Home ಜಿಲ್ಲೆ ಮೈಸೂರು ವನ್ಯಪ್ರಾಣಿ ದಾಳಿಯಿಂದ ಬಲಿಯಾದ ಜಾನುವಾರುಗಳಿಗೆ ಮಂಜುನಾಥ್ ವೈಯಕ್ತಿಕ ಪರಿಹಾರ

ವನ್ಯಪ್ರಾಣಿ ದಾಳಿಯಿಂದ ಬಲಿಯಾದ ಜಾನುವಾರುಗಳಿಗೆ ಮಂಜುನಾಥ್ ವೈಯಕ್ತಿಕ ಪರಿಹಾರ

ಸಂಜೆವಾಣಿ ವಾರ್ತೆ
ಹುಣಸೂರು, ಅ.11-
ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕಳೆದ 10 ತಿಂಗಳಿಂದ ನಿರಂತರವಾಗಿ ವನ್ಯಜೀವಿ ದಾಳಿಯಿಂದ ಜಾನುವಾರು ಸೇರಿದಂತೆ ಸಾಕುಪ್ರಾಣಿಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಸುಮಾರು 114 ಕ್ಕೂ ಹೆಚ್ಚು ಮಂದಿ ರೈತ ಪಲಾನುಭವಿಗಳಿಗೆ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ 9 ಲಕ್ಷ ರೂಗಳನ್ನು ವೈಯಕ್ತಿಕವಾಗಿ ನೆರವು ನೀಡುವ ಮೂಲಕ, ಅವರಲ್ಲಿ ಭರವಸೆ ಮೂಡಿಸಿದ್ದಾರೆ.


ಹನಗೋಡು ಗ್ರಾಮ ಪಂಚಾಯ್ತಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾನುವಾರುಗಳನ್ನು ಕಳೆದುಕೊಂಡ ರೈತರಿಗೆ ಆತ್ಮಸ್ಥೈರ್ಯ ತುಂಬಿ ವೈಯಕ್ತಿಕವಾಗಿ ಧನ ಸಹಾಯ ವಿತರಿಸಿ ಮಾತನಾಡಿ ಅವರು ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ವನ್ಯಜೀವಿ ಹಾಗೂ ಪ್ರಾದೇಶಿಕ ಅರಣ್ಯ ವಿಭಾಗ ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿ ಕಳೆದ ಹತ್ತು ತಿಂಗಳಿಂದ ಹುಲಿ, ಚಿರತೆ ದಾಳಿಯಿಂದ 44 ಹಸು, 29 ಕರು, 41 ಕುರಿ-ಮೇಕೆ ಮೃತಪಟ್ಟಿವೆ.
ಯಾವುದೇ ಸರ್ಕಾರ ಸಂಪೂರ್ಣ ನಷ್ಟ ಭರಿಸಲು ಸಾಧ್ಯವಿಲ್ಲ. ನಿಯಮಾನುಸರ ಪರಿಹಾರವಷ್ಟೆ ನೀಡುತ್ತಾರೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುವ ಪ್ರಮೇಹ ಇದೆ . ಇಂಥ ಸಂದರ್ಭದಲ್ಲಿ ನಾನು ಅಧಿಕಾರದಲ್ಲಿರಲಿ, ಇಲ್ಲದಿರಲಿ ನೊಂದ ರೈತರ ನೆರವಿಗೆ ಸದಾ ಇದ್ದೇನೆ.


ಈ ಹಿಂದೆ ಕೂಡ ವನ್ಯಜೀವಿಗಳ ದಾಳಿಯಿಂದ ಜಾನುವಾರುಗಳನ್ನು ಕಳೆದುಕೊಂಡ ನೊಂದ ರೈತರಿಗೆ ಸಹಾಯ ಅಸ್ತ ನೀಡಿದ್ದೇನೆ. ಇಂದು ಕೂಡ ಬಲಿಯಾದ ಹಸುಗಳಿಗೆ ತಲಾ 10 ಸಾವಿರ, ಕರುಗಳಿಗೆ 7.5 ಸಾವಿರ ಹಾಗೂ ಆಡು-ಕುರಿಗಳಿಗೆ ತಲಾ 5 ಸಾವಿರ ರೂ ನಂತೆ ವೈಯಕ್ತಿಕ ನೆರವು ನೀಡುತ್ತಿರುವುದು ತೃಪ್ತಿ ಇದೆ ಎಂದ ಅವರು ನೆರವು ಪಡೆದ ರೈತರು ಮತ್ತೆ ಜಾನುವಾರುಗಳನ್ನು ಖರೀದಿಸುವಂತೆ ಸಲಹೆ ನೀಡಿ, ತಾವು ಶಾಸಕರಾಗಿದ್ದ ಅವಧಿಯಲ್ಲಿ ಕಾಡಾನೆ ಹಾವಳಿ ತಪ್ಪಿಸಲು ಸಿದ್ದರಾಮಯ್ಯನವರ ಮೇಲೆ ಒತ್ತಡ ಹಾಕಿ, ಉದ್ಯಾನದಂಚಿನಲ್ಲಿ ರೈಲ್ವೆ ಹಳಿ ತಡೆಗೋಡೆ ನಿರ್ಮಿಸಲಾಗಿತ್ತು. ವನ್ಯಜೀವಿ-ಮಾನವ ಸಂಘರ್ಷ ನಡೆಯುತ್ತಿದ್ದ ವೇಳೆ ತಾವು ರೈತರ ಸಂಕಷ್ಟಕ್ಕೆ ನೆರವಾಗುತ್ತಿದ್ದುದ್ದನ್ನು ಸ್ಮರಿಸಿ, ಯಾವುದೇ ಸಂದರ್ಭದಲ್ಲೂ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವೆ ಎಂದು ತಿಳಿಸಿದರು.


ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಲು ಸಲಹೆ
ವನ್ಯಜೀವಿ ಹಾವಳಿ ತಪ್ಪಿಸುವ ಸಲುವಾಗಿ ವೈಜ್ಞಾನಿಕವಾದ ಕ್ರಮಗಳನ್ನು ಅನುಸರಿಸಲು ಅರಣ್ಯ ಇಲಾಖೆ ಮುಂದಾಗಬೇಕಿದೆ. ಈ ಹಿಂದೆಯೇ ಅರಣ್ಯ ಸಚಿವರೊಂದಿಗೆ ಚರ್ಚಿಸಿದ್ದೇನೆ. ಪ್ರಾಣಿ ತಡೆಗೋಡೆಗೆ ಸೆನ್ಸಾರ್ ಅಳವಡಿಸುವ ಮೂಲಕ ವನ್ಯಪ್ರಾಣಿಗಳು ಅರಣ್ಯದಿಂದ ಹೊರಬರುವ ಮುನ್ನವೇ ಮಾಹಿತಿ ಪಡೆಯುವ ಪದ್ಧತಿಯನ್ನು ಅನುಸರಿಸಿದಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷ ಕಡಿಮೆಯಾಗಲಿದೆ ಎಂದು ಅಭಿಪ್ರಾಯಪಟ್ಟು, ನಮ್ಮ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಸಂಘರ್ಷ ಕಡಿಮೆ ಮಾಡುವ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆಂದು ಪ್ರಶಂಸಿಸಿದರು.
ಗ್ರಾಮದ ಯುವ ಮುಖಂಡ ಡಾ ಎಚ್.ವಿ.ಕಾರ್ತಿಕ್ ಮಾತನಾಡಿ ಸ್ನೇಹಜೀವಿ ಮಂಜುನಾಥರು ತಾಲೂಕಿನ ಬಡಜನರ ಸೇವೆಯಲ್ಲಿ ಸದಾ ತೊಡಗಿಸಿಕೊಂಡು ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದಾರೆ, ಇದಲ್ಲದೆ ತಮ್ಮ ಅಧಿಕಾರ ಅವಧಿಯಲ್ಲಿ ತಾಲೂಕಿನಲ್ಲಿ ಅನೇಕ ಜನಪರ ಕಾರ್ಯಕ್ರಮಗಳಿಗೆ ಒತ್ತು ನೀಡಿ ನೀರಾವರಿ, ಕೃಷಿ, ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನಮನ್ನಣೆ ಗಳಿಸಿದ್ದಾರೆ.


ಇಂತಹ ಜನನಾಯಕನನ್ನು ಮತ್ತೊಮ್ಮೆ ತಾಲೂಕಿನ ಜನತೆ ಆಶೀರ್ವಾದ ಮಾಡಿದಲ್ಲಿ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಎ.ಸಿ.ಎಫ್ ಕಿರಣ್ ಕುಮಾರ್, ಸಂತೋಷ್ ಹೂಗಾರ್, ಕಾಂಗ್ರೆಸ್ ಕಾರ್ಯ ಅಧ್ಯಕ್ಷ ಗದ್ದಿಗೆ ದೇವರಾಜ್, ಕಾಂಗ್ರೆಸ್ ಅಧ್ಯಕ್ಷರಾದ ಬಾಲಸುಂದರ್, ಪ್ರೇಮಕುಮಾರ್, ಹುಣಸೂರು ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮರನಾಥ್ , ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಲ್ಕುಣಿಕೆ ರಾಘು, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ರವಿಗೌಡ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್, ಯುವ ಅಧ್ಯಕ್ಷ ಫೈಸಲ್, ಪ್ರಚಾರ ಸಮಿತಿ ಅಧ್ಯಕ್ಷ ಹಮ್ಮಿಗೆ ರಾಮೇಗೌಡ, ಮಾಜಿ ಅಧ್ಯಕ್ಷ ದಾಸನಪುರ ಹರೀಶ್, ಮುಖಂಡರಾದ ಬಸವರಾಜು, ಅಬ್ದುಲ್ ಅಶ್ರಕ್, ಬಿ ಆರ್ ಕಾವಲ್ ನಂದೀಶ್, ಗಿರಿಧರ್, ಲೋಕೇಶ್, ಆನ್ಸರ್, ಮಂಜು, ಬಸವೇಗೌಡ ಮಂಚನಾಯಕ, ಕಿರಂಗೂರುಸ್ವಾಮಿ, ನೇತ್ರಾವತಿ ಗ್ರಾ.ಪಂ ಮಾಜಿ ಸದಸ್ಯರಾದ ಬೋರೇಗೌಡ, ಈಶ್ವರ್, ಸಂತೋಷ, ಸೇರಿದಂತೆ ಅನೇಕರಿದ್ದರು.