Home ಮುಖಪುಟ ಸುದ್ದಿ ಇಸ್ಲಾಂ ಧರ್ಮ ಶ್ರೇಷ್ಠ: ಉಲ್ಟಾ ಹೊಡೆದ ರಾಯರೆಡ್ಡಿ

ಇಸ್ಲಾಂ ಧರ್ಮ ಶ್ರೇಷ್ಠ: ಉಲ್ಟಾ ಹೊಡೆದ ರಾಯರೆಡ್ಡಿ

ಕೊಪ್ಪಳ.ಆ.೩೧-ಎಲ್ಲಾ ಧರ್ಮಗಳಿಗಿಂತ ಇಸ್ಲಾಂ ಧರ್ಮ ಶ್ರೇಷ್ಠ ಎಂಬ ತಮ್ಮ ಹಿಂದಿನ ಹೇಳಿಕೆ ಬಗ್ಗೆ ಉಲ್ಟಾ ಹೊಡೆದಿರುವ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಬಸವಣ್ಣನವರ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ವಚನವನ್ನು ಉಲ್ಲೇಖಿಸುವ ಮೂಲಕ ಶರಣ ತತ್ವವೇ ಜಗತ್ತಿನಲ್ಲಿ ಅತ್ಯುತ್ತಮ ಎಂದು ಹೇಳಿದ್ದಾರೆ.

ಎಲ್ಲಾ ಧರ್ಮಗಳಿಗಿಂತ ಇಸ್ಲಾಂ ಧರ್ಮ ಶ್ರೇಷ್ಠ ಎಂಬ ತಮ್ಮ ಇತ್ತೀಚಿನ ಹಿಂದಿನ ಹೇಳಿಕೆ ಬಗ್ಗೆ ಯಲಬುರ್ಗಾದಲ್ಲಿ ಸುದ್ದಿಗಾರರಿಗೆ ಸ್ಪಷ್ಟನೆ ನೀಡಿರುವ ಸಚಿವ ಬಸವರಾಜ ರಾಯರೆಡ್ಡಿ,ನಾನು ಎಲ್ಲ ಧರ್ಮಗಳೂ ಶ್ರೇಷ್ಠ ಎಂದೇ ಹೇಳಿದ್ದೇನೆ, ಇದರಲ್ಲಿ ತಪ್ಪೇನಿದೆ? ಇಸ್ಲಾಂನಲ್ಲಿ ಶ್ರೇಷ್ಠ ವಿಚಾರಗಳಿವೆ ಎಂದಿದ್ದೇನೆಯೇ ಹೊರತು, ಬೇರೆ ಧರ್ಮಗಳು ಕಡೆ ಎಂದು ಹೇಳಿಲ್ಲ. ಯಾವುದೇ ಕಾರ್ಯಕ್ರಮಕ್ಕೆ ಹೋದಾಗ ಸಾಂದರ್ಭಿಕವಾಗಿ ಮಾತನಾಡುತ್ತೇವೆ ಎಂದಿದ್ದಾರೆ.

ನಾನು ಇಸ್ಲಾಂ, ಕ್ರೈಸ್ತ, ಯಹೂದಿ ಸೇರಿದಂತೆ ಎಲ್ಲಾ ಧರ್ಮಗಳ ಇತಿಹಾಸ ಮತ್ತು ವಿಚಾರಗಳನ್ನು ಅಧ್ಯಯನ ಮಾಡುತ್ತೇನೆ. ಏಸು ಕ್ರಿಸ್ತನ ಸಮಾಧಿಗೂ ಹೋಗಿ ಬಂದಿದ್ದೇನೆ. ಆದರೆ ನಾನು ಯಾವುದೇ ಒಂದು ಧರ್ಮದ ಫಾಲೋವರ್ ಅಲ್ಲ. ನನಗೆ ಯಾವುದೇ ಧರ್ಮವಿಲ್ಲ. ಮಠ-ಮಾನ್ಯಗಳಿಗೆ ಸಾಮಾನ್ಯವಾಗಿ ಹೋಗುವುದಿಲ್ಲ, ಪತ್ನಿ-ಮಕ್ಕಳು ಅಥವಾ ಜೊತೆಗಿರುವವರ ಒತ್ತಾಯಕ್ಕೆ ಹೋಗುತ್ತೇನೆ ಎಂದರು.

ಹಿಂದೂ ಎಂಬುದು ಸಿಂಧೂ ನದಿ ಭಾಗದಿಂದ ಬಂದ ಹೆಸರು. ಜಗತ್ತಿನ ಬಹುತೇಕ ಧರ್ಮಗಳಿಗೆ ಸಂಸ್ಥಾಪಕರಿದ್ದಾರೆ. ಆದರೆ ಹಿಂದೂ ಧರ್ಮಕ್ಕೆ ನಿರ್ದಿಷ್ಟ ಸಂಸ್ಥಾಪಕರಿಲ್ಲ. ಇದು ಜನರಿಂದಲೇ ರೂಪಿತವಾಗಿರುವಂತದ್ದು. ಇನ್ನು ಹಜ್‌ಗೆ ಹೋಗುವ ಆಸೆ ವ್ಯಕ್ತಪಡಿಸಿದ್ದೆ, ಆದರೆ ಅಲ್ಲಿಗೆ ಹೋಗಲು ಸಾಧ್ಯವಿಲ್ಲ ಎಂಬುದು ಗೊತ್ತು ಎಂದು ಹೇಳಿದರು.