
ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಜೋಡಿಯ ‘ಅಯೋಗ್ಯ 2’ ಸಿನಿಮಾ ಚಿತ್ರಮಂದಿರಗಳಲ್ಲಿ 50 ದಿನಗಳ ಪ್ರದರ್ಶನ ಪೂರ್ಣಗೊಳಿಸಿದೆ. ಈ ಮೂಲಕ ಪ್ರಸಕ್ತ ವರ್ಷದ ಮೊದಲ 50 ದಿನ ಪೂರೈಸಿದ ಸಿನಿಮಾ ಎಂಬ ಸಂಭ್ರಮವನ್ನು ಚಿತ್ರತಂಡ ಹಂಚಿಕೊಂಡಿದೆ.
ಬಿಡುಗಡೆಯ ಆರಂಭದಲ್ಲೇ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದ ಸಿನಿಮಾ, ಕರ್ನಾಟಕದ 25ಕ್ಕೂ ಅಧಿಕ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನ ಕಂಡಿದೆ. ಪ್ರೇಕ್ಷಕರು ಚಿತ್ರಮಂದಿರಗಳಿಂದ ದೂರವಾಗುತ್ತಿದ್ದಾರೆ ಎಂಬ ಮಾತುಗಳ ನಡುವೆಯೂ ‘ಅಯೋಗ್ಯ 2’ಗೆ ದೊರೆತ ಸ್ಪಂದನ ಚಿತ್ರತಂಡದ ಉತ್ಸಾಹ ಹೆಚ್ಚಿಸಿದೆ.
50 ದಿನಗಳ ಸಂಭ್ರಮವನ್ನು ಮೈಸೂರಿನ ಲಿಡೋ ಚಿತ್ರಮಂದಿರದಲ್ಲಿ ಪ್ರೇಕ್ಷಕರು ಹಾಗೂ ಅಭಿಮಾನಿಗಳೊಂದಿಗೆ ಆಚರಿಸಲಾಯಿತು. ನಟ ಸತೀಶ್ ನೀನಾಸಂ, ನಿರ್ದೇಶಕ ಮಹೇಶ್ ಕುಮಾರ್ ಸೇರಿದಂತೆ ಚಿತ್ರತಂಡದ ಸದಸ್ಯರು ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸತೀಶ್ ನೀನಾಸಂ, “ಸದ್ಯದ ಪರಿಸ್ಥಿತಿಯಲ್ಲಿ ಒಂದೆರಡು ವಾರ ಸಿನಿಮಾ ಚಿತ್ರಮಂದಿರಗಳಲ್ಲಿ ಉಳಿಯುವುದೇ ದೊಡ್ಡ ಸವಾಲು. 50 ದಿನಗಳ ಪ್ರದರ್ಶನಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ. ಆದಷ್ಟು ಬೇಗ ‘ಅಯೋಗ್ಯ-3’ ಮೂಲಕ ಪ್ರೇಕ್ಷಕರ ಮುಂದೆ ಬರುವ ಆಲೋಚನೆಯಿದೆ” ಎಂದರು.
ಎಸ್.ವಿ.ಸಿ. ಫಿಲಂಸ್ ಬ್ಯಾನರ್‌ನಲ್ಲಿ ಎಂ. ಮುನೇಗೌಡ ನಿರ್ಮಿಸಿರುವ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ. ರವಿಚಂದ್ರನ್, ರವಿಶಂಕರ್, ಸಾಧುಕೋಕಿಲ, ಶಿವರಾಜ್ ಕೆ.ಆರ್. ಪೇಟೆ, ಅರುಣಾ ಬಾಲರಾಜ್ ಹಾಗೂ ಗಿರಿ ಶಿವಣ್ಣ ತಾರಾಗಣದಲ್ಲಿದ್ದಾರೆ.





















