
ಆಳಂದ :ತಾಲೂಕನ್ನು ಬರಗಾಲ ಪೀಡಿತ ತಾಲೂಕು ಎಂದು ಘೋಷಿಸುವುದು, ರೈತರಿಗೆ ಏಕರೆಗೆ ₹೫೦,೦೦೦ ಪರಿಹಾರ ಮಂಜೂರು ಮಾಡುವುದು ಹಾಗೂ ಬಾಕಿ ಉಳಿದಿರುವ ಬೆಳೆ ವಿಮೆ ಮೊತ್ತವನ್ನು ತಕ್ಷಣ ರೈತರ ಖಾತೆಗೆ ಜಮಾ ಮಾಡುವಂತೆ ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ಸರ್ಕಾರಕ್ಕೆ ಒತ್ತಾಯಿಸಿದರು.
ಸೋಮವಾರ ಆಳಂದ ಪಟ್ಟಣದ ಬಸ್ ನಿಲ್ದಾಣದ ಎದುರು ಆಳಂದ ಮಂಡಲ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಆಳಂದ ತಾಲೂಕಿನಲ್ಲಿ ಈ ವರ್ಷ ಸಮರ್ಪಕ ಮಳೆಯಾಗದ ಪರಿಣಾಮ ಬರದ ಛಾಯೆ ಆವರಿಸಿದೆ. ರೈತರು ಬಿತ್ತನೆ ಮಾಡಿದ ಬೆಳೆಗಳು ಮಳೆಯ ಕೊರತೆಯಿಂದ ಒಣಗಿ ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಕೆರೆ-ಕಟ್ಟೆಗಳು, ಹಳ್ಳ-ಕೊಳ್ಳಗಳು ಹಾಗೂ ಜಲಮೂಲಗಳು ಬತ್ತುತ್ತಿದ್ದು, ಕುಡಿಯುವ ನೀರಿನ ಸಮಸ್ಯೆಯೂ ತೀವ್ರಗೊಂಡಿದೆ. ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಜೀವನ ನಿರ್ವಹಣೆಯೇ ದುಸ್ತರವಾಗಿದೆ ಎಂದರು.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ಆಳಂದ ತಾಲೂಕಿನ ಕೃಷಿ ಚಟುವಟಿಕೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬಿತ್ತನೆಯಾದ ಬೆಳೆಗಳು ಜೀವಜಲಕ್ಕಾಗಿ ಕಾಯುವಂತಾಗಿದೆ. ಮಳೆ ಕೊರತೆಯಿಂದ ನಾಟಿ ಮಾಡಿದ ಹೊಲಗಳಲ್ಲಿ ಬೆಳೆ ನೆಲಕ್ಕಚ್ಚುವ ಸ್ಥಿತಿ ನಿರ್ಮಾಣವಾಗಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ. ಅಲ್ಲದೆ ದಿನ ಕಳೆದಂತೆ ಅವರ ಬದುಕು ಮೂರಾಬಟ್ಟೆಯಾಗಿ ಆತಂಕದಲ್ಲಿದ್ದಾರೆ ಎಂದು ಹೇಳಿದರು.
ಜೂನ್ ೧ರಿಂದ ಜುಲೈ ೧೩ರವರೆಗೆ ತಾಲೂಕಿನಾದ್ಯಂತ ನಿರೀಕ್ಷಿತ ೨೧೮ ಮೀ.ಮೀ. ಮಳೆಯ ಪೈಕಿ ಕೇವಲ ೧೯೨ ಮಿ.ಮೀ. ಮಳೆಯಷ್ಟೇ ದಾಖಲಾಗಿದ್ದು, ಹಲವು ಹೋಬಳಿಗಳಲ್ಲಿ ಮಳೆ ಕೊರತೆ ಗಂಭೀರವಾಗಿದೆ. ಪರಿಣಾಮವಾಗಿ ಮುಂಗಾರು ಬಿತ್ತನೆ ನಿರೀಕ್ಷಿತ ಮಟ್ಟ ತಲುಪದೆ ಶೇ. ೪೩ರಷ್ಟು ಮಾತ್ರ ಪೂರ್ಣಗೊಂಡಿದೆ.
ಕೃಷಿ ಇಲಾಖೆಯ ಅಂಕಿ-ಅAಶಗಳ ಪ್ರಕಾರ, ಆಳಂದ ಹೋಬಳಿಯಲ್ಲಿ ೧೪೯ ಮೀ.ಮೀ. ಮಳೆಯ ನಿರೀಕ್ಷೆಯಿದ್ದರೆ ಕೇವಲ ೮೭ ಮೀ.ಮೀ. ಮಳೆಯಾಗಿ ಶೇ. ೪೨ರಷ್ಟು ಕೊರತೆ ದಾಖಲಾಗಿದೆ. ಖಜೂರಿ ಹೋಬಳಿಯಲ್ಲಿ ೧೫೦ ಮಿ.ಮೀ. ಪೈಕಿ ೯೦ ಮಿ.ಮೀ. ಮಳೆಯಾಗಿ ಶೇ. ೪೦ರಷ್ಟು ಕೊರತೆ ಕಂಡುಬAದಿದೆ. ಮಾದನಹಿಪ್ಪರಗಾ ಹೋಬಳಿಯಲ್ಲಿ ೧೪೫ ಮೀ.ಮೀ. ಪೈಕಿ ೧೩೧ ಮೀ.ಮೀ. ಮಳೆಯಾಗಿ ಪರಿಸ್ಥಿತಿ ತುಸು ಸಮಾಧಾನಕರವಾಗಿದ್ದರೂ,
ನರೋಣಾ ವಲಯದಲ್ಲಿ ೧೫೪ ಮಿ.ಮೀ. ನಿರೀಕ್ಷಿತ ಮಳೆಯ ಪೈಕಿ ಕೇವಲ ೨೫ ಮೀ.ಮೀ. ಮಳೆಯಾಗಿರುವುದು ರೈತರನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ. ನಿಂಬರಗಾ ಹೋಬಳಿಯಲ್ಲಿ ೧೫೦ ಮಿ.ಮೀ. ಪೈಕಿ ೬೬ ಮಿ.ಮೀ. ಮಳೆಯಷ್ಟೇ ದಾಖಲಾಗಿದೆ ಎಂದು ಮಾಹಿತಿ ನೀಡಿದರು.
ವೀರಣ್ಣಾ ಮಂಗಾಣೆ ಮಾತನಾಡಿ, ತಾಲೂಕಿನಲ್ಲಿ ಒಟ್ಟು ೧,೪೨,೫೦೦ ಹೆಕ್ಟೇರ್ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದ್ದು, ಇದುವರೆಗೆ ಸುಮಾರು ೬೨ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಇದು ಶೇ. ೪೩ರಷ್ಟು ಪ್ರಗತಿಗೆ ಸಮವಾಗಿದೆ. ಈಗಾಗಲೇ ಬಿತ್ತನೆಯಾಗಿರುವ ತೊಗರಿ, ಹೆಸರು, ಉದ್ದು, ಸೋಯಾಬೀನ್, ಹತ್ತಿ ಸೇರಿದಂತೆ ಮಳೆ ಆಶ್ರಿತ ಬೆಳೆಗಳಿಗೆ ತುರ್ತಾಗಿ ಉತ್ತಮ ಮಳೆಯ ಅಗತ್ಯವಿದೆ. ಇನ್ನೂ ಒಂದು ವಾರ ಮಳೆಯಾಗದಿದ್ದರೆ ಬೆಳೆಗಳು ಒಣಗಿ ರೈತರಿಗೆ ಭಾರೀ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿದ್ದರು
ಬಸವರಾಜ ಬಿರಾದಾರ, ಈಗಾಗಲೇ ಕೆಲವರ ಬೆಳೆಗೆ ಮಳೆ ತೇವಾಂಶ ಕೊರತೆಯಾಗಿ ಬಿತ್ತನೆಯದ ಬೆಳೆ ಸಾಗುಮಾಡಿದ್ದಾರೆ. ಅಲ್ಲದೆ, ನೀರಾವರಿ ಸೌಲಭ್ಯ ಹೊಂದಿರುವ ರೈತರು ಬೋರ್ವೆಲ್ ಹಾಗೂ ಬಾವಿಗಳ ನೀರನ್ನು ಬಳಸಿ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದು, ಮಳೆ ಆಶ್ರಿತ ಕೃಷಿಯನ್ನು ಅವಲಂಬಿಸಿರುವ ಬಹುತೇಕ ರೈತರು ಮಾತ್ರ ಆಕಾಶದತ್ತ ಚಿತ್ತ ಹರಿಸಿದ್ದಾರೆ ಎಂದು ದೂರಿದರು.
ಸಂಜಯ ಮಿಸ್ಕಿನ್ ಮಾತನಾಡಿ, ಆಳಂದ ತಾಲೂಕಿನಲ್ಲಿ ಮುಂಗಾರು ಕೈಕೊಟ್ಟಿರುವುದು ರೈತರಲ್ಲಿ ಆತಂಕ ಹೆಚ್ಚಿಸಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಉತ್ತಮ ಮಳೆಯಾಗದಿದ್ದರೆ ಬೆಳೆ ಹಾನಿಯೊಂದಿಗೆ ಕೃಷಿ ಆರ್ಥಿಕತೆಯ ಮೇಲೂ ಗಂಭೀರ ಪರಿಣಾಮ ಬೀಳುವ ಸಾಧ್ಯತೆ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹಣಮಂತ ಕಾಬಡೆ ಮಾತನಾಡಿ, ನಮ್ಮ ಪ್ರಮುಖ ಬೇಡಿಕೆಗಳಾದ ಆಳಂದ ತಾಲೂಕನ್ನು ತಕ್ಷಣವೇ ಬರಗಾಲ ಪೀಡಿತ ತಾಲೂಕು ಎಂದು ಘೋಷಿಸಬೇಕು. ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪ್ರತಿ ಏಕರಿಗೆ ₹೫೦,೦೦೦ ಪರಿಹಾರವನ್ನು ಮಂಜೂರು ಮಾಡಬೇಕು. ಬಾಕಿ ಉಳಿದಿರುವ ಬೆಳೆ ವಿಮೆ (ಅಡಿoಠಿ Iಟಿsuಡಿಚಿಟಿಛಿe) ಮೊತ್ತವನ್ನು ಯಾವುದೇ ವಿಳಂಬವಿಲ್ಲದೆ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕು. ರೈತರಿಗೆ ಅಗತ್ಯ ಮೇವು, ಕುಡಿಯುವ ನೀರು ಹಾಗೂ ಇತರೆ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ೫. ಕೃಷಿ ಸಾಲಗಳ ಮರುಪಾವತಿಗೆ ಕಾಲಾವಕಾಶ ನೀಡಿ, ಬಡ್ಡಿ ಮನ್ನಾ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ರೈತರ ಹಿತದೃಷ್ಟಿಯಿಂದ ಈ ಎಲ್ಲ ಬೇಡಿಕೆಗಳನ್ನು ಸರ್ಕಾರವು ತುರ್ತು ಆದ್ಯತೆಯ ಮೇರೆಗೆ ಈಡೇರಿಸಿ, ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ರೈತ ಮೋರ್ಚಾ ಅಧ್ಯಕ್ಷ ನಾಗರಾಜ ಶೇಗಜಿ, ಹಿರಿಯ ಮುಖಂಡರಾದ ಮಲ್ಲಣ್ಣಾ ನಾಗೂರೆ, ಅಣ್ಣಾರಾವ ಪಾಟೀಲ ಕವಲಗಾ, ಶಿವಪ್ಪ ವಾರಿಕ, ಮಹಾದೇವಪ್ಪ ಪಾಟೀಲ, ಚಂದ್ರಕಾAತ ಭೂಸನೂರ, ಆನಂದರಾವ ಪಾಟೀಲ ಕೋರಹಳ್ಳಿ, ಮಲ್ಲಿನಾಥ ಪರೇಣಿ, ನಾಗರಾಜ ದೇನಕ, ಹಣಮಂತ ಕಾಬಡೆ, ಆದಿನಾಥ ಹೀರಾ ಮಹಾದೇವಪ್ಪ ವಾಡೆ, ಕಲ್ಯಾಣಿ ದಾನಾಗೊಳ, ಪ್ರಕಾಶ ಸಣಮನಿ, ಮಾಣಿಕ ರಾಠೋಡ, ಶಿವಪ್ಪ ಘಂಟೆ, ವೀರಭದ್ರ ಖೂನೆ, ಕುಮಾರ ಬಂಡೆ, ಪ್ರಕಾಶ ಮಾನೆ, ಸೀತಾರಾಮ ಜಮಾದಾರ, ವೈಜನಾಥ ಜಿಡಗೆ, ಗುರು ಲಾವಣಿ, ಸುವರ್ಣಾ ಪಾಟೀಲ, ಉದಯ ಪಾಟೀಲ, ಗಣೇಶ ಓಣಮಶೆಟ್ಟಿ, ಬಸವರಾಜ ಹತ್ತರಕಿ, ಸುನೀಲ ಹಿರೋಳಿಕರ ಸೇರಿದಂತೆ ಬಿಜೆಪಿಯ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.




























