ಎಂಬ ವಿಷಯದ ಕುರಿತು ಎಐಡಿಎಸ್‍ಓ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ್ ಬೀಳೂರು ವಿಸ್ತೃತವಾಗಿ ಮಾತನಾಡಿದರು. “ವಿದ್ಯಾರ್ಥಿಗಳು ಕೇವಲ ವೈಯಕ್ತಿಕ ಯಶಸ್ಸು, ಹೆಚ್ಚು ಅಂಕಗಳನ್ನು ಗಳಿಸುವುದು ಅಥವಾ ಉತ್ತಮ ಸಂಬಳದ ಉದ್ಯೋಗ ಗಿಟ್ಟಿಸಿಕೊಳ್ಳುವುದನ್ನಷ್ಟೇ ಜೀವನದ ಪರಮ ಗುರಿಯಾಗಿಸಿಕೊಳ್ಳಬಾರದು. ಬದಲಾಗಿ, ಶೋಷಣೆ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ತಮ್ಮ ಇಡೀ ಜೀವನವನ್ನೇ ಅರ್ಪಿಸಿದ ಮಹಾನ್ ಕ್ರಾಂತಿಕಾರಿಗಳ ಉದಾತ್ತ ಚಿಂತನೆಗಳು ಹಾಗೂ ತ್ಯಾಗದ ಬದುಕನ್ನು ಆಳವಾಗಿ ಅರಿತುಕೊಳ್ಳಬೇಕು. ಭಗತ್ ಸಿಂಗ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಂತಹ ಅಪ್ರತಿಮ ಕ್ರಾಂತಿಕಾರಿ ಹೋರಾಟಗಾರರು ಎಲ್ಲರಿಗೂ ಸಮಾನ ಹಾಗೂ ಉಚಿತ ಶಿಕ್ಷಣ, ಉಚಿತ ಆರೋಗ್ಯ ಸೇವೆ, ನಿರುದ್ಯೋಗ ಮತ್ತು ಭ್ರಷ್ಟಾಚಾರ ರಹಿತ ಸಮಾಜ ಹಾಗೂ ಮಹಿಳೆಯರು ಗೌರವ-ಘನತೆಯಿಂದ ಬಾಳುವ ಸುಂದರ ಭಾರತದ ಕನಸು ಕಂಡಿದ್ದರು. ಇಂದಿನ ವಿದ್ಯಾರ್ಥಿ ಸಮುದಾಯ ಆ ಕನಸುಗಳು ನಿಜವಾಗಿಯೂ ಈಡೇರಿವೆಯೇ ಎಂಬುದನ್ನು ಗಂಭೀರವಾಗಿ ಪ್ರಶ್ನಿಸಬೇಕು ಮತ್ತು ವಿಮರ್ಶಿಸಬೇಕು.
ಇಂದಿನ ಯುವಪೀಳಿಗೆ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯ ಗೀಳಿಗೆ ಬಲಿಯಾಗದೆ ಅದರಿಂದ ದೂರವಿರಬೇಕು. ಸುತ್ತಲಿನ ಸಮಾಜದ ಜ್ವಲಂತ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ವೈಜ್ಞಾನಿಕ ಮನೋಭಾವ, ಸಾಮಾಜಿಕ ಹೊಣೆಗಾರಿಕೆ, ಪ್ರಶ್ನಿಸುವ ಗುಣ ಮತ್ತು ಉನ್ನತ ಮಾನವೀಯ ಮೌಲ್ಯಗಳನ್ನು ತಮ್ಮಲ್ಲಿ ನಿರಂತರವಾಗಿ ಬೆಳೆಸಿಕೊಳ್ಳಬೇಕು” ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ.ಕೆ., “ದೇಶವು 80ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದರೂ ಹಸಿವು, ಆರ್ಥಿಕ ಅಸಮಾನತೆ ಹಾಗೂ ಶಾಲಾ ಮೂಲಸೌಕರ್ಯಗಳ ಕೊರತೆ ಮುಂದುವರಿದಿದೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಹಕ್ಕುಗಳಿಗಾಗಿ ಸಂಘಟಿತರಾಗಿ ಹೋರಾಡುತ್ತಲೇ ಸಮಾಜದ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಬೇಕು ಹಾಗೂ ದೇಶವ್ಯಾಪಿ ನಡೆಯುತ್ತಿರುವ ‘ಸಾರ್ವಜನಿಕ ಶಿಕ್ಷಣ ಉಳಿಸಿ ಆಂದೋಲನ’ದಲ್ಲಿ ಸಕ್ರಿಯವಾಗಿ ಕೈಜೋಡಿಸಬೇಕು” ಎಂದು ತಿಳಿಸಿದರು.
ಶಿಬಿರದಲ್ಲಿ ವಿದ್ಯಾರ್ಥಿಗಳಿಗಾಗಿ ಗುಂಪು ಚರ್ಚೆಗಳು ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಸೃಜನಾತ್ಮಕ ಚಟುವಟಿಕೆಗಳು ನಡೆದವು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಐಡಿಎಸ್‍ಓ ಜಿಲ್ಲಾ ಸಹ ಸಂಚಾಲಕ ವಿಕ್ರಮ್ ವಹಿಸಿದ್ದರು. ಸಂಘಟನೆಯ ಜಿಲ್ಲಾ ಪದಾಧಿಕಾರಿಗಳಾದ ಕಾವೇರಿ, ಸೋನಲ್, ದರ್ಶನ್, ರೆಡ್ದೆಪ್ಪ, ಶ್ರವಣ್, ಲಕ್ಷ್ಮಿಕಾಂತ್, ರಂಜಿತಾ, ಮಮತಾ ಸೇರಿದಂತೆ ಜಿಲ್ಲೆಯ ವಿವಿಧ ಪ್ರೌಢಶಾಲೆ ಮತ್ತು ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.































