
ಕಲಬುರಗಿ: ರಾಜ್ಯದ ಹಲವು ಸಣ್ಣ ಹಾಗೂ ಹಿಂದುಳಿದ ಸಮುದಾಯಗಳು ಇಂದಿಗೂ ಸಮರ್ಪಕ ಮೀಸಲಾತಿ, ಶೈಕ್ಷಣಿಕ ಅವಕಾಶಗಳು ಹಾಗೂ ಸಾಮಾಜಿಕ ನ್ಯಾಯದಿಂದ ವಂಚಿತವಾಗಿವೆ ಎಂದು ವಿಶ್ವಕರ್ಮ ಹೋರಾಟ ಸಮಿತಿ ಅಧ್ಯಕ್ಷ ದೇವಿಂದ್ರ ದೇಸಾಯಿ ಕಲ್ಲೂರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೂಗಾರರು, ಅಕ್ಕಸಾಲಿಗರು, ವಿಶ್ವಕರ್ಮರು, ಬಡಿಗರು, ಕುಂಬಾರರು, ಮಡಿವಾಳರು, ನೇಕಾರರು, ಹಟಗಾರರು, ಹಡಪದ ಸೇರಿದಂತೆ ಅನೇಕ ಸಣ್ಣ ಸಮುದಾಯಗಳು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿವೆ. ಆದರೆ ಅವರಿಗೆ ದೊರೆಯಬೇಕಾದ ಸರ್ಕಾರಿ ಸೌಲಭ್ಯಗಳು ಮತ್ತು ಅವಕಾಶಗಳು ಸಮರ್ಪಕವಾಗಿ ತಲುಪುತ್ತಿಲ್ಲ ಎಂದು ಅವರು ಆರೋಪಿಸಿದರು.
ದೊಡ್ಡ ಸಮುದಾಯಗಳಿಗೆ ವಿವಿಧ ರೀತಿಯ ಮೀಸಲಾತಿ ಹಾಗೂ ಸರ್ಕಾರಿ ಸೌಲಭ್ಯಗಳು ದೊರೆಯುತ್ತಿರುವ ಸಂದರ್ಭದಲ್ಲಿ, ಜನಸಂಖ್ಯೆಯಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಸಣ್ಣ ಸಮುದಾಯಗಳ ಸಮಸ್ಯೆಗಳಿಗೆ ಸರ್ಕಾರಗಳು ಏಕೆ ಸೂಕ್ತ ಗಮನ ನೀಡುತ್ತಿಲ್ಲ ಎಂಬುದು ಗಂಭೀರ ಪ್ರಶ್ನೆಯಾಗಿದೆ ಎಂದು ಅವರು ಹೇಳಿದರು.
ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶ ಹಾಗೂ ಸಾಮಾಜಿಕ ನ್ಯಾಯದ ಹಕ್ಕನ್ನು ನೀಡಿದೆ. ಹೀಗಾಗಿ ಸಣ್ಣ ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿತತನವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ, ಅವರ ವಾಸ್ತವ ಸ್ಥಿತಿಗೆ ಅನುಗುಣವಾಗಿ ಪ್ರತ್ಯೇಕ ಮೀಸಲಾತಿ ಹಾಗೂ ವಿಶೇಷ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ದೇವಿಂದ್ರ ದೇಸಾಯಿ ಕಲ್ಲೂರು ಆಗ್ರಹಿಸಿದರು.
ಸಣ್ಣ ಸಮುದಾಯಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಶೈಕ್ಷಣಿಕ ಅವಕಾಶ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವಿಶೇಷ ನೆರವು, ಸರ್ಕಾರಿ ಉದ್ಯೋಗಗಳಲ್ಲಿ ನ್ಯಾಯಯುತ ಪ್ರಾತಿನಿಧ್ಯ ಹಾಗೂ ರಾಜಕೀಯ ಕ್ಷೇತ್ರದಲ್ಲೂ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರವೂ ಸಣ್ಣ ಸಮುದಾಯಗಳ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು.
ಎಲ್ಲಾ ಸಮಾಜಗಳ ಮುಖಂಡರನ್ನು ಶೀಘ್ರದಲ್ಲೇ ಸಭೆಗೆ ಆಹ್ವಾನಿಸಿ, ಸಣ್ಣ ಸಮುದಾಯಗಳ ಸಮಸ್ಯೆಗಳು ಹಾಗೂ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು.
“ಜನಸಂಖ್ಯೆ ಕಡಿಮೆ ಇದೆ ಎಂಬ ಕಾರಣಕ್ಕೆ ಯಾವುದೇ ಸಮುದಾಯದ ಹಕ್ಕುಗಳನ್ನು ಸೀಮಿತಗೊಳಿಸಬಾರದು. ಸಾಮಾಜಿಕ ನ್ಯಾಯ ಎಲ್ಲ ಸಮುದಾಯಗಳಿಗೂ ಸಮಾನವಾಗಿ ದೊರೆಯಬೇಕು. ಸಣ್ಣ ಸಮುದಾಯಗಳಿಗೆ ನ್ಯಾಯಯುತ ಮೀಸಲಾತಿ ಹಾಗೂ ಸಮಾನ ಅವಕಾಶ ಕಲ್ಪಿಸಲು ಸರ್ಕಾರ ಸ್ಪಷ್ಟ ನೀತಿ ರೂಪಿಸಬೇಕು” ಎಂದು ದೇವಿಂದ್ರ ದೇಸಾಯಿ ಕಲ್ಲೂರು ಹೇಳಿದರು.
ಸಣ್ಣ ಸಮುದಾಯಗಳ ಬೇಡಿಕೆಗಳನ್ನು ಸರ್ಕಾರಗಳು ನಿರ್ಲಕ್ಷಿಸಿದರೆ, ಅವರ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕ ಹಾಗೂ ಕಾನೂನುಬದ್ಧ ರೀತಿಯಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದು ಅನಿವಾರ್ಯವಾಗಲಿದೆ ಎಂದು ಅವರು ಎಚ್ಚರಿಸಿದರು.































