Home Lead News ಸಾಹುಕಾರ್ ಇಡಿ ವಶಕ್ಕೆ

ಸಾಹುಕಾರ್ ಇಡಿ ವಶಕ್ಕೆ

ಬೆಂಗಳೂರು,ಆ. ೧೮- ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.


ಡಾಲರ್ಸ್ ಕಾಲೋನಿಯಲ್ಲಿರುವ ಹೊಯ್ಸಳ ಡೀಮ್ಸ್ ಅಪಾರ್ಟ್‌ಮೆಂಟ್‌ನಲ್ಲಿರುವ ಅವರ ನಿವಾಸದಲ್ಲಿ ಶಿವಶಂಕರಪ್ಪ ಸಾಹುಕಾರ್ ಅವರನ್ನು ಇಂದು ವಶಕ್ಕೆ ಪಡೆದು ವಿಚಾರಣೆ ನಡೆಸುರುವ ಇಡಿ ಅಧಿಕಾರಿಗಳು ಅವರ ಮೊಬೈಲ್‌ನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.


ಶಿವಶಂಕರಪ್ಪ ಸಾಹುಕಾರ್ ಅವರ ಹೊಯ್ಸಳ ಡೀಮ್ಸ್ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲಾಟ್ ೩೦೪ರ ಮೇಲೆ ಬೆಳಿಗ್ಗೆ ೬ ಗಂಟೆಗೆ ಇಡಿ ಅಧಿಕಾರಿಗಳು ಮನೆ ಮೇಲೆ ದಾಳಿ ಮಾಡಿದ್ದು, ಆ ವೇಳೆ ಶಿವಶಂಕರಪ್ಪ ಪತ್ನಿ ದೇವಸ್ಥಾನಕ್ಕೆ ತೆರಳಿದ್ದರು. ಹೀಗಾಗಿ ಅವರನ್ನು ಹುಡುಕಿಕೊಂಡು ದೇವಸ್ಥಾನ ಬಳಿ ತೆರಳಿದ್ದ ಇಡಿ ಅಧಿಕಾರಿಗಳು ತೆರಳಿದ್ದರೆ, ಮತ್ತೊಂದು ಕಡೆಯಿಂದ ಶಿವಶಂಕರಪ್ಪ ಪತ್ನಿ ಮನೆಗೆ ಬಂದಿದ್ದರು, ದಾಳಿಯ ವೇಳೆ ಶಿವಶಂಕರಪ್ಪ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.


ಕೆಪಿಎಸ್‌ಸಿ ಅಧ್ಯಕ್ಷ ಹುದ್ದೆಯಿಂದ ಅಮಾನತುಗೊಂಡಿರುವ ಶಿವಶಂಕರಪ್ಪ ಎಸ್.ಸಾಹುಕಾರ್ ಅವರ ಜೊತೆ ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ, ಹಗರಣದ ಮಧ್ಯವರ್ತಿಗಳು, ಪರೀಕ್ಷಾ ಪತ್ರಿಕೆಗಳ ಡಿಜಿಟಲ್ ಮೌಲ್ಯಮಾಪನದ ಜವಾಬ್ದಾರಿ ಹೊತ್ತಿದ್ದ ’ಎಡುಟೆಸ್ಟ್ ಸೊಲ್ಯೂಷನ್ಸ್’ ಸಂಸ್ಥೆಯ ಕಚೇರಿ ಹಾಗೂ ಆಯ್ಕೆಯಾದ ಪಶು ವೈದ್ಯಾಧಿಕಾರಿ ಅಭ್ಯರ್ಥಿಗಳ ಮನೆಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.


ಬೆಂಗಳೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ರಾಯಚೂರು, ಕಾರವಾರ, ಕಲಬುರಗಿ, ಬೆಳಗಾವಿ ಸೇರಿದಂತೆ ಅಹಮದಾಬಾದ್‌ನಲ್ಲಿಯೂ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ ಎಂದು ಇ.ಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಸಿಆರ್ ಪಿಎಫ್ ಭದ್ರತೆಯೊಂದಿಗೆ ಕೆಪಿಎಸ್‌ಸಿ ಕಚೇರಿಗೆ ನಾಲ್ಕು ಕಾರುಗಳಲ್ಲಿ ಬಂದ ೧೫ ಕ್ಕೂ ಹೆಚ್ಚು ಮಂದಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ.


ಪಶು ವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಯಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಕೆಪಿಎಸ್‌ಸಿ ಅಧ್ಯಕ್ಷ, ಸದಸ್ಯರ ವಿರುದ್ಧ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಒಟ್ಟು ೪ ಎಫ್‌ಐಆರ್‌ಗಳು ದಾಖಲಾಗಿದ್ದವು.


ಮಧ್ಯವರ್ತಿಗಳು ಹಲವು ಅಭ್ಯರ್ಥಿಗಳಿಗೆ ಕರೆ ಮಾಡಿ ಹುದ್ದೆ ಕೊಡಿಸಲು ಪ್ರತಿಯೊಬ್ಬರಿಂದ ೭೦ ರಿಂದ ೮೦ ಲಕ್ಷ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು. ಇದಕ್ಕೆ ಪುಷ್ಠಿ ನೀಡುವಂತೆ ಮಧ್ಯವರ್ತಿಗಳ ಜೊತೆಗಿನ ಆಡಿಯೋ ಸಂಭಾಷಣೆಯ ರೆಕಾರ್ಡಿಂಗ್‌ಗಳನ್ನು ತನಿಖಾ ಸಂಸ್ಥೆಗೆ ದೂರುದಾರರು ಹಸ್ತಾಂತರಿಸಿದ್ದರು.
ಪ್ರಕರಣದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಒಎಂಆರ್ ಶೀಟ್ ತಿದ್ದುಪಡಿ ಹಾಗೂ ಕೆಪಿಎಸ್‌ಸಿ ಅಧಿಕಾರಿಗಳ ಸಂಬಂಧಿಕರಿಗೆ ಅಂತಿಮ ಆಯ್ಕೆ ಪಟ್ಟಿಯಲ್ಲಿ ಆದ್ಯತೆ ನೀಡಲಾದ ಗಂಭೀರ ಆರೋಪಗಳ ತನಿಖೆ ಮುಂದುವರೆಸಲಾಗಿದೆ.


೨೧ ಸ್ಥಳಗಳ ಮೇಲೆ ದಾಳಿ:


ಬೆಂಗಳೂರು,ಆ.೧೮-ಕೆಪಿಎಸ್‌ಇ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮುಂಜಾನೆಯಿಂದ ಕರ್ನಾಟಕ ಹಾಗೂ ಗುಜರಾತ್‌ನ ಬೃಹತ್ ದಾಳಿ ನಡೆಸಿದ್ದಾರೆ.


ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ಪ್ರತಿಯೊಬ್ಬ ಅಭ್ಯರ್ಥಿಯಿಂದ ೭೦ ರಿಂದ ೮೦ ಲಕ್ಷ ರೂ. ಲಂಚ ಪಡೆದಿರುವುದು, ಉತ್ತರ ಪತ್ರಿಕೆ ತಿದ್ದುಪಡಿ ಮತ್ತು ಕೆಪಿಎಸ್‌ಸಿ ಅಧಿಕಾರಿಗಳ ಸಂಬಂಧಿಕರಿಗೆ ಅಕ್ರಮವಾಗಿ ಹುದ್ದೆ ಕೊಡಿಸಿರುವ ಆರೋಪ ಕೇಳಿಬಂದಿತ್ತು. ಈ ಕುರಿತು ವಿಧಾನಸೌಧ ಠಾಣೆಯಲ್ಲಿ ೪ ಪ್ರತ್ಯೇಕ ಎಫ್ ಐಆರ್ ದಾಖಲಾಗಿದ್ದವು.


ತಮ್ಮ ಪುತ್ರಿಯರ ಅಕ್ರಮ ನೇಮಕಾತಿಗೆ ನೆರವಾದ ಆರೋಪದ ಮೇಲೆ ಶಿವಶಂಕರಪ್ಪ ಸಾಹುಕಾರ್ ಅವರನ್ನು ಜುಲೈ ೧೩ ರಂದು ರಾಜ್ಯಪಾಲರು ಅಮಾನತುಗೊಳಿಸಿದ್ದರು.


ಎಫ್‌ಐಆರ್ ದಾಖಲು:


ಈ ನಡುವೆ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ೪೦೦ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ ಅಮಾನತುಗೊಂಡ ಕೆಪಿಎಸ್‌ಸಿ ಅಧ್ಯಕ್ಷ ಎಸ್. ಶಿವಶಂಕರಪ್ಪ ಸಾಹುಕರ್, ಮಾಜಿ ಕೆಪಿಎಸ್‌ಸಿ ಸದಸ್ಯರು, ಅಧಿಕಾರಿಗಳು ಮತ್ತು ಆಯ್ಕೆಯಾದ ೨೯ ಅಭ್ಯರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.


ಸಂಬಂಧಿಕರಿಗೆ ಹಾಗೂ ಹಣ ನೀಡಿದವರಿಗೆ ಹುದ್ದೆ ನೀಡಲಾಗುತ್ತಿದೆ ಎಂದು ಆರೋಪಿಸಿ ಹಾಸನದ ಪಶು ವೈದ್ಯಾಧಿಕಾರಿ ಮಂಜುನಾಥ ಎಂಬುವರು ಶಿವಶಂಕರಪ್ಪ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.


ದೂರಿನ ಅನ್ವಯ ಶಿವಶಂಕರಪ್ಪ ಸಾಹುಕಾರ್, ಕೆಪಿಎಸ್‌ಸಿ ಸದಸ್ಯರು, ಕೆಲ ಅಭ್ಯರ್ಥಿಗಳ ಮೇಲೆ ಎಫ್‌ಐಆರ್ ದಾಖಲಿಸಲಾಗಿದ್ದು,ಬಳಿಕ ಪ್ರಕರಣವನ್ನು ರಾಜ್ಯ ಸರ್ಕಾರವು ಸಿಐಡಿ ತನಿಖೆಗೆ ಒಪ್ಪಿಸಿದೆ.


೨೯ ಮಂದಿ ಅಕ್ರಮ ಉತ್ತೀರ್ಣ:


ಜನವರಿಯಲ್ಲಿ ನಡೆದಿದ್ದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಶಿವಶಂಕರಪ್ಪ ಸಂಬಂಧಿ ಸೇರಿ ಸುಮಾರು ೨೯ ಅಭ್ಯರ್ಥಿಗಳು ಅಕ್ರಮವಾಗಿ ಉತ್ತೀರ್ಣರಾಗಿದ್ದಾರೆ. ಇಂತಹ ಕೆಲ ಅಭ್ಯರ್ಥಿಗಳಿಗೆ ಮಧ್ಯವರ್ತಿಗಳು ತರಬೇತಿ ನೀಡಿದ್ದಾರೆ. ಕೆಲವರಿಗೆ ಓಎಂಆರ್ ಶೀಟ್ ತಿದ್ದುಪಡಿ ಮಾಡಿ ಅಕ್ರಮ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


ಕರ್ನಾಟಕ ಲೋಕಸೇವಾ ಆಯೋಗವು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ೪೦೦ ಪಶುವೈದ್ಯಾಧಿಕಾರಿಗಳ ಹುದ್ದೆ ನೇಮಕಾತಿಗೆ ಪರೀಕ್ಷೆ ನಡೆಸಿದ್ದು, ಜುಲೈ ೧೭ರಂದು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿಯ ಸಂಬಂಧಿಗಳಾದ ಅಭ್ಯರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ