Home ಜಿಲ್ಲೆ ರೈತರೊಂದಿಗೆ ವಿಶಿಷ್ಟ ಕಾರ್ಯಕ್ರಮ

ರೈತರೊಂದಿಗೆ ವಿಶಿಷ್ಟ ಕಾರ್ಯಕ್ರಮ

ಸಂಜೆವಾಣಿ ವಾರ್ತೆ

ಬಳ್ಳಾರಿ, ಸೆ,19- ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರಿನ ವಿಸ್ತರಣಾ, ನಿರ್ದೇಶನಾಲಯದಿಂದ “ರೈತರೊಂದಿಗೆ ಒಂದು ದಿನ”ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪ್ರತಿ ತಿಂಗಳು ಕಲ್ಯಾಣ ಕರ್ನಾಟಕದ ಆಯ್ದ ರೈತರ ಕ್ಷೇತ್ರಕ್ಕೆ ವಿಸ್ತರಣಾ ನಿರ್ದೇಶಕರ ನೇತೃತ್ವದಲ್ಲಿ ವಿಜ್ಞಾನಿಗಳೊಂದಿಗೆ ಭೇಟಿ ನೀಡಿ, ರೈತರ ಕೃಷಿ ಅಳವಡಿಕೆಗಳ ಬಗ್ಗೆ ಚರ್ಚಿಸಿ ಆ ಭಾಗದ ಕೃಷಿ ಚಟುವಟಿಕೆಗಳ ವೇಗ ವೃದ್ಧಿಗೆ ಕಾರಣವಾಗುವ ಆಶಯವನ್ನು ಹೊಂದಲಾಗಿದೆ.

ಈ ಕಾರ್ಯಕ್ರಮದ ಭಾಗವಾಗಿ  ಬಳ್ಳಾರಿ ತಾಲೂಕಿನ ಇಬ್ರಾಹಿಂಪುರದ ಯುವ ರೈತ  ರವಿಕುಮಾರ್ ರವರ ಕೃಷಿ ಕ್ಷೇತ್ರಕ್ಕೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರಿನ ವಿಸ್ತರಣಾ ನಿರ್ದೇಶಕರಾದ ಡಾ. ಕುರುಬರ ಇವರ ಮುಂದಾಳತ್ವದಲ್ಲಿ ಕೃಷಿ ವಿಜ್ಞಾನ ಕೇಂದ್ರ ಹಗರಿ, ಬಳ್ಳಾರಿಯ ವಿಜ್ಞಾನಿಗಳ ತಂಡ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ಸಾವಯವ ಕೃಷಿ, ಅದರ ಸವಾಲುಗಳು, ಮಾರುಕಟ್ಟೆಯ ಸಾಧ್ಯತೆಗಳು ಮತ್ತು ಕೃಷಿ ಪ್ರವಾಸೋದ್ಯಮ ಸಾಧ್ಯತೆಗಳನ್ನು ಭಾಗವಹಿಸಿದ್ದ ಸುಮಾರು 25 ಜನ ರೈತರೊಂದಿಗೆ ಚರ್ಚಿಸಲಾಯಿತು.

ಕ್ಷೇತ್ರ ಬೇಟಿಯ ಸಂದರ್ಭದಲ್ಲಿ ರೈತ ರವಿಕುಮಾರ್ ಇವರ ಪಪ್ಪಾಯ, ಅಂಜೂರ, ನುಗ್ಗೆ ಮತ್ತು ಅನೇಕ ತರಕಾರಿ ಬೆಳೆಗಳ ತಾಕುಗಳನ್ನು ವಿಶ್ಲೇಷಿಸಲಾಯಿತು. ತೋಟಗಾರಿಕಾ ವಿಷಯ ತಜ್ಞರು ಆದ ಪ್ರೊಫೆಸರ್. ಕುರುಬರ ಅವರು ಈ ಬೆಳೆಗಳ ಉತ್ತಮ ನಿರ್ವಹಣೆಯ ಅನೇಕ ವಿವರಗಳನ್ನು ರೈತರೊಂದಿಗೆ ಹಂಚಿಕೊಂಡರು. ಬಳ್ಳಾರಿ ಸಾವಯವ ಬಳಗದ ರೈತರದ ಕರಿಬಸವನಗೌಡ, ಈಶ್ವರ್ ರೆಡ್ಡಿ, ರಘುನಾಥ್, ಹೊನ್ನೂರಪ್ಪ, ಈರಪ್ಪಯ್ಯ ಹಾಗೂ ಇತರ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಹಗರಿ  ಕೃಷಿ ಮಹಾವಿದ್ಯಾಲಯದ ಪ್ರಭಾರಿ ಅಧಿಕಾರಿಗಳಾದ ಡಾ. ರವಿಶಂಕರ್, ಹಿರಿಯ ಪ್ರಾಧ್ಯಾಪಕರಾದ ಡಾ. ರಮೇಶ್ ಬಿ.ಕೆ., ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾಕ್ಟರ್ ರವಿ ಎಸ್, ಮತ್ತೊಬ್ಬ ವಿಜ್ಞಾನಿಗಳಾದ ಡಾ. ನವೀನ್ ಕುಮಾರ್ ಪಿ ಮತ್ತು ಗೃಹ ವಿಜ್ಞಾನಿ ಡಾ. ಶಿಲ್ಪ ಇವರು ಉಪಸ್ಥಿತರಿದ್ದರು.