
ರಾಮನಗರ.ಜು.೦೩: ಪರಿಸರ ಸಂರಕ್ಷಣೆ ಎನ್ನುವುದು ಇಂದಿನ ದಿನಗಳಲ್ಲಿ ಸವಾಲಿನ ವಿಷಯವಾಗಿದ್ದು,ಬಯೋಮೆಡಿಕಲ್ ತ್ಯಾಜ್ಯ ಎನ್ನುವುದು ಸ್ವಾಭಾವಿಕವಾಗಿ ಉತ್ಪತ್ತಿಯಾಗುವ ತ್ಯಾಜ್ಯಕ್ಕಿಂತ ತುಂಬಾ ಅಪಾಯಕಾರಿ ಎಂದು ನಗರಸಭಾಧ್ಯಕ್ಷ ಕೆ.ಶೇಷಾದ್ರಿ ಅಭಿಪ್ರಾಯಪಟ್ಟರು.
ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಹಾಗೂ ತಾಲ್ಲೂಕು ಔಷಧಿ ವ್ಯಾಪಾರಿಗಳ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಅವಧಿ ಮೀರಿದ ಔಷಧಗಳನ್ನು ವಿಲೇವಾರಿ ಮಾಡಲು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಯೋಮೆಡಿಕಲ್ ತ್ಯಾಜ್ಯಗಳನ್ನು ಯಾವ ರೀತಿ ಸಂಸ್ಕರಿಸಬೇಕೆಂದು ಗಂಭೀರವಾಗಿ ಚಿಂತಿಸಿ ಕೇಂದ್ರ ಸರ್ಕಾರ ಅನೇಕ ಕಾನೂನುಗಳನ್ನು ಜಾರಿಗೆ ತಂದಿದ್ದು, ಅನೇಕ ಕ್ರಮಗಳನ್ನು ಕೈಗೊಂಡಿದೆ. ಹಿಂದೆ ನಗರದಲ್ಲಿ ಖಾಸಗಿ ಚಿಕಿತ್ಸಾಯ, ನರ್ಸಿಂಗ್ಹೋಂಗಳಲ್ಲಿ ಉತ್ಪತ್ತಿಯಾದ ಬಯೋಮೆಡಿಕಲ್ ತ್ಯಾಜ್ಯಗಳನ್ನು ರಸ್ತೆಗೆ ತಂದು ಹಾಕುತ್ತಿದ್ದರು.ಪ್ರಸಕ್ತ ಕೆಲವೊಂದು ಸಂಸ್ಥೆಯವರು ಬಯೋಮೆಡಿಕಲ್ ತ್ಯಾಜ್ಯಗಳನ್ನು ಕ್ರಮಬದ್ಧವಾಗಿ ಸಂಗ್ರಹಿಸಿ ಪರಿಸರ ಸಂರಕ್ಷಿಸುವ ಕೆಲಸ ಮಾಡುತ್ತಿದ್ದಾರೆ.ಈ ಉದ್ದೇಶದಿಂದ ಇಂದು ಕಾರ್ಯಾಗಾರ ಮಾಡುತ್ತಿರುವುದು ಔಷಧಿ ವ್ಯಾಪಾರಿಗಳು ಅವಧಿ ಮೀರಿರುವ ಔಷಧಗಳನ್ನು ಯಾವ ರೀತಿ ವಿಲೇ ಮಾಡಬೇಕೆಂಬುದನ್ನು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಜಾಗೃತಿ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿರುವುದು ವಿಶೇಷ. ಇದರಿಂದ ಇಂದಿನ ಸಮಾಜ ಮತ್ತು ಮುಂದಿನ ಪೀಳಿಗೆಯವರು ಜಾಗೃತರಾಗಿ ಔಷಧ ವ್ಯಾಪಾರಿಗಳ ಸಹಕಾರದೊಂದಿಗೆ ಇಂದು ಕಾರ್ಯಕ್ರಮದಲ್ಲಿ ಸಂಸ್ಥೆಯವರು ವಿತರಿಸಿರುವ ತಿಳುವಳಿಕೆ ಮೂಡಿಸುವ ಪೋಸ್ಟರ್ ಅಂಟಿಸಿದರೆ ಸಾಲದು. ಅದರ ಬಗ್ಗೆ ಗ್ರಾಹಕರಿಗೆ ವ್ಯಾಪಾರಿಗಳು ಅದರ ಉಪಯೋಗವನ್ನು ತಿಳಿಸಬೇಕು. ಗ್ರಾಹಕರು ತಮ್ಮ ಔಷಧಗಳು ಅವಧಿ ಮೀರಿದರೆ ಅದನ್ನು ವಾಪಸ್ಸು ನಮಗೆ ತಂದು ಕೊಡುವಂತೆ ಮನವಿ ಮಾಡಬೇಕು.ಈ ನಿಟ್ಟಿನಲ್ಲಿ ಬಿಡದಿ ಕೆಮಿಸ್ಟಿಸ್ ಮತ್ತು ಡ್ರಗ್ಸಿಸ್ಟ್ ಅಸೋಸಿಯೇಷನ್ ಮಂಜುನಾಥ್ ಮತ್ತು ಸ್ನೇಹಿತರ ಕಾರ್ಯ ಶ್ಲಾಘನೀಯ. ನಗರಸಭೆ ವತಿಯಿಂದ ಪೌರಕಾರ್ಮಿಕರಿಗೆ ಮತ್ತು ಆಟೋ ಚಾಲಕರಿಗೆ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡ ವೇಳೆಯಲ್ಲಿ ಉಚಿತವಾಗಿ ಔಷಧಿ ವಿತರಿಸಿ ಸಹಕಾರ ನೀಡಿದ್ದರು ಎಂದು ಸ್ಮರಿಸಿದರು.
ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ, ಈ ಜಿಲ್ಲೆಯ ಎಲ್ಲಾ ಔಷಧ ವ್ಯಾಪಾರಿಗಳ ಸಹಕಾರದೊಂದಿಗೆ ಹಾಗೂ ಎಡಿಸಿ ನಮ್ರತಾ ನೇತೃತ್ವದಲ್ಲಿ ಇಂದಿನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.ಈ ಮೊದಲು ಸ್ವತಂತ್ರವಾಗಿ ಅವಧಿ ಮೀರಿದ ಔಷಧಗಳನ್ನು ಗ್ರಾಹಕರಿಂದ ನಾವು ಪಡೆದುಕೊಳ್ಳುತ್ತಿದ್ದವು. ಪ್ರಸಕ್ತ ಈಗ ಸಂಸ್ಥೆಯೊಂದಿಗೆ ಅಗ್ರಿಮೆಂಟ್ ಮಾಡಿಕೊಳ್ಳಲಾಗಿದ್ದು,ತಿಂಗಳಿನ ಎರಡು ದಿನ ಅವಧಿ ಮೀರಿದ ಔಷಧ ತ್ಯಾಜ್ಯಗಳನ್ನು ಗ್ರಾಹಕರಿಂದ ಪಡೆದುಕೊಳ್ಳಲಾಗುತ್ತಿದೆ.ಬಳಿಕ ಅದನ್ನು ವೈಜ್ಞಾನಿಕವಾಗಿ ನಾಶಪಡಿಸಲಾಗುತ್ತದ್ದು, ಇದರಿಂದಾಗಿ ಪರಿಸರ ಪರಿಣಾಮಕಾರಿಯಾಗಿ ಸಂರಕ್ಷಣೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಔಷಧ ವ್ಯಾಪಾರಿಗಳ ಕಾರ್ಯ ಮೆಚ್ಚಬೇಕಾದ ವಿಷಯ ಎಂದರು.
ಇದೇ ಸಂದರ್ಭದಲ್ಲಿ ಅವಧಿ ಮೀರಿದ ಔಷದಗಳನ್ನು ವಿಲೆ ಮಾಡಲು ಬುಟ್ಟಿಗಳನ್ನು ಔಷಧ ವ್ಯಾಪಾರಿಗಳಿಗೆ ಜಿಲ್ಲಾ ಸಂಘದ ವತಿಯಿಂದ ವಿತರಣೆ ಮಾಡಲಾಯಿತು.ಜಿಲ್ಲಾ ಸಹಾಯಕ ಔಷಧ ನಿಯಂತ್ರಣಾಧಿಕಾರಿ ಸಮ್ರತಾ ಹಳ್ಳೂರ, ಶಾಂತಿನಿಕೇತನ ಸಮೂಹ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಕುಮಾರಸ್ವಾಮಿ, ಪ್ರಾಂಶುಪಾಲೆ ಪ್ರಮೀಳಾ ಮಾತನಾಡಿದರು.
ವೇದಿಕೆ ಕಾರ್ಯಕ್ರಮದಲ್ಲಿ ರಾಮನಗರ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಗೌರವಾಧ್ಯಕ್ಷ ಕೆ.ಎಸ್.ಕೃಷ್ಣ, ಜಿಲ್ಲಾ ಖಜಾಂಚಿ ರೂಪೇಶ್ಕುಮಾರ್, ಕಾರ್ಯದರ್ಶಿ ವಿ.ರಾಜಶೇಖರ್, ರಾಮನಗರ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅತೀಕ್, ಜಂಟಿ ಕಾರ್ಯದರ್ಶಿ ಪುರುಷೋತ್ತಮ್, ಖಜಾಂಚಿ ಸೈಯದ್ ಅಕ್ರಮ್ ಮತ್ತಿತರರು ಇದ್ದರು.





























