Home Lead News ಭೂಕಂಪನಕ್ಕೆ ೪೦ ಸಾವು

ಭೂಕಂಪನಕ್ಕೆ ೪೦ ಸಾವು

ಕಾರಕಾಸ್ (ವೆನೆಜುವೆಲಾ),ಜೂ೨೫: ಲ್ಯಾಟಿನ್ ಅಮೆರಿಕದ ಪ್ರಮುಖ ದೇಶವಾದ ವೆನೆಜುವೆಲಾದಲ್ಲಿ ಸಂಭವಿಸಿದ ಇತಿಹಾಸದಲ್ಲೇ ಅತ್ಯಂತ ಭೀಕರ ಅವಳಿ ಭೂಕಂಪಕ್ಕೆ ಇಡೀ ದೇಶವೇ ನಲುಗಿಹೋಗಿದೆ. ಕೇವಲ ೩೯ ಸೆಕೆಂಡುಗಳ ಅಂತರದಲ್ಲಿ ಸಂಭವಿಸಿದ ೭.೨ ಮತ್ತು ೭.೫ ತೀವ್ರತೆಯ ಈ ಪ್ರಬಲ ಭೂಕಂಪಗಳು ರಾಜಧಾನಿ ಕಾರಕಾಸ್ ಸೇರಿದಂತೆ ಹಲವು ಪ್ರಮುಖ ನಗರಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿವೆ.

ಇತ್ತೀಚಿನ ವರದಿಗಳ ಪ್ರಕಾರ, ಕನಿಷ್ಠ ೪೦ ಜನರು ಸಾವನ್ನಪ್ಪಿದ್ದಾರೆ ಮತ್ತು ೭೦೦ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಆದರೆ, ಅವಶೇಷಗಳ ಅಡಿಯಲ್ಲಿ ಸಾವಿರಾರು ಜನರು ಸಿಲುಕಿರುವ ಆತಂಕವಿದ್ದು, ಸಾವಿನ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ.

ಸ್ಥಳೀಯ ಕಾಲಮಾನ ಸಂಜೆ ೬:೦೪ ರ ಸುಮಾರಿಗೆ ಉತ್ತರ-ಕೇಂದ್ರ ವೆನೆಜುವೆಲಾದ ಯಾರಾಕುಯ್ ಪ್ರಾಂತ್ಯದ ವೆರೋಸ್ ಮುನ್ಸಿಪಾಲಿಟಿಯನ್ನು ಕೇಂದ್ರವಾಗಿಟ್ಟುಕೊಂಡು ಮೊದಲ ಭೂಕಂಪನ (ತೀವ್ರತೆ ೭.೨) ಸಂಭವಿಸಿತು. ಇದರ ಬೆನ್ನಲ್ಲೇ ಕೇವಲ ೩೯ ಸೆಕೆಂಡುಗಳ ಅಂತರದಲ್ಲಿ ಮತ್ತೊಂದು ಭೀಕರ ಭೂಕಂಪನ (ತೀವ್ರತೆ ೭.೫) ಇಡೀ ದೇಶವನ್ನು ಬೆಚ್ಚಿಬೀಳಿಸಿತು. ಈ ಅವಳಿ ಕಂಪನಗಳು ಎಷ್ಟು ಪ್ರಬಲವಾಗಿದ್ದವೆಂದರೆ, ನೆರೆದೇಶಗಳಾದ ಕೊಲಂಬಿಯಾ, ಬ್ರೆಜಿಲ್ ಹಾಗೂ ಕೆರಿಬಿಯನ್ ದ್ವೀಪಗಳಾದ ಅರುಬಾ, ಬೊನೈರ್ ಮತ್ತು ಡೊಮಿನಿಕನ್ ರಿಪಬ್ಲಿಕ್ ವರೆಗೂ ಭೂಮಿ ನಡುಗಿದೆ.

ಜೂನ್ ೨೪ ವೆನೆಜುವೆಲಾದಲ್ಲಿ ’ಬ್ಯಾಟಲ್ ಆಫ್ ಕರಾಬೊಬೊ’ ಸರಣಿಯ ರಾಷ್ಟ್ರೀಯ ರಜಾ ದಿನವಾಗಿದ್ದರಿಂದ ಬಹುತೇಕ ಜನರು ಕಚೇರಿಗಳ ಬದಲಿಗೆ ಮನೆಗಳಲ್ಲೇ ಇದ್ದರು. ಇದು ವಸತಿ ಸಮುಚ್ಚಯಗಳು ಕುಸಿದಾಗ ಭಾರಿ ಪ್ರಮಾಣದ ಜನರು ಸಿಲುಕಿಕೊಳ್ಳಲು ಕಾರಣವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪನದ ತೀವ್ರತೆಗೆ ರಾಜಧಾನಿ ಕಾರಕಾಸ್ ಧೂಳಿನ ಮಯವಾಗಿತ್ತು. ನೂರಾರು ಬಹುಮಹಡಿ ಕಟ್ಟಡಗಳು ಇಸ್ಪೀಟ್ ಎಲೆಗಳಂತೆ ಕುಸಿದು ಬಿದ್ದಿವೆ. ರಸ್ತೆಗಳು ಮತ್ತು ಹೆದ್ದಾರಿಗಳು ಸೀಳಿಹೋಗಿವೆ.
“ಅದು ಒಂದು ಹಾರರ್ ಸಿನಿಮಾದಂತಿತ್ತು. ಇಡೀ ನಗರವೇ ಧೂಳಿನ ಮಯವಾಗಿತ್ತು, ಕಣ್ಣಿಗೆ ಏನೂ ಕಾಣಿಸುತ್ತಿರಲಿಲ್ಲ. ನಾವು ಅವಶೇಷಗಳನ್ನು ದಾಟಿಕೊಂಡು, ಪ್ರಾಣ ಉಳಿಸಿಕೊಳ್ಳಲು ಓಡಬೇಕಾಯಿತು,” ಎಂದು ಕಾರಕಾಸ್ ನಿವಾಸಿ ಮಾರಿಯಾ ಅಲೆಜಾಂಡ್ರಾ ಕಣ್ಣೀರಿಟ್ಟಿದ್ದಾರೆ. ರಾಜಧಾನಿಯ ಶ್ರೀಮಂತ ಪ್ರದೇಶವಾದ ಅಲ್ಟಾಮಿರಾದಲ್ಲಿ ದೊಡ್ಡ ವಸತಿ ಸಮುಚ್ಚಯಗಳು ನೆಲಸಮಗೊಂಡಿದ್ದು, ತಮ್ಮ ಕುಟುಂಬಸ್ಥರನ್ನು ಹುಡುಕಲು ಜನರು ಬರಿಗೈಯಲ್ಲೇ ಅವಶೇಷಗಳನ್ನು ಸರಿಸುತ್ತಿರುವುದು ಬೀಕರ ದೃಶ್ಯ ಭೂಕಂಪನ ತೀವ್ರತೆಗೆ ಸಾಕ್ಷಿಯಾಗಿತ್ತು.

೧ ಲಕ್ಷ ಮೀರಬಹುದೇ ಸಾವಿನ ಸಂಖ್ಯೆ?


ಸದ್ಯಕ್ಕೆ ಅಧಿಕೃತವಾಗಿ ೩೨ ಸಾವುಗಳು ವರದಿಯಾಗಿದ್ದರೂ, ನೈಜ ಪರಿಸ್ಥಿತಿ ಅತ್ಯಂತ ಭೀಕರವಾಗಿದೆ. ಅಮೆರಿಕದ ಭೂಗರ್ಭ ಸಮೀಕ್ಷಾ ಇಲಾಖೆ ಬಿಡುಗಡೆ ಮಾಡಿರುವ ’ಪೇಜರ್’ ಮುನ್ಸೂಚನೆಯ ಪ್ರಕಾರ, ಈ ಭೂಕಂಪನದಿಂದ ಸಾವಿನ ಸಂಖ್ಯೆ ೧೦,೦೦೦ ದಿಂದ ೧ ಲಕ್ಷದವರೆಗೆ ತಲುಪುವ ಸಾಧ್ಯತೆ ಶೇ. ೩೭ ರಷ್ಟಿದೆ. ಸಂಪರ್ಕ ಸಾಧನಗಳು ಮತ್ತು ಇಂಟರ್ನೆಟ್ ಸಂಪೂರ್ಣ ಕಡಿತಗೊಂಡಿರುವುದರಿಂದ ದುರಂತದ ನಿಖರ ಮಾಹಿತಿ ಲಭ್ಯವಾಗುತ್ತಿಲ್ಲ. ಮೊದಲ ಎರಡು ಪ್ರಮುಖ ಕಂಪನಗಳ ನಂತರ ೪.೯ ರಿಂದ ೬.೪ ತೀವ್ರತೆಯ ಕನಿಷ್ಠ ೨೦ಕ್ಕೂ ಹೆಚ್ಚು ಆಫ್ಟರ್‌ಶಾಕ್‌ಗಳು (ನಂತರದ ಕಂಪನಗಳು) ದಾಖಲಾಗಿರುವುದು ರಕ್ಷಣಾ ಕಾರ್ಯಾಚರಣೆಗೆ ಭಾರಿ ಹಿನ್ನಡೆ ತಂದಿದೆ.

ಕರಾವಳಿ ಬಂದರು ನಗರವಾದ ಲಾ ಗುವೈರಾ ಭೂಕಂಪಕ್ಕೆ ಸಂಪೂರ್ಣ ತತ್ತರಿಸಿದ್ದು, ಅಲ್ಲಿನ ಪ್ರಸಿದ್ಧ ’ಎಡ್ವರ್ಡ್ಸ್ ಹೋಟೆಲ್ ಬೂಟಿಕ್’ ಸೇರಿದಂತೆ ಕಡಲತೀರದ ಹಲವು ಕಟ್ಟಡಗಳು ನೆಲಸಮವಾಗಿವೆ. ವೆನೆಜುವೆಲಾದ ಮುಖ್ಯ ಅಂತರರಾಷ್ಟ್ರೀಯ ಹೆಬ್ಬಾಗಿಲಾದ ’ಸೈಮನ್ ಬೊಲಿವರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ದ ಕಟ್ಟಡಕ್ಕೆ ತೀವ್ರ ಹಾನಿಯಾಗಿದ್ದು, ವಿಮಾನ ನಿಲ್ದಾಣವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಕಾರಕಾಸ್ ನಗರದ ಮೆಟ್ರೋ ಮತ್ತು ರೈಲು ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ.


ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ


ಪರಿಸ್ಥಿತಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ವೆನೆಜುವೆಲಾದ ಮಧ್ಯಂತರ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ದೇಶಾದ್ಯಂತ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ರಾಷ್ಟ್ರೀಯ ಅಸೆಂಬ್ಲಿ ಮುಖ್ಯಸ್ಥ ಜಾರ್ಜ್ ರೊಡ್ರಿಗಸ್ ಮತ್ತು ಆಂತರಿಕ ಸಚಿವ ಡಿಯೋಸ್ಡಾಡೋ ಕ್ಯಾಬೆಲ್ಲೊ ಅವರೊಂದಿಗೆ ತುರ್ತು ಸಭೆ ನಡೆಸಿದ ಅವರು, ರಕ್ಷಣಾ ಪಡೆಗಳು ಮತ್ತು ರೆಡ್ ಕ್ರಾಸ್ ಸಂಸ್ಥೆಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಿದ್ದಾರೆ.

“ಜನರು ಶಾಂತಿ ಮತ್ತು ಒಗ್ಗಟ್ಟು ಕಾಯ್ದುಕೊಳ್ಳಬೇಕು. ಹಾನಿಗೊಳಗಾದ ಕಟ್ಟಡಗಳಿಂದ ತಕ್ಷಣ ಹೊರಬರಬೇಕು” ಎಂದು ಸಚಿವ ಡಿಯೋಸ್ಡಾಡೋ ಕ್ಯಾಬೆಲ್ಲೊ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಸದ್ಯ ಜೆಸಿಬಿ ಹಾಗೂ ಅತ್ಯಾಧುನಿಕ ಯಂತ್ರಗಳ ಮೂಲಕ ಕತ್ತಲಲ್ಲಿಯೂ ಅವಶೇಷಗಳ ಅಡಿಯಲ್ಲಿ ಬದುಕುಳಿದವರಿಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ.

ನೆರವು ನೀಡಲು ಸಿದ್ಧ: ಮೋದಿ


ವೆನೆಜುವೆಲಾದಲ್ಲಿ ಎರಡು ಅತ್ಯಂತ ಪ್ರಬಲ ಭೂಕಂಪಗಳು ಸಂಭವಿಸಿದ್ದು, ಇಡೀ ದೇಶವೇ ನಡುಗಿದೆ.


ಸದ್ಯ ವೆನೆಜುವೆಲಾ ಭೂಕಂಪದಲ್ಲಿ ಸಂಭವಿಸಿದ ಜೀವಹಾನಿಗೆ ಭಾರತದ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು,ಭಾರತದಿಂದ ಸಾಧ್ಯವಿರುವ ಎಲ್ಲಾ ಸಹಾಯ ಮಾಡುವುದಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.


ಅವಳಿ ಭೂಕಂಪದಿಂದ ಮೃತಪಟ್ಟವರಿಗೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ, ವೆನೆಜುವೆಲಾ ನಡೆಯುತ್ತಿರುವ ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ಭಾರತ ಕೈ ಜೋಡಿಸಲಿದೆ ಎಂದು ತಿಳಿಸಿದ್ದಾರೆ.


ಇನ್ನು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿರುವ ಪ್ರಧಾನಿ ಮೋದಿ ವೆನೆಜುವೆಲಾಗೆ ಅಗತ್ಯವಿರುವ ಯಾವುದೇ ಸಹಾಯವನ್ನು ನೀಡಲು ಭಾರತ ಸಿದ್ಧವಾಗಿದೆ ಎಂದು ಹೇಳಿದರು.

  • ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್
  • ಸಾವಿನ ಸಂಖ್ಯೆ ೧ ಲಕ್ಷಕ್ಕೇರುವ ಭೀತಿ!
  • ಮೊದಲ ಭೂಕಂಪನ ತೀವ್ರತೆ ೭.೨
  • ಮತ್ತೊಂದು ಭೂಕಂಪನ ತೀವ್ರತೆ ೭.೫
  • ೧೦,೦೦೦ ದಿಂದ ೧ ಲಕ್ಷದವರೆಗೆ ತಲುಪುವ ಸಾಧ್ಯತೆ