Home Lead News ಪಟ್ಟು ಬಿಡದ ವಿಪಕ್ಷಗಳು

ಪಟ್ಟು ಬಿಡದ ವಿಪಕ್ಷಗಳು

ಬೆಂಗಳೂರು, ಆ. ೨೦- ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಸದನದಲ್ಲಿ ಹೋರಾಟ ನಡೆಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ೪ನೇ ದಿನವಾದ ಇಂದೂ ಸಹ ಪ್ರತಿಭಟನೆ ಮುಂದುವರೆಸಿದ್ದರಿಂದ ಸದನದಲ್ಲಿ ಸುಗಮ ಕಲಾಪಕ್ಕೆ ಅಡ್ಡಿಯಾಗಿದೆ.


ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡಬೇಕು. ಇಲ್ಲವೆ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಪಕ್ಷಗಳು ಸದನದಲ್ಲಿ ಹೋರಾಟ ನಡೆಸಿದ್ದು ಇಂದೂ ಸಹ ಸದನ ಆರಂಭವಾಗುತ್ತಿದ್ದಂತೆಯೇ ಪ್ರತಿ ಪಕ್ಷಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ನಾಗೇಂದ್ರ ಅವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದ್ದರಿಂದ ಇಡೀ ಕಲಾಪ ಗೊಂದಲದ ಗೂಡಾಯಿತು.


ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ್ ಅವರು ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಿ ಎಂದು ವಿಪಕ್ಷ ನಾಯಕರಲ್ಲಿ ಮನವಿ ಮಾಡಿದರಾರದೂ ಅದನ್ನು ಲೆಕ್ಕಿಸದೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗತೊಡರಿದರು. ಇದರಿಂದ ಸದನದಲ್ಲಿ ಗದ್ದಲ ತಾರಕಕ್ಕೇರಿತು.


ಪ್ರತಿ ಪಕ್ಷಗಳ ಘೋಷಣೆ ನಡುವೆಯೇ ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ಸದನದಲ್ಲಿ ನಿನ್ನೆ ಕಂದಾಯ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ನಾಗೇಶ್ ಅಪರಾಧಿ ಅಲ್ಲ ಎಂದು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ನಾಗೇಂದ್ರ ಅವರ ವಿರುದ್ಧ ೨೪ ಪ್ರಕರಣಗಳಿವೆ ಎಂದು ಸಿಬಿಐ ಉಲ್ಲೇಖಿಸಿರುವ ಆರೋಪ ಪಟ್ಟಿಯನ್ನು ಸದನದಲ್ಲಿ ಪ್ರದರ್ಶಿಸಿದರು.


ಇಂತಹ ಕಳಂಕಿತ ಶಾಸಕರನ್ನು ಸಂಪುಟದಲ್ಲಿ ಇಟ್ಟುಕೊಂಡಿರುವುದು ಸರಿಯಲ್ಲ ಎಂದರು.


ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ ಅವರು ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ತೆಗೆದಿದ್ದರು. ಡಿ.ಕೆ. ಶಿವಕಮಾರ್ ಅವರು ಮತ್ತೆ ಸಂಪುಟಕ್ಕೆ ಕರೆ ತಂದಿದ್ದಾರೆ. ಕಳಂಕಿತ ನಾಗೇಂದ್ರ ಅವರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.


ಒಬ್ಬ ನಾಗೇಂದ್ರನಿಂದ ೨೨೪ ಸದಸ್ಯರ ಹಕ್ಕಿಗೆ ಚ್ಯುತಿ ತರುವುದು ಸರಿಯಲ್ಲ. ಕೋಟ್ಯಂತರ ದಲಿತರಿಗೆ ಸೇರಬೇಕಾದ ಹಣವನ್ನು ಲೂಟಿ ಮಾಡಿದ್ದಾರೆ. ಇಂತಹವರು ಸಂಪುಟದಲ್ಲಿ ಇರಬಾರದು ಎಂದು ಅಶೋಕ್ ಹೇಳಿದರು.


ಎಲ್ಲವನ್ನೂ ಚರ್ಚೆ ಮೋಡೋಣ, ದಾಖಲೆ ಕೊಡಿ ಎಂದು ಸಭಾಧ್ಯಕ್ಷರು ಹೇಳಿದರಾದರೂ ಅದಕ್ಕೆ ವಿಪಕ್ಷಗಳು ಸೊಪ್ಪು ಹಾಕದೆ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ವಾಲ್ಮೀಕಿ ಎಲ್ಲಿ ಹೋಗಿದೆ, ಎಲ್ಲಿ ಹೋಗಿದೆ. ವಾಲ್ಮೀಕಿ ಹಣ ರಾಹುಲ್‌ಗಾಂಧಿ ಮನೆಗೋಗಿದೆ, ರಾಹುಲ್‌ಗಾಂಧಿ ಮನೆಗೋಗಿದೆ ಎಂದು ಕೂಗತೊಡಗಿದರು. ಇದರಿಂದ ಸದನದಲ್ಲಿ ಗದ್ದಲ ಮತ್ತಷ್ಟು ಜೋರಾಯಿತು.
ಈ ಗದಲ್ಲದಲ್ಲೇ ಸಭಾಧ್ಯಕ್ಷರು ಪ್ರಶ್ನೋತ್ತರ, ಶೂನ್ಯವೇಳೆ ಕಲಾಪವನ್ನು ನಡೆಸಿ, ನಂತರ ಸದನವನ್ನು ಅರ್ಧ ಗಂಟೆ ಕಾಲ ಮುಂದೂಡಿದರು.

ಕಪ್ಪುಪಟ್ಟಿ ಧರಿಸಿದ ಬಿಜೆಪಿ ಸದಸ್ಯರು
ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಕಳೆದ ಮೂರು ದಿನಗಳಿಂದ ಹೋರಾಟ ನಡೆಸಿರುವ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ನಾಲ್ಕನೇ ದಿನವಾದ ಇಂದೂ ತೋಳಿಗೆ ಕಪ್ಪುಪಟ್ಟಿ ಧರಿಸಿ ಸದನಕ್ಕೆ ಆಗಮಿಸಿದರು. ಭಿತ್ತಿಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಸಚಿವ ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದರು.


ಪ್ರದೀಪ್ ಈಶ್ವರ್ ಮಾತಿನ ಚಕಮಕಿ


ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗುತ್ತಾ ಆಡಳಿತ ಪಕ್ಷದ ಹಿಂದಿನ ಸಾಲಿನಿಂದ ಮುಂದಿನ ಸಾಲಿಗೆ ಆಗಮಿಸಿದ ಪ್ರದೀಪ್ ಈಶ್ವರ್, ಬಿಜೆಪಿ ಸದಸ್ಯರ ಜತೆ ನೇರ ಮಾತಿನ ಚಕಮಕಿ ನಡೆಸಿ, ಬಿಜೆಪಿಯವರ ಘೋಷಣೆಗೆ ವಿರುದ್ಧವಾಗಿ ಪ್ರತಿ ಘೋಷಣೆ ಕೂಗಿ, ಬಿಜೆಪಿ ಚೋರ್ ಹೈ ಎಂಬ ಪ್ರತಿ ಘೋಷಣೆಗಳನ್ನು ಕೂಗಿದರು.


ಈ ಹಂತದಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರು, ಪ್ರದೀಪ್ ಈಶ್ವರ್ ಬಳಿ ಹೋಗಿ ಅವರ ಆಸನಕ್ಕೆ ತೆರಳುವಂತೆ ಹೇಳಿದರೂ ಅದಕ್ಕೆ ಕಿವಿಗೊಡದ ಪ್ರದೀಪ್ ಈಶ್ವರ್, ಬಿಜೆಪಿ ವಿರುದ್ಧ ಮುಂದಿನ ಸಾಲಿನಲ್ಲಿ ನಿಂತು ಘೋಷಣೆಗಳನ್ನು ಕೂಗುವುದನ್ನು ಮುಂದುವರೆಸಿದರು.


ಕಾಂಗ್ರೆಸ್ ಸದಸ್ಯ ರವಿ ಗಣಿಗ ಅವರು ಎದ್ದು ಬಂದು ಪ್ರದೀಪ್ ಈಶ್ವರ್ ಅವರನ್ನು ಅವರ ಆಸನದತ್ತ ಕರೆದೊಯ್ಯಲು ಯತ್ನಿಸಿದರಾದರೂ ಪ್ರದೀಪ್ ಈಶ್ವರ್ ಅವರಿಂದಲೂ ನುಣುಚಿಕೊಂಡು ಬಿಜೆಪಿ ಸದಸ್ಯರ ಘೋಷಣೆಗಳಿಗೆ ಪ್ರತಿ ಘೋಷಣೆ ಕೂಗುತ್ತಲೆ ಇದ್ದರು


ಈ ಹಂತದಲ್ಲಿ ಸಚಿವ ಬೈರತಿ ಸುರೇಶ್ ಎದ್ದು ಬಂದು ಪ್ರದೀಪ್ ಈಶ್ವರ್ ಅವರನ್ನು ಅವರ ಆಸನದತ್ತ ಕರೆದೊಯ್ದರು.


ಇಷ್ಟೆಲ್ಲಾ ಆದರೂ ಬಿಜೆಪಿ ಸದಸ್ಯರು ಪ್ರದೀಪ್ ಈಶ್ವರ್ ರವರನ್ನು ಕಿಚಾಯಿಸಿ ಘೋಷಣೆಗಳನ್ನು ಕೂಗಿದರು.