
ಬೆಂಗಳೂರು, ಆ. ೧೭- ರಾಜ್ಯದ ಯೋಜನಾ ಮತ್ತು ಸಾಂಖೀಕ ಸಚಿವ ಬಿ. ನಾಗೇಂದ್ರ ಅವರು ಕಳಂಕಿತ ಸಚಿವರಾಗಿದ್ದಾರೆ. ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಇಲ್ಲವೆ ಅವರನ್ನು ಸಂಪುಟದಿಂದ ವಜಾ ಮಾಡಿ ಎಂದು ವಿಧಾನಸಭೆ ಮತ್ತು ವಿಧಾನಪರಿಷತ್ನಲ್ಲಿ ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದು, ಸದನದಲ್ಲಿ ಗದ್ದಲ, ಕಾವೇರಿದ ವಾತಾವರಣಕ್ಕೆ ಕಾರಣವಾಗಿ ಸದನವನ್ನು ಮುಂದೂಡುವಂತಾಯಿತು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಿ. ನಾಗೇಂದ್ರ ಅವರು ಭ್ರಷ್ಟಾಚಾರ ನಡೆಸಿದ ಕಾರಣ ಅವರನ್ನು ಸಂಪುಟದಿಂದ ಈ ಹಿಂದೆ ತೆಗೆದು ಹಾಕಲಾಗಿತ್ತು. ನಿಗಮದಲ್ಲಿ ೮೯ ಕೋಟಿ ರೂ. ದುರುಪಯೋಗವಾಗಿದೆ ಎಂದು ಆಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಸದನದಲ್ಲಿ ಹೇಳಿದ್ದರು. ಸದನ ನಡೆಯುತ್ತಿರುವಾಗಲೇ ನಾಗೇಂದ್ರ ಅವರ ರಾಜೀನಾಮೆಯನ್ನು ಈ ಹಿಂದೆ ಪಡೆಯಲಾಗಿತ್ತು. ಈಗ ಮತ್ತೆ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದೀರೀ. ಇದು ಸರಿಯಲ್ಲ. ಇದು ಸದನಕ್ಕೆ ಮಾಡಿದ ಅವಮಾನ. ಅವರು ರಾಜೀನಾಮೆ ಕೊಡಲೇಬೇಕು. ಇಲ್ಲದಿದ್ದರೆ ಸದನದ ಕಲಾಪಗಳನ್ನು ನಡೆಸಲು ಬಿಡುವುದಿಲ್ಲ ಎಂದು ಜೆಡಿಎಸ್-ಬಿಜೆಪಿ ನಾಯಕರುಗಳು ಒಂದಾಗಿ ಉಭಯ ಸದನಗಳಲ್ಲೂ ಹೇಳಿ, ಸಚಿವ ನಾಗೇಂದ್ರನ ರಾಜೀನಾಮೆಗೆ ಪಟ್ಟು ಹಿಡಿದರು.
ಈ ಹಂತದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಮಾತಿನ ಚಕಮ,ಕಿ ವಾಗ್ಯುದ್ಧ ನಡೆದು ಸದನದಲ್ಲಿ ಗದ್ದಲ, ಕೋಲಾಹಲದ ವಾತಾವರಣ ರೂಪುಗೊಂಡಿತು. ಆಗ ಸದನವನ್ನು ಮುಂದೂಡಲಾಯಿತು.
ವಿಧಾನಸಭೆಯಲ್ಲಿಂದು ಸದನ ಆರಂಭವಾಗುತ್ತಿದ್ದಂತೆಯೇ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಳ್ಳಲು ಸಭಾಧ್ಯಕ್ಷ ಜಿ.ಎಸ್. ಪಾಟೀಲ್ ಮುಂದಾದಾಗ, ಪ್ರತಿಪಕ್ಷ ನಾಯಕ ಆರ್. ಅಶೋಕ್ ಎದ್ದು ನಿಂತು, ಹನೂರು ಅರಣ್ಯದಲ್ಲಿ ಮೂವರನ್ನು ಹತ್ಯೆ ಮಾಡಲಾಗಿದೆ. ಈ ಬಗ್ಗೆ ಸರ್ಕಾರ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದರು.
ಸರ್ಕಾರದಿಂದ ಹನೂರು ಘಟನೆ ಬಗ್ಗೆ ಅರಣ್ಯ ಸಚಿವರು ಹೇಳಿಕೆ ನೀಡಿದ ನಂತರ ಸಭಾಧ್ಯಕ್ಷರು ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡಾಗ ಎದ್ದು ನಿಂತ ಬಿಜೆಪಿಯ ಸುನೀಲ್ಕುಮಾರ್, ಸಭಾಧ್ಯಕ್ಷರೇ ಸದನದಲ್ಲಿ ಕಳಂಕಿತ ಸಚಿವರಿದ್ದಾರೆ. ಅವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆಯಲು ನಾವು ಬಯಸಲ್ಲ. ಸಚಿವ ನಾಗೇಂದ್ರ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಈ ಹಿಂದೆ ಭ್ರಷ್ಟಾಚಾರ ನಡೆಸಿದ್ದಾರೆ. ಆಗ ಅವರ ರಾಜೀನಾಮೆ ಪಡೆದು ಈಗ ಮತ್ತೆ ಅವರನ್ನು ಸಚಿವರನ್ನಾಗಿ ಮಾಡಲಾಗಿದೆ. ಇದು ಸರಿಯಲ್ಲ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಧ್ವನಿಗೂಡಿಸಿದ ವಿಪಕ್ಷ ನಾಯಕ ಆರ್. ಅಶೋಕ್, ಈ ಹಿಂದೆ ಸದನ ನಡೆಯುತ್ತಿರುವಾಗಲೇ ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಸಂಬಂಧ ನಾಗೇಂದ್ರ ರಾಜೀನಾಮೆ ಪಡೆಯಲಾಗಿತ್ತು. ಹಣ ದುರ್ಬಳಕೆಯಾಗಿರುವುದನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲೇ ಹೇಳಿದ್ದರು. ಹೀಗಿರುವಾಗ ನಾಗೇಂದ್ರ ಅವರನ್ನು ಮತ್ತೆ ಸಚಿವರನ್ನಾಗಿಸಿರುವುದು ಸರಿಯಲ್ಲ. ಕೂಡಲೇ ನಾಗೇಂದ್ರ ರಾಜೀನಾಮೆ ನೀಡಬೇಕು ಇಲ್ಲವೆ ಮುಖ್ಯಮಂತ್ರಿಗಳು ಅವರನ್ನು ಸಂಪುಟದಿಂದ ವಜಾ ಮಾಡಬೇಕು.
ಅಲ್ಲಿಯವರೆಗೂ ಸದನ ಕಲಾಪಗಳನ್ನು ನಡೆಸಲು ಅವಕಾಶ ನೀಡಲ್ಲ ಎಂದು ಹೇಳಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ,. ಸಚಿವ ನಾಗೇಂದ್ರ ಅವರು ನಂಬರ್ ಒನ್ ಆರೋಪಿಯಾಗಿದ್ದಾರೆ. ಜತೆಗೆ ಅವರ ಮೇಲೆ ಇನ್ನೂ ಎರಡು ಆರೋಪ ಪಟ್ಟಿಗಳಿವೆ. ಹೀಗಿರುವಾಗ ಇಂತಹವರನ್ನು ಸಚಿವರನ್ನಾಗಿಸಿರುವುದು ಸರಿಯಲ್ಲ. ಅವರ ರಾಜೀನಾಮೆ ಪಡೆಯಿರಿ, ಇಲ್ಲವೆ ವಜಾ ಮಾಡಿ ಎಂದು ಅಶೋಕ್ ಏರಿದ ಧ್ವನಿಯಲ್ಲಿ ಹೇಳಿದರು.
ಇದಕ್ಕೆ ಧ್ವನಿಗೂಡಿಸಿದ ಬಿಜೆಪಿಯ ಅಶ್ವತ್ಥ್ನಾರಾಯಣ, ಕಳಂಕಿತರನ್ನು ಸಚಿವರನ್ನಾಗಿಸಿದ್ದೀರಿ, ಅವರನ್ನು ವಜಾ ಮಾಡಿ ಅಲ್ಲಿಯವರೆಗೂ ಕಲಾಪ ನಡೆಯಬಾರದು ಎಂದು ಆಗ್ರಹಿಸಿದರು.
ಈ ಹಂತದಲ್ಲಿ ಬಿಜೆಪಿ ಮತ್ತು ಜೆಡಿಎಸ್ನ ಎಲ್ಲ ಸದಸ್ಯರು ಒಮ್ಮೆಗೆ ಎದ್ದು ನಿಂತು ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗತೊಡಗಿದರು. ರಾಜೀನಾಮೆ ರಾಜೀನಾಮೆ ನಾಗೇಂದ್ರ ರಾಜೀನಾಮೆ ನೀಡಲಿ, ನಾಗೇಂದ್ರ ವಜಾ ಮಾಡಿ, ಲೂಟಿ ಲೂಟಿ ಕೋಟಿ ಕೋಟಿ ಲೂಟಿ ಎಂದು ಏರಿದ ಧ್ವನಿಯಲ್ಲಿ ಘೋಷಣೆಗಳನ್ನು ಕೂಗತೊಡಗಿದರು.
ಆಗ ಸಭಾಧ್ಯಕ್ಷ ಜಿ.ಎಸ್., ಪಾಟೀಲ್ ಅವರು ನೋಟಿಸ್ ನೀಡದೆ ಈ ರೀತಿ ವಿಷಯ ಪ್ರಸ್ತಾಪಿಸುವುದು ಸರಿಯಲ್ಲ. ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರೂ ಅದಕ್ಕೆ ಪ್ರತಿಪಕ್ಷಗಳು ಒಪ್ಪಲಿಲ್ಲ.
ಸಚಿವ ಕೃಷ್ಣಬೈರೇಗೌಡ ಅವರು ಎದ್ದು ನಿಂತು, ವಿಪಕ್ಷಗಳ ನಡವಳಿಕೆ ಸರಿಯಲ್ಲ ಗೂಂಡಾಗಿರಿ ಮಾಡುತ್ತಿದ್ದಾರೆ. ನೋಟಿಸ್ ನೀಡದೆ ವಿಷಯ ಪ್ರಸ್ತಾಪಿಸಿ ಸದನದ ನಿಯಮಾವಳಿಗಳ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರಾದರೂ ಪ್ರತಿಪಕ್ಷ ಸದಸ್ಯರು ಘೋಷಣೆ ಕೂಗುವುದನ್ನು ಮುಂದುವರೆಸಿದರು. ಇದರಿಂದ ಸದನದಲ್ಲಿ ಗದ್ದಲ ತಾರಕಕ್ಕೇರಿ ಸಭಾಧ್ಯಕ್ಷ ಪಾಟೀಲ್ ಅವರು ಸದನವನ್ನು ಅರ್ಧ ಗಂಟೆ ಕಾಲ ಮುಂದೂಡಿದರು.
ಮೇಲ್ಮನೆಯಲ್ಲಿ ಬಿಜೆಪಿ ಪ್ರತಿಭಟನೆ: ಕಲಾಪಕ್ಕೆ ಅಡ್ಡಿ
ಬಿ.ನಾಗೇಂದ್ರ ಸಚಿವರಾಗಿರುವವರೆಗೂ ಅಧಿವೇಶನ ನಡೆಯಲು ಅವಕಾಶ ನೀಡುವುದಿಲ್ಲ. ಅವರ ರಾಜೀನಾಮೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡಲೇ ಪಡೆಯಲೇಬೇಕು ಎಂದು ಒತ್ತಾಯಿಸಿ ಮೇಲ್ಮನೆಯಲ್ಲಿ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿ ಕೂಗುತ್ತಿದ್ದ ಘೋಷಣೆಗಳ ಮಧ್ಯೆ ಪ್ರಶ್ನೋತ್ತರ ಇನ್ನಿತರ ಕಲಾಪಗಳನ್ನು ನಡೆಸಿದ ಸಭಾಪತಿ ಸಲೀಂ ಅಹಮದ್ ಅವರು ಸದನವನ್ನು ಮುಂದೂಡಿದರು.
ಸದನದ ಕಲಾಪ ಆರಂಭಗೊಂಡ ಕೂಡಲೇ ಪ್ರಶ್ನೋತ್ತರ ಅವಧಿಯನ್ನು ಸಭಾಪತಿ ಸಲೀಂ ಅಹಮದ್ ಅವರು ಕೈಗೊಳ್ಳಲು ಮುಂದಾದಾಗ ಹನೂರು ತಾಲ್ಲೂಕಿನ ಕಾವೇರಿ ವನ್ಯಧಾಮದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣ ಪ್ರಸ್ತಾಪಿಸಿದರು ಅದಕ್ಕೆ ಸಚಿವರಿಂದ ಬಳಿಕ ಉತ್ತರ ಕೊಡಿಸುವುದಾಗಿ ನೀಡಿದ ಭರವಸೆ ಬಳಿಕ ೧೦ ನಿಮಿಷ ಮುಂದೂಡಿದ ಬಳಿಕ ಆರಂಭಗೊಂಡ ಕಲಾಪದಲ್ಲಿ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.
ನಾಗೇಂದ್ರ ವಿರುದ್ಧ ತನಿಖೆ ನಡೆದು, ಆರೋಪ ಪಟ್ಟಿಯೂ ಸಲ್ಲಿಕೆಯಾಗಿದೆ. ಹೀಗಿದ್ದೂ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದು ಏಕೆ? ಸರ್ಕಾರದ ಮೇಲೆ ಅಂತಹ ಒತ್ತಡ ಏನಿತ್ತು. ಈ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.
ಇದಕ್ಕೆ ಸಭಾ ನಾಯಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಹನೂರು ಪ್ರಕರಣದ ಉತ್ತರ ಚರ್ಚೆ ಬೇಡವೇ ಸದನ ನಡೆಯಲು ಬಿಡಿ ಎಲ್ಲದಕ್ಕೂ ಸರ್ಕಾರ ಚರ್ಚೆಗೆ ಬರಲಿದೆ ಎಂದರು.
ಸಭಾಪತಿ ಸಲೀಂ ಅಹ್ಮದ್ ಅವರು, ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ನಡೆದ ಶೂಟೌಟ್ ಘಟನೆ ಸಂಬಂಧಿಸಿದಂತೆ ಈಗಾಗಲೇ ಸಭೆ ನಡೆಸಲಾಗಿದೆ.ಅಲ್ಲಿ ವಿಪಕ್ಷ ನಾಯಕರು ಪ್ರಶ್ನೋತ್ತರ ಕಲಾಪ ನಡೆಸಲು ಒಪ್ಪಿದ್ದಾರೆ.
ಆದರೇ ಈಗ ಬೇರೆ ವಿಚಾರ ಎತ್ತಿಕೊಂಡು ಕೂರುವುದು ಸರಿಯಲ್ಲ ಎಂದರು. ಆದರೂ, ವಿಪಕ್ಷ ಸದಸ್ಯರು, ಬಿ.ನಾಗೇಂದ್ರ ಸಚಿವರಾಗಿರುವವರೆಗೂ ಅಧಿವೇಶನ ನಡೆಯಲು ಅವಕಾಶ ನೀಡುವುದಿಲ್ಲ. ಅವರ ರಾಜೀನಾಮೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡಲೇ ಪಡೆಯಲೇಬೇಕು ಎಂದು ಪಟ್ಟು ಹಿಡಿದು ಘೋಷಣೆ ಕೂಗಿದರು.
ಈ ಹಂತದಲ್ಲಿ ಪೀಠದಿಂದ ಎದ್ದು ನಿಂತ ಸಭಾಪತಿ ಸಲೀಂ ಅಹ್ಮದ್ ಅವರು, ಯಾವುದು ಕಡತಕ್ಕೆ ಹೋಗುವುದಿಲ್ಲ ಎಂದು ಗದ್ದಲದಲ್ಲಿಯೇ ಪ್ರಶ್ನೋತ್ತರ ಪ್ರಕ್ರಿಯೆ ಕೈಗೆತ್ತಿಕೊಂಡರು ಪ್ರಶ್ನೋತ್ತರದ ಅವಧಿಯಲ್ಲಿ ಬಳಿಕ ನಡೆದ ಕಲಾಪದ ವೇಳೆಯೂ ಪ್ರತಿಪಕ್ಷ ಬಿಜೆಪಿ ಜೆಡಿಎಸ್ ಸದಸ್ಯರ ಘೋಷಣೆ ಪ್ರತಿಭಟನೆ ಮುಂದುವರೆದಿದ್ದರಿಂದ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.


































