Home ಜಿಲ್ಲೆ ಜು.೨೯ರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆಗೆ ವೇಗ: ಎಐಸಿಸಿ ತಂಡ ಐದು ದಿನಗಳ ಪ್ರವಾಸ

ಜು.೨೯ರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆಗೆ ವೇಗ: ಎಐಸಿಸಿ ತಂಡ ಐದು ದಿನಗಳ ಪ್ರವಾಸ

ಯಾದಗಿರಿ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿ ಹಾಗೂ ಪಕ್ಷದ ಸಂಘಟನೆ ಬಲವರ್ಧನೆ ಉದ್ದೇಶದಿಂದ ಎಐಸಿಸಿ ಮತ್ತು ಕೆಪಿಸಿಸಿ ಪದಾಧಿಕಾರಿಗಳ ತಂಡ ಜು.೨೯ರಿಂದ ಐದು ದಿನಗಳ ಕಾಲ ಯಾದಗಿರಿ ಜಿಲ್ಲೆಯ ವಿವಿಧ ಬ್ಲಾಕ್‌ಗಳಲ್ಲಿ ಸಭೆಗಳನ್ನು ನಡೆಸಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಅನಪುರ ತಿಳಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನಿರ್ದೇಶನದಂತೆ ದೇಶಾದ್ಯಂತ “ಸಂಘಟನೆ-ಸೃಜನ ಅಭಿಯಾನ” ನಡೆಯುತ್ತಿದ್ದು, ಅದರ ಭಾಗವಾಗಿ ಯಾದಗಿರಿ ಜಿಲ್ಲೆಯಲ್ಲೂ ಸಭೆಗಳ ಸರಣಿ ಆಯೋಜಿಸಲಾಗಿದೆ ಎಂದು ಹೇಳಿದರು.

ಜು.೨೯ರಂದು ಮಧ್ಯಾಹ್ನ ೧೨.೩೦ಕ್ಕೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಯಾದಗಿರಿ ಜಿಲ್ಲಾ ಉಸ್ತುವಾರಿಯಾಗಿರುವ ಎಐಸಿಸಿ ಕಾರ್ಯದರ್ಶಿ ಜಟ್ಟು ಕುಸನಕುಮಾರ ಅವರ ನೇತೃತ್ವದಲ್ಲಿ ಪಕ್ಷದ ವಿವಿಧ ಘಟಕಗಳ ಪ್ರಮುಖರ ಸಭೆ ನಡೆಯಲಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದ್ದು, ಅವುಗಳನ್ನು ಕೆಪಿಸಿಸಿ ಮೂಲಕ ಎಐಸಿಸಿಗೆ ಕಳುಹಿಸಲಾಗುತ್ತದೆ. ಅಂತಿಮವಾಗಿ ಎಐಸಿಸಿ ಮಟ್ಟದಲ್ಲಿ ಹೊಸ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ವಿವರಿಸಿದರು.

ಸಭೆಗಳ ವೇಳಾಪಟ್ಟಿಯಂತೆ ಜು.೩೦ರಂದು ಬೆಳಗ್ಗೆ ೧೧ಕ್ಕೆ ಸುರಪುರ ಹಾಗೂ ಮಧ್ಯಾಹ್ನ ೨ಕ್ಕೆ ಹುಣಸಗಿ, ಜು.೩೧ರಂದು ಶಹಾಪುರ ಮತ್ತು ಕೆಂಭಾವಿ, ಆ.೧ರಂದು ಯಾದಗಿರಿ ಹಾಗೂ ವಡಗೇರಾ, ಆ.೨ರಂದು ಗುರುಮಠಕಲ್ ಮತ್ತು ಸೈದಾಪುರದಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಮುಖರ ಸಭೆಗಳು ನಡೆಯಲಿವೆ ಎಂದು ತಿಳಿಸಿದರು.

ಐದು ದಿನಗಳ ಪ್ರವಾಸದ ಅವಧಿಯಲ್ಲಿ ಎಐಸಿಸಿ ಕಾರ್ಯದರ್ಶಿ ಜಟ್ಟು ಕುಸನಕುಮಾರ ಹಾಗೂ ಕೆಪಿಸಿಸಿ ಪದಾಧಿಕಾರಿಗಳಾದ ರಾಜಗೋಪಾಲರೆಡ್ಡಿ, ಶರಣಗೌಡ ಭಯ್ಯಾಪುರ ಮತ್ತು ಮಂಜುಳಾ ಜಿಲ್ಲೆಯಲ್ಲೇ ತಂಗಿ ಸಂಘಟನೆ ಬಲವರ್ಧನೆ ಕಾರ್ಯಕ್ಕೆ ನೇತೃತ್ವ ವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ಶ್ಯಾಮಸನ್ ಮಾಳಿಕೇರಿ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಹೊನ್ನೇಶ ದೊಡ್ಡಮನಿ, ಕಾಂಗ್ರೆಸ್ ಮುಖಂಡ ತಿಮ್ಮಣ್ಣ ನಾಯಕ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.