Home ಜಿಲ್ಲೆ ಸಾರ್ವಜನಿಕ ಆರೋಗ್ಯದ ಹಕ್ಕಿಗಾಗಿ ಭಗತ್ ಸಿಂಗ್ ರಕ್ತದಾನಿಗಳ ಸಂಘದಿಂದ ಸಹಿ ಸಂಗ್ರಹ

ಸಾರ್ವಜನಿಕ ಆರೋಗ್ಯದ ಹಕ್ಕಿಗಾಗಿ ಭಗತ್ ಸಿಂಗ್ ರಕ್ತದಾನಿಗಳ ಸಂಘದಿಂದ ಸಹಿ ಸಂಗ್ರಹ

ಸಂಜೆವಾಣಿ ವಾರ್ತೆ

ಹೊಸಪೇಟೆ.ಸೆ.28 ಸಾರ್ವಜನಿಕ ಆರೋಗ್ಯದ ಹಕ್ಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಭಗತ್ ಸಿಂಗ್ ರಕ್ತದಾನಿಗಳ ಸಂಘದಿಂದ ಭಾನುವಾರ ಜಿಲ್ಲಾ ಆರೋಗ್ಯಾಧಿಕಾರಿಗಳ ಕಛೇರಿ ಆವರಣದಲ್ಲಿ ಸಹಿ ಸಂಗ್ರಹ ಚಳುವಳಿ ನಡೆಸಲಾಯಿತು.

ಹುತಾತ್ಮ ಭಗತ್ ಸಿಂಗ್ ರವರ 119ನೇ ಜನ್ಮ ದಿನಾಚರಣೆ ಅಂಗವಾಗಿ ಸ್ಥಳೀಯ 60 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಬಿಸ್ಕೇಟ್ ವಿತರಿಸಿದ ಭಗತ್ ಸಿಂಗ್ ರಕ್ತದಾನಿಗಳ ಸಂಘದ ಪದಾಧಿಕಾರಿಗಳು ನಂತರ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ, ಆಸ್ಪತ್ರೆ ಆವರಣದಲ್ಲಿ ಸಹಿ ಸಂಗ್ರಹ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಎಂ.ಸಂತೋಷ್ ಕುಮಾರ್, ಸಾರ್ವಜನಿಕ ಆರೋಗ್ಯದ ಹಕ್ಕಿಗಾಗಿ ಸಹಿ ಸಂಗ್ರಹ ಚಳುವಳಿ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕ ಆಸ್ಪತ್ರೆ ಬಲುಪಡಿಸಲು ಹಾಗೂ ಖಾಸಗಿ ಆಸ್ಪತ್ರೆ ನಿಯಂತ್ರಿಸಲು ಒತ್ತಾಯಿಸಿ ಮತ್ತು ಜಿಲ್ಲಾ ಆಸ್ಪತ್ರೆಯನ್ನು ಅತ್ಯಾಧುನಿಕ ಉಪಕರಣಗಳು, ತಜ್ಞ ವೈದ್ಯರು ಹಾಗೂ ವೈದ್ಯಕೀಯತರ ಸಿಬ್ಬಂದಿಗಳು ಸ್ಟಾಫ್ ನರ್ಸ್ ಹಾಗೂ ಡಿ ಗ್ರೂಪ್ ಸಿಬ್ಬಂದಿಗಳನ್ನು ನೇಮಕವಾದ ನಂತರವೇ ಉದ್ಘಾಟಿಸಬೇಕು. ಸ್ಥಳೀಯ ನೂರು ಹಾಸಿಗೆ ಆಸ್ಪತ್ರೆ ಎಂದಿನಂತೆ ಕಾರ್ಯನಿರ್ವಹಣೆ ಮಾಡಬೇಕು. ಜೊತೆಗೆ ಹೃದಯ ರೋಗ ಸಂಬಂಧಿಸಿದ ಕಾಯಿಲೆಗಳಿಗೆ ದೂರದ ಹುಬ್ಬಳ್ಳಿ , ದಾವಣಗೆರೆ ಮತ್ತು ಬೆಂಗಳೂರಿಗೆ ಹೋಗುವ ಬಡ ರೋಗಿಗಳು ಕೆಲವೊಮ್ಮೆ ದಾರಿ ಮಧ್ಯೆ ಪ್ರಾಣ ಕಳೆದುಕೊಳ್ಳಬೇಕಾದಂತ ಸಂದರ್ಭಗಳು ಎದುರಾಗುತ್ತಿದ್ದು.  ಇಂತಹ ದುಸ್ಥಿತಿಯನ್ನು ತಪ್ಪಿಸಲು ಸ್ಥಳೀಯವಾಗಿ ಭಗತ್ ಸಿಂಗ್ ರವರ ಹೆಸರಿನಲ್ಲಿ ಹೃದಯ ಚಿಕಿತ್ಸಾಲಯ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಹಿರಿಯ ಮುಖಂಡ ಚನ್ನಬಸಯ್ಯ ಸಹಿ ಸಂಗ್ರಹ ಚಳುವಳಿಯನ್ನು ಸಹಿ ಹಾಕುವುದರ ಮೂಲಕ ಉದ್ಘಾಟನೆ ಮಾಡಿದರು, ನಂತರ ಮಾತನಾಡಿದ ಅವರು, ಭಗತ್ ಸಿಂಗ್ ರವರ ಆಶಯಗಳನ್ನು ಇಂದಿಗೂ ಜೀವಂತವಾಗಿಡಲು ಹಾಗೂ ಜನಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ ಸುಸಜ್ಜಿತ ಆರೋಗ್ಯ ಸೇವೆ ಒದಗಿಸಲು ಸರ್ಕಾರದ ಗಮನ ಸೆಳೆಯಲು ಭಗತ್ ಸಿಂಗ್ ರಕ್ತದಾನಿಗಳ ಸಂಘದಂತಹ ಎಡಪರ ಚಿಂತನೆಯುಳ್ಳ ಸಂಘ ಸಂಸ್ಥೆಗಳಿಗೆ ಮಾತ್ರ ಸಾಧ್ಯ ಹಾಗೂ ಕೇವಲ 23 ರ ವಯಸ್ಸಿನಲ್ಲಿ ದೇಶದ ಸ್ವತಂತ್ರಕ್ಕಾಗಿ ನೇಣುಗಂಬಕ್ಕೆ ಏರಿದ ಭಗತ್ ಸಿಂಗ್, ರಾಜಗುರು, ಸುಖದೇವ್ ನಮ್ಮೆಲ್ಲರಿಗೂ ಆದರ್ಶ ಎಂದರು.

ಸಹಿ ಸಂಗ್ರಹ ಚಳುವಳಿಯಲ್ಲಿ ಭಾಗವಹಿಸಿ ಮಾತನಾಡಿದ, ವಕೀಲ ಬಿಸಾಟಿ ಮಹೇಶ್, ಇಂದಿನ ಯುವಕರಲ್ಲಿ ಪ್ರಶ್ನೆ ಮಾಡುವ ಮನೋಭಾವ ಕಳೆದು ಹೋಗುತ್ತಿದೆ. ಕೇವಲ ಜಾತಿ-ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ರಾಜಕೀಯ ಪಕ್ಷಗಳು ಇಂದಿನ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವಲ್ಲಿ ವಿಫಲರಾದ ಕಾರಣಕ್ಕೆ ಯುವಕರನ್ನು ದಾರಿ ತಪ್ಪಿಸಲು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಡಿವೈಎಫೈ ಜಿಲ್ಲಾ ಸಂಚಾಲಕ ಮೊಹಮ್ಮದ್ ಖಾಲಿದ್, ಸಂಘದ ಉಪಾಧ್ಯಕ್ಷ ಕಲ್ಯಾಣ, ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರ ಸಂಘದ ರಾಜ್ಯ ಸಹಸಂಚಾಲಕ ಚನ್ನಬಸವನಗೌಡ, ಸಂಘದ ಮುಖಂಡರಾದ ಅಲ್ತಾಫ್ ಬಸವರಾಜ್, ಅಶೋಕ್, ಸುಭಾಷ್, ಭರತ್, ವೆಂಕಟೇಶ್, ಧನಂಜಯ್, ಭಾಷಾ ಸೇರಿದಂತೆ  ಸಾರ್ವಜನಿಕರು, ರಕ್ತದಾನಿಗಳು ಭಾಗವಹಿಸಿದ್ದರು.

ಚಳುವಳಿಯ ಪ್ರಮುಖ ಬೇಡಿಕೆಗಳನ್ನು ಸಹಿ ಸಂಗ್ರಹದ ಪತ್ರದೊಂದಿಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸಲ್ಲಿಸಲಾಗುದು ಎಂದು ಸಂಘಟಕರು ತಿಳಿಸಿದ್ದಾರೆ.