
ರಾಮನಗರ,ಜು.೦೩: ಗ್ರಾಮೀಣ ಸಹಕಾರಿ ಸಂಘಗಳು ನಡೆಸುವ ಆರೋಗ್ಯ ಶಿಬಿರಗಳು ರೈತರಿಗೆ ಹೆಚ್ಚು ಅನುಕೂಲ ಮಾಡಿಕೊಡುತ್ತಿದ್ದು,ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹಳ್ಳಿಮಾಳ ಪಿಎಸಿಎಂಎಸ್ ಅಧ್ಯಕ್ಷ ಸಿ.ರವಿ ಹೇಳಿದರು.
ತಾಲ್ಲೂಕಿನ ಹಳ್ಳಿಮಾಳ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ಕೇಂದ್ರ ಸರ್ಕಾರದ ಸಚಿವಾಲಯ ೫ ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸಹಕಾರದಿಂದ ಸಮೃದ್ಧಿ ಎಂಬ ಧ್ಯೇಯದೊಂದಿಗೆ ಆಯೋಜಿಸಿದ್ದ ರೈತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಿಗೂ ಇಂದು ಆರೋಗ್ಯ ಬಹಳ ಮುಖ್ಯವಾಗಿದ್ದು, ಅದರಲ್ಲೂ ಗ್ರಾಮೀಣ ಭಾಗದ ರೈತರಿಗೆ ನೆರವಾಗುವ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸಹಕಾರ ಇಲಾಖೆ ಮತ್ತು ಸಾಯಿ ಆಸ್ಪತ್ರೆ ಸಹಕಾರದಲ್ಲಿ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಸಂಘದಲ್ಲಿ ಕೆಸಿಸಿ ಅಲ್ಪಾವಧಿ ಸಾಲ ವಿತರಣೆ ಮಾಡುವ ಜೊತೆಗೆ ರೈತರಿಗೆ ಆಧುನಿಕ ಕೃಷಿ ತರಬೇತಿ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮ ಆಯೋಜಿಸುವ ಮೂಲಕ ಸಂಘದ ಆಡಳಿತ ಮಂಡಳಿ ಸಮಾಜಮುಖಿ ಕೆಲಸ ಮಾಡುತ್ತಿದೆ. ಸಂಘ ಮತ್ತಷ್ಟು ರೈತರಿಗೆ ನೆರವಾಗುವ ಕೆಲಸಗಳನ್ನು ಹಮ್ಮಿಕೊಂಡು ಮತ್ತಷ್ಟು ಸಮಾಜಮುಖಿಯಾಗಿ ಸಾಗಲಿದೆ.ಇದಕ್ಕೆ ಸಹಕಾರಿಗಳ ಸಹಕಾರ ಅತೀಮುಖ್ಯ ಎಂದ ಅವರು ಆಗಾಗ್ಗೆ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಂಡು ಆರೋಗ್ಯವಂತರಾಗಿ ಬದುಕು ನಡೆಸಿ ಎಂದು ಸಹಕಾರಿಗಳಿಗೆ ಕಿವಿಮಾತು ಹೇಳಿದರು.
ಪಾದರಹಳ್ಳಿಯಲ್ಲಿ ನೂತನ ಶಾಖಾ ಕಚೇರಿ, ಹಳ್ಳಿಮಾಳ ಕಚೇರಿಯಲ್ಲಿ ಇ-ಸ್ಟ್ಯಾಂಪ್ ವ್ಯವಸ್ಥೆ ಶೀಘ್ರದಲ್ಲೆ ಚಾಲನೆ ಪಡೆದುಕೊಳ್ಳಲಿದ್ದು, ಸಹಕಾರ ಸಂಘಗಳು ರೈತರ ಕೃಷಿ ಚಟುವಟಿಕೆಗಳಿಗೆ ಹಾಗೂ ಆರೋಗ್ಯ ಸೇರಿದಂತೆ ಎಲ್ಲ ಸಮಸ್ಯೆಗಳಿಗೆ ನೆರವಾಗಿ ನಿಲ್ಲಬೇಕು ಎಂದರು.ಸಹಕಾರ ಇಲಾಖೆಯ ಅಧಿಕಾರಿ ಮಂಜುನಾಥ್ ಮಾತನಾಡಿ,೪೭ ಸಾವಿರ ಸಹಕಾರ ಸಂಘಗಳನ್ನು ಹೊಂದಿರುವ ಬೃಹತ್ ಇಲಾಖೆಯಾಗಿ ಸಹಕಾರ ಇಲಾಖೆ ಕರ್ತವ್ಯ ನಿರ್ವಹಿಸುತ್ತಿವೆ. ಕೇಂದ್ರದ ಸಚಿವಾಲಯದ ಮಾರ್ಗ ದರ್ಶನದಲ್ಲಿ ಎಲ್ಲಡೆ ೭ ದಿನಗಳ ಸಹಕಾರ ಸಪ್ತಾಹ ಆಚರಣೆ ಮಾಡಲಾಗುತ್ತಿದೆ.ಈ ಹಿನ್ನೆಲೆಯಲ್ಲಿ ಒಬ್ಬರು ಎಲ್ಲರಿಗಾಗಿ ಎಲ್ಲರೂ ಒಬ್ಬರಿಗಾಗಿ ಎಂಬ ಮನೋಭಾವದಿಂದ ಗಿಡ ನೆಡುವುದು, ಉಚಿತ ಆರೋಗ್ಯ ಶಿಬಿರ, ವಿದ್ಯಾರ್ಥಿಗಳನ್ನು ಪ್ರವಾಸ ಕರೆದುಕೊಂಡು ಹೋಗುವ ಹಲವು ಕಾರ್ಯಕ್ರಮಗಳನ್ನು ಸಹಕಾರ ಇಲಾಖೆ ವತಿಯಿಂದ ಆಯೋಜಿಸಲಾಗಿದೆ ಎಂದರು.
ಶಿಬಿರದಲ್ಲಿ ಡಾ.ಸಂಗಮ್ ಕಾರ್ತಿಕ್ ಮಾತನಾಡಿದರು.ಸಹಕಾರ ಇಲಾಖೆ ಅಧಿಕಾರಿ ಉಮೇಶ್, ಬಿಡಿಸಿಸಿ ಬ್ಯಾಂಕ್ ಸೂಪರ್ ವೈಸರ್ ದೊಡ್ಡಬೈರೇಗೌಡ, ಸಂಘದ ಸಿಇಓ ಪ್ರಕಾಶ್, ಉಪಾಧ್ಯಕ್ಷ ನಾಗಯ್ಯ, ಸದಸ್ಯರಾದ ಶಿವಣ್ಣ, ಮಾದಯ್ಯ, ಮುಖಂಡರಾದ ಉಮೇಶ್, ಕರಿಯಪ್ಪ, ನಾಗರಾಜಯ್ಯ, ವೆಂಕಟೇಶ್, ಸೇರಿದಂತೆ ರೈತಾಪಿ ವರ್ಗದವರು ಇದ್ದರು. ಸಂಘದ ಕಾರ್ಯ ವ್ಯಾಪ್ತಿಯ ನೂರಾರು ರೈತರು, ಮಹಿಳೆಯರು ಶಿಬಿರದ ಪ್ರಯೋಜನ ಪಡೆದರು.





























