Home ಜಿಲ್ಲೆ ಸಂಶೋಧಕರಿಗೆ ವೈಜ್ಙಾನಿಕ ದೃಷ್ಟಿಕೋನ ಅಗತ್ಯ: ಡಾ. ಜೈ ಪ್ರಭಾಕರ

ಸಂಶೋಧಕರಿಗೆ ವೈಜ್ಙಾನಿಕ ದೃಷ್ಟಿಕೋನ ಅಗತ್ಯ: ಡಾ. ಜೈ ಪ್ರಭಾಕರ

ಸಂಜೆವಾಣಿ ವಾರ್ತೆ

ಹೊಸಪೇಟೆ.ಸೆ.3 ಹೊಸ ಹೊಸ ಆವಿಷ್ಕಾರದ ಜೊತೆಗೆ ಸಂಶೋಧನೆಯನ್ನು ವೈಜ್ಞಾನಿಕ ದೃಷ್ಟಿಕೋನದಲ್ಲಿ ನೋಡುವ ಅಗತ್ಯ ಸಂಶೋಧಕರಿಗೆ ಇರಬೇಕು ಎಂದು ಧಾರವಾಡದ ಸಿ.ಎಂ.ಡಿ.ಐ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಜೈ ಪ್ರಭಾಕರ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದಲ್ಲಿ ಮಂಗಳವಾರ ಪಾಕ್ಷಿಕ ಮಾತು-15ರ ಅಂಗವಾಗಿ ಜರುಗಿದ “ಸಂಶೋಧನಾ ಅಧ್ಯಯನದ ವಿಧಿ ವಿಧಾನಗಳು’’ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಸಂಶೋಧನೆ ಎಂದರೇನು? ಸಂಶೋಧನೆ ಎಂದು ಏಕೆ ಕರೆಯುತ್ತೇವೆ. ಎಂಬುವುದರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಸಂಶೋಧನೆ ಮಾಡಬೇಕಾಗುತ್ತದೆ. ಕ್ಷೇತ್ರಕಾರ್ಯದ ಜೊತೆಗೆ ಸತ್ಯವನ್ನು ಬಯಲಿಗೆ ಎಳೆಯುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕಾಗುತ್ತದೆ. ಇದು ದಿನನಿತ್ಯ ನಡೆಯುವ ಕ್ರಿಯೆಯಾಗಿರಬೇಕು. ಸಂಶೋಧನೆ ಎನ್ನುವುದು ಸಮಾಜಕ್ಕೆ ಉಪಯೋಗವಾಗುವಂತಹದ್ದು. ಯಾವುದೇ ಸಂಶೋಧನೆ ಇರಲಿ, ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಹೊರಜಗತ್ತಿಗೆ ತಿಳಿಸಬೇಕಾದ ಅನಿವಾರ್ಯತೆ ಸಂಶೋಧಕರಿಗೆ ಇರಬೇಕು. ಸಂಶೋಧನೆಯನ್ನು ಕೂಲಂಕುಶವಾಗಿ ಅಧ್ಯಯನ ಮಾಡಿ ಸಮಾಜಕ್ಕೆ ಕೊಡುವಂತ ಕೆಲಸ ಸಂಶೋಧಕರದ್ದಾಗಿರಬೇಕೆಂದು ಕರೆ ನೀಡಿದರು.

ಸಂಶೋಧನೆ ಎನ್ನುವುದು ನಿಂತ ನೀರಲ್ಲ, ಪುರಾತನ ಕಾಲದಿಂದಲೂ ಸಂಶೋಧನೆ ನಡೆಯುತ್ತಾ ಬಂದಿದೆ. ಸಂಶೋಧಕರು ಅವಲೋಕನ, ಪ್ರಶ್ನಾವಳಿ, ಸಂದರ್ಶನ, ಅಂಕಿ ಅಂಶಗಳ ವಿಧಾನ ಇತ್ಯಾದಿ ವಿಧಾನಗಳ ಮೂಲಕ ಗಟ್ಟಿ ತಳಹದಿಯ ತಳಸ್ಪರ್ಶಿ ಸಂಶೋಧನೆಯನ್ನು ಮಾಡಬೇಕಾಗುತ್ತದೆ. ಸಂಶೋಧಕರು ಸಂಶೋಧನೆ ಕೈಗೊಳ್ಳುವಾಗ `ಕಣ್ಣು ಮತ್ತು ಕಿವಿಗಳು’ ಯಾವಾಗಲೂ ತೆರೆದಿಟ್ಟುಕೊಳ್ಳಬೇಕು. ಸಂಶೋಧಕರಿಗೆ ಭಾಗವಹಿಸುವಿಕೆ ಬಹಳ ಮುಖ್ಯವಾಗಿರುತ್ತದೆ. ಒಂದು ಗ್ರಾಮ, ಒಂದು ಪ್ರದೇಶ, ಕೆಲವು ಬುಡಕಟ್ಟುಗಳನ್ನು ಅಧ್ಯಯನ ಮಾಡುವಾಗ ಸಂಶೋಧಕರು ಆ ವಿಷಯಗಳನ್ನು ಒರೆಗಲ್ಲಿಗೆ ಹಚ್ಚಿ ನೋಡಬೇಕಾಗುತ್ತದೆ. ಅಧ್ಯಯನ ಕೈಗೊಳ್ಳುವ ಸಂಶೋಧಕರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮನಸ್ಸಿದ್ದಲ್ಲಿ ಮಾರ್ಗ ಎಂಬುವುದನ್ನು ಗಮನದಲ್ಲಿಟ್ಟುಕೊಂಡು ಸಂಶೋಧನೆ ಕೈಗೊಳ್ಳಬೇಕಾಗುತ್ತದೆ.

ಸಮಾಜಕ್ಕೆ ಒಳ್ಳೆಯದಾಗುವ ಕೆಲಸ ಸಂಶೋಧಕರಿಂದ ನೆರವೇರಬೇಕು. ಸಂಶೋಧಕರಿಗೆ ಸಂಶೋಧನೆ ಕೈಗೊಳ್ಳಲು ಈ ಹಿಂದೆ ಇದ್ದ ತಾಪತ್ರಯಗಳು ಇಂದು ಇಲ್ಲ.  ಆಧುನಿಕವಾಗಿ ಜಗತ್ತು ಬೆಳೆದಷ್ಟು ಹೊಸ ಹೊಸ ಸಂಶೋಧನೆಗಳು, ಸಂಶೋಧಕರಿಂದ ಹೊರ ಬರಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಕ್ಷಿಕ ಮಾತು ಕಾರ್ಯಕ್ರಮದ ಸಂಚಾಲಕರಾದ ಡಾ. ತಾರಿಹಳ್ಳಿ ಹನುಮಂತಪ್ಪ ವಹಿಸಿದ್ದರು. ಮಾನವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಎಲ್. ಶ್ರೀನಿವಾಸ, ಸಹ ಸಂಚಾಲಕ ಕುಮಾರ್ ಡಿ.ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಶೋಧಕ ರಾಮಾಂಜನೇಯ ಸ್ವಾಗತಿಸಿ, ನಿರೂಪಿಸಿದರು. ಲಕ್ಷಿ್ಮ ಜಿ.ಬಿ. ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.