Home ಜಿಲ್ಲೆ ಹಸಿರು ಸಾಮ್ರಾಜ್ಯ ಬೆಳೆಸೋಣ ಪರಿಸರ ಸಂರಕ್ಷಣೆ  ಮಾಡೋಣ

ಹಸಿರು ಸಾಮ್ರಾಜ್ಯ ಬೆಳೆಸೋಣ ಪರಿಸರ ಸಂರಕ್ಷಣೆ  ಮಾಡೋಣ

(ಸಂಜೆವಾಣಿ ವಾರ್ತೆ)

ಬಳ್ಳಾರಿ, ಸೆ.04: ಪರಿಸರ ಸಂರಕ್ಷಣೆಯನ್ನು ಕೇವಲ ಕಾರ್ಯಕ್ರಮಗಳಿಗೆ ಸೀಮಿತಗೊಳಿಸದೆ, ನಿತ್ಯ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಸಿರುಗುಪ್ಪ ತಹಶೀಲ್ದಾರ್ ಗೌಸಿಯಾಬೆಗಂ ಹೇಳಿದರು.

ಅವರು ಇಂದು ಸಿರುಗುಪ್ಪ

ನಗರದ ಟಿ.ಎಚ್.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚೈತನ್ಯ ಯುವಶಕ್ತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ಭೂಮಿಯ ತಾಪಮಾನ ಏರಿಕೆ ತಡೆಯೋಣ, ಹಸಿರು ಸಾಮ್ರಾಜ್ಯ ಬೆಳೆಸೋಣ’ ಪರಿಸರ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ  ಮಾತನಾಡಿದರು.

ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ, ಅರಣ್ಯ ನಾಶ ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ. ಪ್ರತಿಯೊಬ್ಬರೂ ವಿಶೇಷ ದಿನಗಳಲ್ಲಿ ಸಸಿ ನೆಟ್ಟು, ಅದನ್ನು ಮರವಾಗುವವರೆಗೆ ಪೋಷಿಸುವ ಸಂಕಲ್ಪ ಮಾಡಬೇಕು ಎಂದರು.

.ವಿಜ್ಞಾನ ಸಾಹಿತ್ಯ ಅಂಕಣಕಾರ ಡಾ.ಯು. ಶ್ರೀನಿವಾಸ ಮೂರ್ತಿ ವಿಶೇಷ ಉಪನ್ಯಾಸ ನೀಡಿ, ಹಸಿರುಮನೆ ಅನಿಲಗಳ ಹೆಚ್ಚಳ, ಅರಣ್ಯ ನಾಶ ಹಾಗೂ ಅತಿಯಾದ ಇಂಧನ ಬಳಕೆಯಿಂದ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಪರಿಸರ ಸಂರಕ್ಷಣೆ ನಿತ್ಯದ ಶಿಸ್ತಾಗಬೇಕೆಂದರು.

ಕಾರ್ಯಾಗಾರದಲ್ಲಿ ಪ್ಲಾಸ್ಟಿಕ್ ನಿಯಂತ್ರಣ, ನೀರಿನ ಮಿತ ಬಳಕೆ, ತ್ಯಾಜ್ಯ ವಿಂಗಡಣೆ, ಮಳೆನೀರು ಸಂಗ್ರಹಣೆ ಹಾಗೂ ಮರಗಳ ಸಂರಕ್ಷಣೆ ಕುರಿತು ಮಾಹಿತಿ ನೀಡಲಾಯಿತು. ಬಳಿಕ ಕಾಲೇಜು ಆವರಣದಲ್ಲಿ ಗಣ್ಯರು ಹಾಗೂ ವಿದ್ಯಾರ್ಥಿಗಳು ಸಸಿ ನೆಟ್ಟು ನೀರುಣಿಸಿದರು.

ಗುರುಬಸವ ಮಠದ ಬಸವಭೂಷಣ ಸ್ವಾಮೀಜಿ, ಸಂಸ್ಥೆಯ ಅಧ್ಯಕ್ಷ ಬಿ. ರಮೇಶ ಉಪ್ಪಾರ್, ಪ್ರಭಾರಿ ಪ್ರಾಂಶುಪಾಲ ಡಾ. ಕೆ.ಎಂ. ಚಂದ್ರಕಾಂತ, ಆರ್. ಸದಾಶಿವ, ಡಾ. ಮಧುಸೂದನ್ ಕಾರಿಗನೂರು, ಉಪ್ಪಾರ ವೆಂಕೋಬ, ಎನ್. ಬಸವನಗೌಡ, ನರಸಿಂಹಮೂರ್ತಿ ಮೊದಲಾದವರು ಇದ್ದರು.