
ಬೆಂಗಳೂರು, ಜೂ. ೨೩- ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಶಾಸಕರ ಬಗ್ಗೆ ರಾಜ್ಯ ಬಿಜಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ವರಿಷ್ಠರಿಗೆ ವಿವರ ನೀಡಿ, ಅಡ್ಡ ಮತದಾನ ಮಾಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಶಾಸಕರುಗಳ ಪಟ್ಟಿಯ ಜತೆ ಇಂದು ದೆಹಲಿಗೆ ತೆರಳಿರುವ ಬಿ.ವೈ. ವಿಜಯೇಂದ್ರ ಮತ್ತು ಆರ್. ಅಶೋಕ್ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಭೇಟಿ ಮಾಡಿ ಅಡ್ಡ ಮತದಾನ ಮಾಡಿದ ಶಾಸಕರ ಬಗ್ಗೆ ಮಾಹಿತಿ ನೀಡಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಆರೇಳು ಶಾಸಕರು ಅಡ್ಡ ಮತದಾನ ಮಾಡಿದ್ದಾರೆ. ಈ ಬಗ್ಗೆ ನಮಗೆ ಮಾಹಿತಿ ಇದೆ. ಅಡ್ಡ ಮತದಾನ ಮಾಡಿರುವವರ ಬಗ್ಗೆ ತಮಗೂ ದೂರವಾಣಿ ಮಾಡಿ ವಿವರ ನೀಡಿದ್ದೇವೆ ಎಂದು ವಿಜಯೇಂದ್ರ ಮತ್ತು ಆರ್. ಅಶೋಕ್ ಅವರು ಎಲ್ಲವನ್ನೂ ನಿತಿನ್ ನಬಿನ್ ರವರ ಗಮನಕ್ಕೆ ತಂದರು.
ಪಕ್ಷಕ್ಕೆ ದ್ರೋಹ ಮಾಡಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಅಡ್ಡ ಮತದಾನ ಮಾಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಈ ಇಬ್ಬರು ನಾಯಕರು ವರಿಷ್ಠರಲ್ಲಿ ಭಿನ್ನವಿಸಿಕೊಂಡರು.
ಅಡ್ಡ ಮತದಾನ ಮಾಡಿದ ಶಾಸಕರ ಬಗ್ಗೆ ಮೌಖಿಕ ಮಾಹಿತಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಸಾಕ್ಷ್ಯಗಳ ಸಮೇತ ವಿವರಿಸಿದ ಬಿ.ವಿ. ವಿಜಯೇಂದ್ರ ಹಾಗೂ ಆರ್. ಅಶೋಕ್ ಅವರು, ಅಡ್ಡ ಮತದಾನ ಮಾಡಿದವರನ್ನು ಪತ್ತೆಹಚ್ಚಲು ವಿಧಾನ ಪರಿಷತ್ ಸದಸ್ಯ ಹಾಗೂ ಹಿರಿಯ ನಾಯಕ ಸಿ.ಟಿ. ರವಿ ನೇತೃತ್ವದಲ್ಲಿ ಸತ್ಯ ಶೋಧನಾ ಸಮಿತಿಯನ್ನು ರಚಿಸಿದ್ದೇವೆ. ಈ ಸಮಿತಿಯು ಇನ್ನೆರಡು-ಮೂರು ದಿನಗಳಲ್ಲಿ ವರದಿ ನೀಡಲಿದೆ. ಈ ವರದಿಯನ್ನು ತಮಗೆ ಕಳುಹಿಸಿ ಕೊಡುತ್ತೇವೆ. ಅದರಂತೆ ಅಡ್ಡ ಮತದಾನ ಮಾಡಿದ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಈ ಇಬ್ಬರು ನಾಯಕರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ರವರಲ್ಲಿ ಭಿನ್ನವಿಸಿಕೊಂಡರು.
ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ಎಲ್ಲಾ ಶಾಸಕರಿಗೂ ಯಾರು ಯಾರಿಗೆ ಮತ ಹಾಕಬೇಕು ಎಂಬ ಬಗ್ಗೆ ನಿರ್ದಿಷ್ಟ ಸೂಚನೆಯನ್ನು ನೀಡಲಾಗಿತ್ತು. ಶಾಸಕರ ಸಭೆಯನ್ನು ನಡೆಸಿ ಎಲ್ಲವರನ್ನು ವಿವರಿಸಿದ್ದೆವು. ಆದರೂ ಕೆಲ ಶಾಸಕರು ಪಕ್ಷದ ಸೂಚನೆಯನ್ನು ವಿರೋಧಿಸಿ ಅಡ್ಡ ಮತದಾನ ಮಾಡಿದ್ದಾರೆ. ಇಂಥವರ ವಿರುದ್ಧ ಕ್ರಮ ಆಗಲೇ ಬೇಕು. ಕಠಿಣ ಕ್ರಮದ ಮೂಲಕ ಒಂದು ಖಡಕ್ ಎಚ್ಚರಿಕೆಯನ್ನು ನೀಡುವ ಅಗತ್ಯವಿದೆ ಎಂದು ಈ ಇಬ್ಬರು ನಾಯಕರು ವರಿಷ್ಠರ ಮುಂದೆ ಪ್ರತಿಪಾದಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಆರ್. ಅಶೋಕ್ ರವರ ವಿವರಣೆಯನ್ನು ಆಲಿಸಿದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಸತ್ಯಶೋಧನಾ ಸಮಿತಿ ವರದಿ ಬಂದ ನಂತರ ಅಡ್ಡ ಮತದಾನ ಮಾಡಿದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳೋಣ. ಪಕ್ಷದಲ್ಲಿ ಶಿಸ್ತು ಮುಖ್ಯ, ಪಕ್ಷಕ್ಕೆ ದ್ರೋಹ ಮಾಡಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು ಎನ್ನಲಾಗಿದೆ.
ಅಡ್ಡ ಮತದಾನ ಮಾಡಿದ ನಂತರ ರಾಜಕೀಯ ಬೆಳವಣಿಗೆಗಳು, ಮೈತ್ರಿ ಪಕ್ಷದ ನಾಯಕ ಕೇಂದ್ರ ಸಚಿವ ಕುಮಾರಸ್ವಾಮಿಯವರ ಮಾತುಗಳು ಎಲ್ಲದರ ಬಗ್ಗೆಯೂ ಈ ಇಬ್ಬರು ನಾಯಕರುಗಳು ನಿತಿನ್ ನಬಿನ್ ರವರೊಂದಿಗೆ ಚರ್ಚಿಸಿದರು ಎನ್ನಲಾಗಿದೆ.
ಪಕ್ಷದಲ್ಲಿನ ಕೆಳ ಬೆಳವಣಿಗೆಗಳ ಬಗ್ಗೆಯೂ ಈ ಇಬ್ಬರು ನಾಯಕರು ವರಿಷ್ಠರ ಜತೆ ಚರ್ಚಿಸಿ ಕೆಲ ಮುಖಂಡರುಗಳು ಪಕ್ಷದ ವಿರುದ್ಧ ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ಗಮನಕ್ಕೆ ತಂದು ಇವರ ವಿರುದ್ಧವೂ ಕ್ರಮಕ್ಕೆ ಮನವಿ ಮಾಡಿದರು ಎಂದು ಹೇಳಲಾಗಿದೆ.
ಶಾಸಕರಿಗೆ ನೋಟಿಸ್: ಅಮಾನತ್ತು
ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಶಾಸಕರಿಗೆ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಿ ಅವರನ್ನು ಅಮಾನತ್ತು ಮಾಡುವ ಸಾಧ್ಯತೆ ಇದೆ.
ಅಡ್ಡ ಮತದಾನ ಮಾಡಿರುವ ಶಾಸಕರನ್ನು ಪತ್ತೆ ಹಚ್ಚಲು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ನೇತೃತ್ವದಲ್ಲಿ ರಚಿಸಲಾಗಿರುವ ಸತ್ಯಶೋಧನಾ ಸಮಿತಿ ಇನ್ನೆರಡು ಮೂರು ದಿನಗಳಲ್ಲಿ ವರದಿ ನೀಡಲಿದ್ದು, ಈ ವರದಿ ಆಧರಿಸಿ ಅಡ್ಡ ಮತದಾನ ಮಾಡಿರುವ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಇಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿ ಮಾಡಿ ಎಲ್ಲ ವಿವರಣೆಗಳನ್ನು ನೀಡಿದ್ದು, ಎಲ್ಲವನ್ನು ಆಲಿಸಿರುವ ವರಿಷ್ಠರು ಅಡ್ಡ ಮತದಾನ ಮಾಡಿರುವ ಶಾಸಕರ ವಿರುದ್ಧ ಗರಂ ಆಗಿದ್ದು, ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ.
ಸಿ.ಟಿ. ರವಿ ಸಮಿತಿಯ ವರದಿ ಬಂದ ನಂತರ ಅಡ್ಡ ಮತದಾನ ಮಾಡಿರುವ ಶಾಸಕರುಗಳಿಗೆ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಿ, ನಂತರ ಅವರನ್ನು ಪಕ್ಷದಿಂದ ಅಮಾನತ್ತು ಅಥವಾ ಉಚ್ಛಾಟನೆ ಮಾಡುವ ಕಠಿಣ ಕ್ರಮವನ್ನು ಬಿಜೆಪಿ ವರಿಷ್ಠರು ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಸುರೇಶ್‌ಕುಮಾರ್, ಸದಾನಂದಗೌಡ ವಿರುದ್ಧವೂ ಗರಂ
ಅಡ್ಡ ಮತದಾನ ಮಾಡಿದ ಶಾಸಕರನ್ನು ಪತ್ತೆಹಚ್ಚಲು ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿಸಲು ನಿರ್ಧರಿಸಿದ್ದ ಪಕ್ಷದ ರಾಜ್ಯಾಧ್ಯಕ್ಷರ ತೀರ್ಮಾನದ ಬಗ್ಗೆ ಬಹಿರಂಗವಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರ ಹಾಕಿದ್ದ ಶಾಸಕ ಸುರೇಶ್‌ಕುಮಾರ್ ವಿರುದ್ಧ ವರಿಷ್ಠರು ಸಿಟ್ಟಾಗಿದ್ದಾರೆ ಎನ್ನಲಾಗಿದೆ.
ಪಕ್ಷದ ಆಂತರಿಕ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಹೇಳುವ ಬದಲು ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿ, ಇಲ್ಲವೇ ದೂರವಾಣಿಯಲ್ಲಿ ಮಾತನಾಡಿ ಧರ್ಮಸ್ಥಳದಲ್ಲಿ ಸಭೆ ಬೇಡ ಎಂದು ಹೇಳಬಹುದಿತ್ತು. ಅದು ಬಿಟ್ಟು ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಅಸಮಾಧಾನ ಹೊರ ಹಾಕಿದ್ದು ಸರಿಯಲ್ಲ ಎಂದು ವರಿಷ್ಠರು ಸುರೇಶ್‌ಕುಮಾರ್ ವಿರುದ್ಧವೂ ಗರಂ ಆಗಿದ್ದಾರೆ ಎನ್ನಲಾಗಿದೆ.
ಪರಿಷತ್ ಚುನಾವಣೆಯಲ್ಲಿ ಶಾಸಕರು ಅಡ್ಡ ಮತದಾನ ಮಾಡುವುದು ತಮಗೆ ಮೊದಲೇ ಗೊತ್ತಿತ್ತು. ಕಾಂಗ್ರೆಸ್ ಮತ್ತು ಬಿಜೆಪಿಯ ಕೆಲ ನಾಯಕರು ಚುನಾವಣೆಗೂ ಮುನ್ನ ರಹಸ್ಯ ಸಭೆ ನಡೆಸಿದ್ದರು ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ವಿರುದ್ಧವೂ ವರಿಷ್ಠರು ಸಿಟ್ಟಾಗಿದ್ದಾರೆ.
ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ, ಕೋರ್ ಕಮಿಟಿ ಸದಸ್ಯರಾಗಿರುವ ಸದಾನಂದಗೌಡ ಅವರು ಅಡ್ಡ ಮತದಾನ ಆಗುವ ಮಾಹಿತಿ ಗೊತ್ತಿದ್ದರೂ ಅದನ್ನು ಪಕ್ಷದ ಗಮನಕ್ಕೆ ತರದೆ ಅಡ್ಡ ಮತದಾನವಾದ ಮೇಲೆ ತಮಗೆ ಮೊದಲೇ ಗೊತ್ತಿತ್ತು ಎಂದು ಹೇಳಿರುವುದು ವರಿಷ್ಠರ ಸಿಟ್ಟಿಗೆ ಕಾರಣವಾಗಿದೆ.
ಈ ವಿಚಾರ ಗೊತ್ತಿದ್ದರೂ ಅದನ್ನು ಪಕ್ಷದ ನಾಯಕರ ಗಮನಕ್ಕೆ ತರದ ಸದಾನಂದಗೌಡರ ನಡವಳಿಕೆ ಬಗ್ಗೆಯೂ ವರಿಷ್ಠರು ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದ್ದು, ಮುಂದೆ ಯಾರೇ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ವರಿಷ್ಠರು ನೀಡಲಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.




























