Home ಜಿಲ್ಲೆ ಮಧ್ಯಾಹ್ನ 12 ಗಂಟೆಯಾದರೂ ಬಿಕೋ ಎನ್ನುತ್ತಿರುವ ಪಟ್ಟಣ ಪಂಚಾಯಿತಿ: ಸಾರ್ವಜನಿಕರ ಕೆಲಸಗಳಿಗೆ ಅಧಿಕಾರಿಗಳ ನಿರ್ಲಕ್ಷ್ಯ?

ಮಧ್ಯಾಹ್ನ 12 ಗಂಟೆಯಾದರೂ ಬಿಕೋ ಎನ್ನುತ್ತಿರುವ ಪಟ್ಟಣ ಪಂಚಾಯಿತಿ: ಸಾರ್ವಜನಿಕರ ಕೆಲಸಗಳಿಗೆ ಅಧಿಕಾರಿಗಳ ನಿರ್ಲಕ್ಷ್ಯ?

ಔರಾದ್: ಪಟ್ಟಣ ಪಂಚಾಯಿತಿ ಕಚೇರಿಯು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ತ್ವರಿತವಾಗಿ ಪರಿಹರಿಸುವ ಪ್ರಮುಖ ಆಡಳಿತ ಕೇಂದ್ರವಾಗಿದ್ದರೂ, ಮಧ್ಯಾಹ್ನ 12 ಗಂಟೆಯಾದರೂ ಕಚೇರಿ ಬಿಕೋ ಎನ್ನುತ್ತಿರುವ ದೃಶ್ಯ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಸರ್ಕಾರಿ ಕಚೇರಿ ಕಾರ್ಯನಿರ್ವಹಿಸುವ ವೇಳೆಯಲ್ಲಿಯೇ ಹಲವು ಒಂದೆರಡು ಸಿಬ್ಬಂದಿ ಬಿಟ್ಟರೆ ಉಳಿದ ಸಿಬ್ಬಂದಿ ಮತ್ತು ಅಧಿಕಾರಿಗಳು ತಮ್ಮ ಸ್ಥಾನಗಳಲ್ಲಿ ಕಾಣಿಸದಿರುವುದರಿಂದ ವಿವಿಧ ಕೆಲಸಗಳಿಗಾಗಿ ಆಗಮಿಸಿದ ಸಾರ್ವಜನಿಕರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನನ-ಮರಣ ಪ್ರಮಾಣಪತ್ರ, ತೆರಿಗೆ, ಕುಡಿಯುವ ನೀರು, ಸ್ವಚ್ಛತೆ ಹಾಗೂ ಇತರ ಆಡಳಿತಾತ್ಮಕ ಸೇವೆಗಳಿಗಾಗಿ ಬಂದ ನಾಗರಿಕರು ಅಧಿಕಾರಿಗಳ ಅನುಪಸ್ಥಿತಿಯಿಂದ ಪರದಾಡುತ್ತಿದ್ದಾರೆ.

ಸಾರ್ವಜನಿಕರ ಪ್ರಕಾರ, ಕಚೇರಿಗೆ ಸಮಯಕ್ಕೆ ಸರಿಯಾಗಿ ಸಿಬ್ಬಂದಿ ಹಾಜರಾಗದಿರುವುದು ಹಾಗೂ ಕೆಲಸಗಳಲ್ಲಿ ವಿಳಂಬವಾಗುತ್ತಿರುವುದು ಸಾಮಾನ್ಯ ಸಂಗತಿಯಾಗಿದ್ದು, ಇದರಿಂದ ಜನರ ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಸಿಬ್ಬಂದಿಯ ಹಾಜರಾತಿಯನ್ನು ಪರಿಶೀಲಿಸಿ, ಸಾರ್ವಜನಿಕರಿಗೆ ಸಮಯಕ್ಕೆ ಸರಿಯಾಗಿ ಸೇವೆ ದೊರೆಯುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.