Home ಮುಖಪುಟ ಸುದ್ದಿ ೩೧ ಬಾಂಗ್ಲಾ ಅಕ್ರಮನಿವಾಸಿಗಳ ಗಡಿಪಾರು

೩೧ ಬಾಂಗ್ಲಾ ಅಕ್ರಮನಿವಾಸಿಗಳ ಗಡಿಪಾರು

ಬೆಂಗಳೂರು.ಆ೩೧: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ೩೧ ಬಾಂಗ್ಲಾದೇಶಿ ಪ್ರಜೆಗಳನ್ನು ಪೊಲೀಸರು ಗಡಿಪಾರು ಪ್ರಕ್ರಿಯೆಗಾಗಿ ಪಶ್ಚಿಮ ಬಂಗಾಳದ ಮಾಲ್ಡಾಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಬೆಂಗಳೂರಿನ ವಿವಿಧ ೧೦ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಶಕ್ಕೆ ಪಡೆಯಲಾಗಿದ್ದ ಈ ೩೧ ಅಕ್ರಮ ವಲಸಿಗರನ್ನು, ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ರೈಲ್ವೆ ನಿಲ್ದಾಣದಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ರೈಲಿನ ಮೂಲಕ ಕಳುಹಿಸಲಾಗಿದೆ.

ಪ್ರಯಾಣದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ೨೦ ಪೊಲೀಸ್ ಸಿಬ್ಬಂದಿಯ ತಂಡ ಈ ೩೧ ಜನರನ್ನು ಕರೆದೊಯ್ಯುತ್ತಿದೆ. ಈ ತಂಡ ಪಶ್ಚಿಮ ಬಂಗಾಳದ ಮಾಲ್ಡಾ ರೈಲು ನಿಲ್ದಾಣ ತಲುಪುವ ನಿರೀಕ್ಷೆಯಿದೆ. ಅಲ್ಲಿ ತಲುಪಿದ ನಂತರ ಅಧಿಕೃತ ಗಡಿಪಾರು ಪ್ರಕ್ರಿಯೆಯ ಮುಂದಿನ ಹಂತಗಳನ್ನು ಅಧಿಕಾರಿಗಳು ಪೂರ್ಣಗೊಳಿಸಲಿದ್ದಾರೆ.

ಬೆಂಗಳೂರು ನಗರ ಪೊಲೀಸರು ಆರಂಭಿಸಿರುವ ’ಆಪರೇಷನ್ ಮುಕ್ತ’ ಹೆಸರಿನ ವಿಶೇಷ ಕಾರ್ಯಾಚರಣೆಯಡಿ ಈ ಕ್ರಮ ಕೈಗೊಳ್ಳಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಮತ್ತು ವೈಟ್‌ಫೀಲ್ಡ್ ವಿಭಾಗಗಳು ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ೫೦೦ಕ್ಕೂ ಹೆಚ್ಚು ಸಿಬ್ಬಂದಿ ಒಳಗೊಂಡ ೨೩ ವಿಶೇಷ ತಂಡಗಳು ಸುಮಾರು ೩೦ಕ್ಕೂ ಹೆಚ್ಚು ತಾತ್ಕಾಲಿಕ ಶೆಡ್‌ಗಳು ಹಾಗೂ ನಿರ್ಮಾಣ ಹಂತದ ಪ್ರದೇಶಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದವು.

ಈ ಕಾರ್ಯಾಚರಣೆಯಲ್ಲಿ ಒಟ್ಟು ೧,೯೦೦ಕ್ಕೂ ಹೆಚ್ಚು ಶಂಕಿತ ವ್ಯಕ್ತಿಗಳನ್ನು ವಶಕ್ಕೆ ಪಡೆದು ಆಧಾರ್, ಪಾಸ್‌ಪೋರ್ಟ್ ಹಾಗೂ ವೀಸಾ ದಾಖಲೆಗಳನ್ನು ತನಿಖೆ ಮಾಡಲಾಗಿತ್ತು. ಇದರಲ್ಲಿ ಬೆಗೂರು, ಪರಪ್ಪನ ಅಗ್ರಹಾರ ಮತ್ತು ವೈಟ್‌ಫೀಲ್ಡ್ ವ್ಯಾಪ್ತಿಯಲ್ಲಿ ಪತ್ತೆಯಾದ ಬಾಂಗ್ಲಾ ಪ್ರಜೆಗಳನ್ನು ಗಡಿಪಾರು ಮಾಡಲು ಆದೇಶಿಸಲಾಗಿತ್ತು. ಅಕ್ರಮ ವಲಸಿಗರಿಗೆ ಸೂಕ್ತ ತನಿಖೆ ಇಲ್ಲದೆ ಬಾಡಿಗೆಗೆ ಶೆಡ್ ಅಥವಾ ಮನೆ ನೀಡುವ ಮಾಲೀಕರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ಎಂ. ನಾರಾಯಣ್ ಮತ್ತು ವೈಟ್‌ಫೀಲ್ಡ್ ಡಿಸಿಪಿ ಸೈದುಲು ಅದಾವತ್ ಎಚ್ಚರಿಸಿದ್ದಾರೆ.

ಈಗಾಗಲೇ ಈ ಸಂಬಂಧ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, “ನಗರದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಶಂಕಿತ ವ್ಯಕ್ತಿಗಳ ಬಗ್ಗೆ ಮಾಹಿತಿ ಇದ್ದರೆ ಸಾರ್ವಜನಿಕರು ಪೊಲೀಸರಿಗೆ ನೀಡಬೇಕು. ಆದರೆ, ಯಾವುದೇ ಕಾರಣಕ್ಕೂ ಸಾರ್ವಜನಿಕರು ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ವದಂತಿ ಹಬ್ಬಿಸಬಾರದು” ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, “ನಗರದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಶಂಕಿತ ವ್ಯಕ್ತಿಗಳ ಬಗ್ಗೆ ಮಾಹಿತಿ ಇದ್ದರೆ ಸಾರ್ವಜನಿಕರು ಪೊಲೀಸರಿಗೆ ನೀಡಬೇಕು” ಎಂದು ಮನವಿ ಮಾಡಿದ್ದಾರೆ. ಅದೇ ಸಮಯದಲ್ಲಿ, ಸಾರ್ವಜನಿಕರು ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಮತ್ತು ಯಾವುದೇ ಮಾಹಿತಿ ಇದ್ದರೂ ಕಾನೂನು ಚೌಕಟ್ಟಿನಲ್ಲೇ ಪೊಲೀಸರಿಗೆ ನೀಡಬೇಕು ಎಂದು ಎಚ್ಚರಿಸಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಎಂ. ನಾರಾಯಣ್ ಅವರು ಮಾತನಾಡಿ, ವಶಕ್ಕೆ ಪಡೆಯಲಾದ ೩೧ ಜನರನ್ನು ಮಾಲ್ಡಾಕ್ಕೆ ಕರೆದೊಯ್ಯಲಾಗುತ್ತಿದ್ದು, ಅಲ್ಲಿ ಗಡಿಪಾರು ನಿಯಮಾವಳಿಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.