
ರಾಮನಗರ,ಜು.೦೩: ಸಹಕಾರ ಇಲಾಖೆ ಸಹಾಯಕ ನಿಬಂಧಕರು ಕಾನೂನನ್ನು ಗಾಳಿಗೆ ತೂರಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ವಿ.ಎಸ್.ಸುಜೀವನ್ ಕುಮಾರ್ ಆರೋಪಿಸಿದರು.
ರಾಮನಗರದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಎದುರು ಚನ್ನಪಟ್ಟಣ ತಾಲ್ಲೂಕು ಅರಳಾಳುಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಅವರು,ಮಾಜಿ ಸಹಾಯಕನಿಗೆ ೨೫ ವರ್ಷಗಳ ನಂತರ ಮತ್ತೆ ಕೆಲಸಕ್ಕೆ ಆದೇಶ, ೫ ವರ್ಷದ ವೇತನ ನೀಡಲು ನೀಡಿರುವ ಆದೇಶ ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.
ಅರಳಾಳುಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ೨೫ ವರ್ಷಗಳ ಹಿಂದೆ ಚಂದ್ರಶೇಖರಯ್ಯ ಎಂಬ ಸಹಾಯಕರು ಕೆಲಸ ನಿರ್ವಹಿಸುತ್ತಿದ್ದರು.ಇವರ ಅವಧಿಯಲ್ಲಿ ಸಂಘದಲ್ಲಿ ಹಣಕಾಸಿನ ನ್ಯೂನತೆ ಕಂಡುಬಂದಿತ್ತು.ಜೊತೆಗೆ ೭ ವರ್ಷಗಳ ಕಾಲ ಲೆಕ್ಕಪರಿಶೋಧನೆ, ಸರ್ವ ಸದಸ್ಯರ ಸಭೆ ಕೂಡ ನಡೆಸಿರಲಿಲ್ಲ.ಹೀಗಾಗಿ ಅಂದು ರೈತರ ಆಕ್ಷೇಪಣೆ ಮೇರೆಗೆ ಸಹಾಯಕ ಚಂದ್ರಶೇಖರಯ್ಯ ಕೆಲಸ ಬಿಟ್ಟು ಗ್ರಾಮವನ್ನು ತೊರೆದಿದ್ದರು ಎಂದರು.
ಈ ವ್ಯಕ್ತಿಗೆ ರಾಮನಗರ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಯಾವುದೇ ಅರ್ಜಿ ಇಲ್ಲದೆ ಏಕಾಏಕಿ ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ, ಅಲ್ಲದೆ ೫ ವರ್ಷಗಳ ವೇತನವನ್ನು ಸಹ ನೀಡಬೇಕೆಂದು ಆದೇಶ ನೀಡಿದ್ದಾರೆ. ಈ ಆದೇಶ ಸಮಂಜಸ ಮತ್ತು ನ್ಯಾಯಯುತವಾಗಿಲ್ಲ. ಸಹಾಯಕ ನಿಬಂಧಕರು ನೀಡಿರುವ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಹಾಯಕ ನಿಬಂಧಕರ ಏಕಪಕ್ಷೀಯ ನಿರ್ಧಾರ, ದುರಾಡಳಿತದಿಂದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ೧೮೦೦ ಹಾಲು ಉತ್ಪಾದಕರ ಸಂಘಗಳು ಅಸ್ತಿತ್ವ ಕಳೆದುಕೊಳ್ಳುತ್ತದೆ. ಈ ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅರಳಾಳುಸಂದ್ರದ ಎಂಪಿಸಿಎಸ್‌ನ ಮಾಜಿ ಅಧ್ಯಕ್ಷ ಸಿ.ರಾಜಪ್ಪ, ಸದಸ್ಯ ಅಶ್ವಥ್, ಗ್ರಾಮದ ಮುಖಂಡರಾದ ಎಂ.ವೆಂಕಟೇಶ್, ರಾಜಣ್ಣ ಮತ್ತಿತರರು ಇದ್ದರು.





























