Home ಜಿಲ್ಲೆ ಆರೋಗ್ಯಕರ ಜೀನವ ಶೈಲಿ ಕುರಿತು ಅರಿವು ಮೂಡಿಸುವುದು “ಸೈಕಲ್ ಸವಾಡ್ ಸ್ವಚ್ಛತಾ ಅಭಿಯಾನ  ಮುಖ್ಯ ಉದ್ದೇಶ:...

ಆರೋಗ್ಯಕರ ಜೀನವ ಶೈಲಿ ಕುರಿತು ಅರಿವು ಮೂಡಿಸುವುದು “ಸೈಕಲ್ ಸವಾಡ್ ಸ್ವಚ್ಛತಾ ಅಭಿಯಾನ  ಮುಖ್ಯ ಉದ್ದೇಶ: ಎಂ.ಉಮೇಶ್

ಸಂಜೆವಾಣಿ ವಾರ್ತೆ

ಹೊಸಪೇಟೆ.ಜೂ.8  ಸಾರ್ವಜನಿಕರಲ್ಲಿ ಸ್ವಚ್ಛತೆ ಹಾಗೂ ಆರೋಗ್ಯಕರ ಜೀವನ ಶೈಲಿಯ ಮಹತ್ವ ಕುರಿತು ಅರಿವು ಮೂಡಿಸುವುದು ಸೈಕಲ್ ಸವಾಡ್ ಸ್ವಚ್ಛತಾ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಎಂ.ಉಮೇಶ್ ಹೇಳಿದರು.

ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆ, ಜಿಲ್ಲಾ ಪಂಚಾಯತ್ ವಿಜಯನಗರ ಹಾಗೂ ತಾಲೂಕು ಪಂಚಾಯತ್ ಹೊಸಪೇಟೆ ಇವರ ಸಂಯುಕ್ತಾಶ್ರಯದಲ್ಲಿ ‘ಫಿಟ್ ಇಂಡಿಯಾ ಆಂದೋಲನ ಹಾಗೂ ವಿಶ್ವ ಬೈಸಿಕಲ್ ದಿನಾಚರಣೆ-2026 ಅಂಗವಾಗಿ “ಸೈಕಲ್ ಸವಾಡ್ ಸ್ವಚ್ಛತಾ ಕಾರ್ಯ” ಅಭಿಯಾನಕ್ಕೆ  ಸ್ಥಳೀಯ ತಾಲೂಕು ಪಂಚಾಯಿತಿ ಕಛೇರಿ ಅವರಣದಲ್ಲಿ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು,  ಗ್ರಾಮೀಣ ಮತ್ತು ನಗರ ಪ್ರದೇಶದ ಜನರಿಗೆ ಉತ್ತಮ ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆ ಕುರಿತು ಅರಿವು ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು. ಈ ನಿಟ್ಟಿನಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ನಾವು ಸೇವಿಸುವ ಆಹಾರ ಹಾಗೂ ಕುಡಿಯುವ ನೀರು ಅಶುಚಿಯಾಗಿದ್ದಲ್ಲಿ ದೈಹಿಕ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರಿ, ದೇಹದ ಆರೋಗ್ಯ ಅಸಮತೋಲನಕ್ಕೆ ಕಾರಣ ವಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರ ಜೀವನ ಶೈಲಿಯಲ್ಲಿ ಬದಲಾವಣೆ ತರಲು ದೈಹಿಕ ಆರೋಗ್ಯದ ಹೆಚ್ಚು ಒತ್ತು ನೀಡಬೇಕಾಗಿದೆ.

 ಗ್ರಾಮೀಣ ಹಾಗೂ ನಗರ ಭಾಗದಲ್ಲಿ ಬಯಲು ಶೌಚ, ಮಲಮೂತ್ರ ವಿಸರ್ಜನೆ ಮಾಡುವುದರಿಂದ ವಿವಿಧ ಸಾಂಕ್ರಾಮಿಕ ರೋಗ ಬಾಧೆಗೆ ತುತ್ತಾಗಿ, ದೇಹದ ಆರೋಗ್ಯದ ಮೇಲೆ ರಕ್ತಹೀನತೆ, ವಾಂತಿ, ಪೋಲಿಯೋ, ಕಾಲರಾ, ವಿವಿಧ ಸಾಂಕ್ರಾಮಿಕ ಸೋಂಕಿಗೆ ತುತ್ತಾಗಬೇಕಾಗುತ್ತದೆ. ಈ ಉದ್ದೇಶದಿಂದ ನಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು, ಪ್ರತಿಯೊಬ್ಬರು ದೇಹದ ಆರೋಗ್ಯದ ಹಿತದೃಷ್ಟಿಯಿಂದ ಬಯಲು ಮಲ ಮೂತ್ರ ವಿಸರ್ಜನೆ ಮಾಡದೇ, ಶೌಚಾಲಯ ಬಳಕೆ ಮಾಡುವ ಮೂಲಕ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಬೇಕು, ಹಾಗೂ ಪ್ರತಿಯೊಬ್ಬರು ಸುಂದರ ಸ್ವಚ್ಚ ನಗರ ನಿರ್ಮಾಣ ಮಾಡಲು ಕೈ ಜೋಡಿಸಬೇಕು,  ಉತ್ತಮ ಆರೋಗ್ಯ ಸ್ವಚ್ಚ ಪರಿಸರದಿಂದ ಮಾತ್ರ ಸ್ವಚ್ಚ ನಗರ ನಿರ್ಮಾಣ ಸಾಧ್ಯ ಎಂಬುದನ್ನು ಅರಿತು ಜಾಗೃತರಾಗಬೇಕು ಎಂದರು.

ಶುದ್ಧ ಆಹಾರ ಸೇವನೆ ಹಾಗೂ ಕುಡಿಯುವ ನೀರು ಸೇವನೆ ಹಾಗೂ ದೈಹಿಕ ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸೈಕಲ್ ಜಾಥಾವನ್ನು ಹಮ್ಮಿಕೊಂಡಿದ್ದು, ಕೇಂದ್ರ ಸರ್ಕಾರದ ಫಿಟ್ ಇಂಡಿಯಾ ಚಳವಳಿಯು ಪ್ರತಿಯೊಬ್ಬ ನಾಗರಿಕರ ಜೀವನದಲ್ಲಿ ದೈಹಿಕ ಫಿಟ್ನೆಸ್ನ್ನು ಅವಿಭಾಜ್ಯ ಭಾಗವನ್ನಾಗಿಸುವ ಗುರಿಯನ್ನು ಹೊಂದಿದೆ. ಅದರ ಭಾಗವಾಗಿ ದೇಶಾದ್ಯಂತ ನಡೆಯುತ್ತಿರುವ “ಸಂಡೇಸ್ ಆನ್ ಸೈಕಲ್” ಅಭಿಯಾನವು ಈಗಾಗಲೇ 7 ಕೋಟಿಗೂ ಅಧಿಕ ಜನರನ್ನು ತಲುಪಿದ್ದು. ಸೈಕಲ್ ಚಾÀಲನಾ ಅಭಿಯಾನವು ನಮ್ಮ ಆರೋಗ್ಯ ವೃದ್ಧಿಸುವುದರ ಜೊತೆಗೆ ಪರಿಸರ ಸಂರಕ್ಷಣೆಯಲ್ಲಿಯೂ ಮಹತ್ವದ ಪಾತ್ರ ವಹಿಸುತ್ತದೆ. ಸ್ವಚ್ಛತಾ ಭಾರತದ ಪ್ರತಿಜ್ಞೆಯೊಂದಿಗೆ ಫಿಟ್ ಇಂಡಿಯಾ ಆಂದೋಲನವು ಆರೋಗ್ಯಕರ ಭಾರತ ನಿರ್ಮಾಣದತ್ತ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.

ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎಂಡಿ ಆಲಂಭಾಷಾ ಮಾತನಾಡಿ, ಇಂದಿನ ಆಧುನಿಕ ಜೀವನಶೈಲಿಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಅವುಗಳನ್ನು ತಡೆಗಟ್ಟಲು ಯೋಗ, ಕ್ರೀಡೆ, ಸೈಕ್ಲಿಂಗ್, ವಾಕಿಂಗ್ ಹಾಗೂ ಇತರೆ ದೈಹಿಕ ಚಟುವಟಿಕೆಗಳನ್ನು ಜೀವನದ ಭಾಗವಾಗಿಸಿಕೊಳ್ಳಬೇಕು. ಫಿಟ್ ಇಂಡಿಯಾ ಆಂದೋಲನವು ಆರೋಗ್ಯಕರ ಹಾಗೂ ಚೈತನ್ಯಮಯ ಸಮಾಜ ನಿರ್ಮಾಣಕ್ಕೆ ಪೂರಕವಾಗಿದೆ ಎಂದು ತಿಳಿಸಿದರು.

ಸದರಿ ಅಭಿಯಾನದ ಸೈಕಲ್ ಜಾಥಾವು ಸ್ಥಳೀಯ ತಾ.ಪಂ ಕಚೇರಿ ಆವರಣದಿಂದ ಪ್ರಾರಂಭವಾಗಿ, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಜಿಲ್ಲಾ ಪಂಚಾಯತ್ ಕಚೇರಿವರೆಗೆ ಸಾಗಿತು. ಬಳಿಕ ಭಾಗವಹಿಸಿದ ಸೈಕ್ಲಿಸ್ಟ್ಗಳು ಸರಪಳಿ ರಚಿಸಿ ಫಿಟ್ ಇಂಡಿಯಾ ಹಾಗೂ ಸ್ವಚ್ಛತಾ ಜಾಗೃತಿ ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ಅಭಿಯಾನದಲ್ಲಿ ತಾ.ಪಂ.ವ್ಯವಸ್ಥಾಪಕ ಉಮಾಕಾಳೆ, ಎನ್.ಆರ್.ಎಲ್.ಎಂ ಯೋಜನೆಯ ಟಿಪಿಎಂ ಕೊಟ್ರೇಶ್,  ಸ್ವಚ್ಛ ಭಾರತ್ ಮಿಷನ್ ಯೋಜನೆಯ ಜಿಲ್ಲಾ ಸಮಾಲೋಚಕ  ಹನುಮಂತ ನಾಯಕ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಸಿಬ್ಬಂದಿಗಳು,  ವಿವಿಧ ಇಲಾಖೆಗಳ ಅಧಿಕಾರಿಗಳು,  ಸಾರ್ವಜನಿಕರು, ಸ್ವಯಂ ಸೇವಕರು, ಯುವಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.