
ಸಂಜೆವಾಣಿ ವಾರ್ತೆ
ಹೊಸಪೇಟೆ.ಸೆ.5 ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಒದಗಿಸುವ ಜೊತೆಗೆ ಆಸ್ಪತ್ರೆಗಳ ಸ್ಥಿತಿಗತಿಗಳ ಸುಧಾರಣೆಗೆ ಹೆಚ್ಚಿನ ಆಧ್ಯತೆ ನೀಡುವಂತೆ ಸ್ಲಂ ಜನರ ಸಂಘಟನೆಯ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದರುವ ಸ್ಲಂ ಜನರ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ವೆಂಕಟೇಶ್, ರಾಜ್ಯದ ನಕಲಿ ಔಷಧಿ ತಯಾರಿಕಾ ಕೇಂದ್ರಗಳು, ಅವಧಿ ಮೀರಿದ ಆಹಾರ ಪದಾರ್ಥಗಳ ಮಾರಾಟ ಮಾಡುತ್ತಿರುವ ಹೋಟೆಲ್ಗಳು ಹಾಗೂ ಸಿಹಿ ತಯಾರಿಕಾ ಕೇಂದ್ರಗಳ ಮೇಲೆ ಆರೋಗ್ಯ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ಮಾಡುತ್ತಿರುವುದು ಅತ್ಯಂತ ಸ್ವಾಗತಾರ್ಹ ಕ್ರಮವಾಗಿದೆ. ಈ ಮೂಲಕ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಇಡೀ ರಾಜ್ಯ ಮತ್ತು ದೇಶದ ಗಮನ ಸೆಳೆಯುವ ಮೂಲಕ ಮಾದರಿಯಾಗಿದ್ದಾರೆ.
ಅದೇ ರೀತಿ ಆರೋಗ್ಯ ಸಚಿವರು ಸರ್ಕಾರಿ ಆಸ್ಪತ್ರೆಗಳ ಸುಧಾರಣೆಗೆ ಹೆಚ್ಚಿನ ಆಧ್ಯತೆ ನೀಡಬೇಕಾಗಿದೆ. ಸರ್ಕಾರಿ ಆಸ್ಪತ್ರೆಯ ಸ್ಥಿತಿಗತಿಗಳು, ಬೆಡ್ ಗಳ ಕೊರತೆ, ಔಷಧಿ ಕೊರತೆ, ಸಿಬ್ಬಂದಿ ಕೊರತೆ, ವೈದ್ಯರ ಕೊರತೆ, ವೈದ್ಯಕೀಯ ಸಿಬ್ಬಂದಿ ಕೊರತೆ, ವೈದ್ಯಕೀಯ ಉಪಕರಣಗಳ ಕೊರತೆ, ಹೆರಿಗೆ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯ ಸಂಬಂಧಿಕರಿಂದ ಹಣ ವಸೂಲಿ, ಸುಖಾ ಸುಮ್ಮನೆ ಬೇರೆ ಸರ್ಕಾರಿ ಆಸ್ಪತ್ರೆಗಳಿಗೆ ರೆಫರ್ ಮಾಡುವುದು ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಹಾಗೂ ಅವರ ಸಂಬಂಧಿಕರು ಅನುಭವಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಸರಿಯಾದ ಉಪಕರಣಗಳಿಲ್ಲದೆ ವೈದ್ಯರಿಲ್ಲದೆ ನವಜಾತ ಶಿಶುಗಳ ಮರಣ ನಿಯಂತ್ರಣ ಮಾಡುವಲ್ಲಿ ವಿಜಯನಗರ ಜಿಲ್ಲಾ ಆರೋಗ್ಯ ಇಲಾಖೆ ವಿಫಲವಾಗಿದೆ. ಇವುಗಳ ಬಗ್ಗೆಯೂ ಸಹ ಆರೋಗ್ಯ ಸಚಿವರು ಗಮನಹರಿಸುವಂತೆ ಹಾಗೂ ಆರೋಗ್ಯ ಇಲಾಖೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ಆರೋಗ್ಯ ಇಲಾಖೆಯಲ್ಲಿ ಹೊಸದೊಂದು ಕ್ರಾಂತಿ ಮಾಡುವಂತೆ ಎನ್.ವೆಂಕಟೇಶ್ ಆರೋಗ್ಯ ಸಚಿವರನ್ನು ಒತ್ತಾಯಿಸಿದ್ದಾರೆ.





















