
ಸಂಜೆವಾಣಿ ವಾರ್ತೆ
ಹೊಸಪೇಟೆ.ಸೆ.3 ಪ್ರವಾಸೋದ್ಯಮ ಇಲಾಖೆಯಿಂದ ನೀಡಲಾಗುವ ಮೊಬೈಲ್ ಕ್ಯಾಂಟೀನ್ ವಾಹನಗಳನ್ನು ಶಾಸಕ ಹೆಚ್.ಆರ್.ಗವಿಯಪ್ಪ, ಫಲಾನುಭವಿಗಳಿಗೆ ಬುಧವಾರ ಹಸ್ತಾಂತರಿಸಿದರು.
ನಗರದ ಗಾಂಧಿ ವೃತ್ತದಲ್ಲಿ ಜರುಗಿದ ಸಮಾರಂಭದಲ್ಲಿ ಹಂಪಿಗೆ ಆಗಮಿಸುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಉದ್ದಿಮೆದಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಪ್ರವಾಸೋದ್ಯಮ ಇಲಾಖೆ ವತಿಯಿಂದ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯಡಿ ಆಯ್ಕೆ ಮಾಡಲಾದ 10 ಜನ ಫಲಾನುಭವಿಗಳಿಗೆ ಶಾಸಕ ಹೆಚ್.ಆರ್.ಗವಿಯಪ್ಪ, ಮೊಬೈಲ್ ಕ್ಯಾಂಟೀನ್ ವಾಹನಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ.ಜಾ, ಪ.ಪಂ ದ ಸಣ್ಣ ಉದ್ದಿಮೆದಾರರಿಗೆ ಮೊಬೈಲ್ ಕ್ಯಾಂಟೀನ್ ವಾಹನಗಳನ್ನು ಸಬ್ಸಿಡಿ ಧರದಲ್ಲಿ ನೀಡಿರುವುದು ಸರ್ಕಾರದ ಮಹತ್ವದ ಹೆಜ್ಜೆಯಾಗಿದೆ. ಇದರಿಂದ ಹಂಪಿಗೆ ಆಗಮಿಸುವ ಪ್ರವಾಸಿಗರಿಗೆ ಉತ್ತಮ ಸೇವೆ ಹಾಗೂ ಆಹಾರ ಸೌಲಭ್ಯ ದೊರೆಯಲಿದೆ. ಮತ್ತು ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಿದಂತಾಗಲಿದೆ. ಇದರಿಂದ ಅವರ ಕುಟುಂಬಗಳ ಜೀವನ ನಿರ್ವಹಣೆಗೆ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಕೆ.ಬಡಾವಲಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಡಿ.ವೆಂಕಟರಮಣ, ನಗರಸಭೆ ಮಾಜಿ ಅಧ್ಯಕ್ಷ ಗುಜ್ಜಲ ನಿಂಗಪ್ಪ, ಮಾಜಿ ಸದಸ್ಯ ಗಿಂಜಿ ಮಂಜುನಾಥ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ರವಿ ಕುಮಾರ್ ಸೇರಿದಂತೆ ಮತ್ತಿತರರು ಇದ್ದರು.





















