Home ಜಿಲ್ಲೆ ಬೆಂಗಳೂರು ೩ನೇ ಹಂತದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ

೩ನೇ ಹಂತದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ

ಮಾಲೂರು.ಜು೨: ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ೩ನೇ ಹಂತದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ರಾಜ್ಯದಲ್ಲಿ ಪ್ರಾರಂಭಗೊಂಡಿದ್ದು,ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಹೇಳಿದರು.


ತಾಲ್ಲೂಕಿನ ಚಿಕ್ಕತಿರುಪತಿ ಗ್ರಾಮದಲ್ಲಿ ತಾಲ್ಲೂಕು ಆಡಳಿತ, ತಾಪಂ, ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಎಸ್‌ಐಆರ್ ವಿಶೇಷ ಜಾಥಾ ಕಾರ್ಯಕ್ರಮ ಹಾಗೂ ಜಾಗೃತಿ ರ್‍ಯಾಲಿ ಕುರಿತು ಅವರು ಮಾತನಾಡಿ,ಎಲ್ಲಾ ಅರ್ಹ ನಾಗರಿಕರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವುದೇ ವಿಶೇಷ ಸಮಗ್ರ ಪರಿಷ್ಕರಣೆಯ ಉದ್ದೇಶವಾಗಿದೆ ಎಂದರು.


ವಿಶೇಷ ಸಮಗ್ರ ಪರಿಷ್ಕರಣೆಯ ಸಮಯದಲ್ಲಿ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿ ಹಾಗೂ ಖಚಿತಪಡಿಸಿಕೊಂಡು ಪ್ರಜಾಪ್ರಭುತ್ವದ ಭದ್ರ ಅಡಿಪಾಯವಾದ ಎಸ್‌ಐಆರ್ ಭಾಗವಾಗುವಂತೆ ಚುನಾವಣಾ ಆಯೋಗ ತಿಳಿಸಿದೆ ಎಂದು ಹೇಳಿದರು.


ಮತಪಟ್ಟಿ ಪರಿಷ್ಕರಣೆಗೆ ನಿಯೋಜಿಸಲ್ಪಟ್ಟ ಬಿಎಲ್‌ಓಗಳು ಜೂ.೩೦ರಿಂದ ಜು.೨೯ರವರೆಗೆ ಮನೆ ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸಲಿದ್ದಾರೆ.ಈ ವೇಳೆ ಬಿಎಲ್‌ಒಗಳು ಎಸ್‌ಐಆರ್ ಅರ್ಜಿಯ ಪ್ರತಿಗಳನ್ನು ನೀಡಲಿದ್ದು,ಮತದಾರರು ಅರ್ಜಿಯನ್ನು ಭರ್ತಿ ಮಾಡಿ ಸಹಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕಾಗಿದೆ.ಮತದಾರರ ಪಟ್ಟಿಯಲ್ಲಿರುವ ಹೆಸರುಗಳ ಪರಿಶೀಲನೆ, ತಿದ್ದುಪಡಿ, ಹೊಸ ಮತದಾರರ ಹೆಸರು ಸೇರ್ಪಡೆ, ಮೃತಪಟ್ಟವರು ಹಾಗೂ ಸ್ಥಳಾಂತರಗೊಂಡವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆಯೂ ಇದೇ ಅವಧಿಯಲ್ಲಿ ನಡೆಯಲಿದೆ.ಎರಡೆರೆಡು ಕಡೆ ಹೆಸರು ಇದ್ದಲ್ಲಿ ಒಂದು ಕಡೆ ಮಾತ್ರ ಉಳಿಸುವ ಪ್ರಕ್ರಿಯೆ ನಡೆಯುತ್ತದೆ.ಗುರುತಿನ ಚೀಟಿಯಲ್ಲಿ ಏನಾದರೂ ದೋಷಗಳು ಇದ್ದಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಲು ಕೂಡ ಅವಕಾಶವಿದೆ ಎಂದರು.


ಮನೆ ಮನೆಗಳಿಗೆ ಭೇಟಿ ನೀಡುವ ಅಧಿಕಾರಿಗಳು ನಿಗದಿತ ಫಾರಂ(ಎನ್ಯೂಮರೇಷನ್ ಫಾರಂ)ಗಳನ್ನು ಭರ್ತಿ ಮಾಡಿಸಿಕೊಂಡು ವಾಪಸ್ ಪಡೆದುಕೊಳ್ಳಲಿದ್ದಾರೆ. ಮತದಾರರ ಪಟ್ಟಿಗೆ ಹೊಸ ಹೆಸರುಗಳ ಸೇರ್ಪಡೆ ಮಾಡಲಿದ್ದಾರೆ .ನಿಧನರಾದವರು, ಮನೆ ಖಾಲಿ ಮಾಡಿದವರು, ವರ್ಗಾವಣೆ ಆದವರ ಹೆಸರನ್ನು ಮತಪಟ್ಟಿಯಿಂದ ಕೈಬಿಟ್ಟು ಪರಿಷ್ಕರಣೆ ಮಾಡಲಿದ್ದಾರೆ.ಮತಪಟ್ಟಿಯಲ್ಲಿ ಎರಡುಕಡೆ ಹೆಸರುಗಳಿದ್ದಲ್ಲಿ ಒಂದು ಕಡೆ ಮಾತ್ರ ಉಳಿಸುವ ಪ್ರಕ್ರಿಯೆ ನಡೆಯಲಿದೆ. ಗುರುತಿನ ಚೀಟಿಯಲ್ಲಿ ಯಾವುದೇ ದೋಷಗಳು ಇದ್ದಲ್ಲಿ ಅದನ್ನು ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿದೆ. ಅಧಿಕಾರಿಗಳು ನೀಡಿದ ೨ ಫಾರಂ ಅನ್ನು ಅರ್ಜಿದಾರರು ಭರ್ತಿ ಮಾಡಿ ಸಹಿ ಮಾಡಬೇಕು ಎಂದು ಅವರು ತಿಳಿಸಿದರು.


ಈ ಸಂದರ್ಭದಲ್ಲಿ ಚಿಕ್ಕತಿರುಪತಿ ಗ್ರಾ.ಪಂ.ಆಡಳಿತಾಧಿಕಾರಿ ಗೋವಿಂದೇಗೌಡ,ಪಿಡಿಒ ಹರೀಂದ್ರ ಗೋಪಾಲ್, ಕಾರ್ಯದರ್ಶಿ ರಮೇಶ್, ದ್ವಿತೀಯ ದರ್ಜೆ ಸಹಾಯಕ ನಾಗರಾಜಪ್ಪ, ಚಿಕ್ಕತಿರುಪತಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಆನಂದ್ ಕುಮಾರ್, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸುಜಾತ, ಶಿಕ್ಷಕರಾದ ರಾಮಾಂಜಿನಪ್ಪ, ಶಂಕರ್, ಮುತ್ತಣ್ಣ. ಸೇರಿದಂತೆ ಪಂಚಾಯಿತಿ ಸಿಬ್ಬಂದಿಗಳಾದ ವೆಂಕಟೇಶ್, ಮಹದೇವ್, ಅರುಣ್ ಕುಮಾರ್, ಸೇರಿದಂತೆ ಚಿಕ್ಕತಿರುಪತಿ ಗ್ರಾಪಂ ಸಿಬ್ಬಂದಿ ಗ್ರಾಮಸ್ಥರು ಹಾಜರಿದ್ದರು.