
ಸಂಜೆವಾಣಿ ವಾರ್ತೆ
ಹೊಸಪೇಟೆ. ಸೆ.೨೮ ಮತದಾರರ ವಿಶೇಷ ಪರಿಷ್ಕರಣೆ ಹೆಸರಲ್ಲಿ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಮೂಲಕ ಪ್ರಜಾಪ್ರಭುತ್ವಕ್ಕೆ ವಿರುದ್ದವಾಗಿ ಕೆಲಸ ಮಾಡಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರನ್ನು ಸೇವೆಯಿಂದ ವಜಾಗೊಳಿಸಿ ತಕ್ಣಣವೇ ಬಂಧಿಸುವಂತೆ ವಿಜಯನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿರಾಜ್ ಶೇಖ್ ಒತ್ತಾಯಿಸಿದರು.
ಸ್ಥಳೀಯ ಪತ್ರಿಕಾ ಭವನದಲ್ಲಿಂದು ಜರುಗಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಹಾಗೂ ಕೆಪಿಸಿಸಿ ಆದೇಶದ ಮೇರೆಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ ಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರಧಾನಿ ಮೋದಿ ಹಾಗೂ ಗೃಹಸಚಿವ ಅಮಿತ್ ಷಾ ಸೂಚನೆ ಮೇರೆಗೆ ಬಿಜೆಪಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಚುನಾವಣಾ ಆಯೋಗ ೧೩ ಕೋಟಿಗೂ ಅಧಿಕ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದೆ. ರಾಜ್ಯದಲ್ಲಿ ೧ ಕೋಟಿಗೂ ಅಧಿಕ ಮತದಾರರನ್ನು ಕೈಬಿಡುವ ಯತ್ನ ನಡೆಸಲಾಗಿದೆ. ಈಗಾಗಲೇ ರಾಜ್ಯದ ೪೩ ಲಕ್ಷ ಮತದಾರರಿಗೆ ಆಯೋಗ ನೋಟೀಸ್ ನೀಡಿದೆ.
ಚುನಾವಣಾ ಆಯೋಗದ ನಿರ್ಣಯಗಳ ಕುರಿತು ಇತರೆ ಆಯುಕ್ತರುಗಳು ಭಿನ್ನಾಭಿಪ್ರಾಯ ಗಳನ್ನು ವ್ಯಕ್ತಪಡಿರುವ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ಹುಳುಕುಗಳು ಬಯಲಿಗೆ ಬರುತ್ತಿವೆ. ಚುನಾವಣಾ ಆಯೋಗ ಹೆಸರಿನ ಹಾಗೂ ವಯಸ್ಸಿನ ಸಣ್ಣಪುಟ್ಟ ವ್ಯತ್ಯಾಸಗಳನ್ನು ಮುಂದಿಟ್ಟುಕೊಂಡು ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಕೆಲಸ ಮಾಡಲಾಗುತ್ತಿದೆ. ಮತದಾರರ ಪಟ್ಟಿಯಲ್ಲಿ ಆಗಿರುವ ಲೋಪದೋಷಗಳಿಗೆ ಆಯೋಗವೇ ಹೊಣೆಯಾಗಿದೆ. ಅದನ್ನು ಸರಿಪಡಿಸಬೇಕಾಗಿರುವುದು ಅಯೋಗದ ಕರ್ತವ್ಯ. ಅದು ಅರ್ಹ ಮತದಾರರನ್ನು ಕೈಬಿಡುವುದು ಸರಿಯಾದ ಕ್ರಮವಲ್ಲ ಎಂದರು.
ಇತ್ತೀಚೆಗೆ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಕೇಂದ್ರ ಬಿಜೆಪಿ ಸರ್ಕಾರ ಆತಂಕಗೊಂಡಿದೆ. ಯುವ ಸಮಯದ ತಮ್ಮ ಜೊತೆ ಇಲ್ಲ ಎಂಬ ಸಂಶಯ ಬಂದಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಆಯೋಗವನ್ನು ಬಳಸಿಕೊಂಡು ಅರ್ಹ ಮತದಾರರನ್ನು ಕೈಬಿಡಲು ಮುಂದಾಗಿದೆ. ಚುನಾವಣಾ ಆಯುಕ್ತ ರನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ತನಗೆ ಅನುಕೂಲ ಆಗುವ ರೀತಿಯಲ್ಲಿ ಬದಲಾಯಿಸಿದೆ. ಚುನಾವಣಾ ಆಯೋಗ ಈ ವರೆಗೆ ನೋಟಿಸು ನೀಡಿದವರಲ್ಲಿ ಬಹುತೇಕರು ಮುಸ್ಲಿಂ ಮತದಾರರು ಇದ್ದಾರೆ ಎಂಬುದು ವಿಶೇಷ.
ನೋಟೀಸ್ ನೀಡಿದವರು ಸಮರ್ಪಕವಾದ ದಾಖಲೆ ನೀಡಿದರು ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಕೆಲಸ ಆಗುತ್ತಿಲ್ಲ. ಯಾರು ಸೇರಬೇಕು ಎಂಬುದನ್ನು ಸ್ಥಳೀಯ ಬಿಎಲ್ಒ ಗಳ ಬದಲು ಚುನಾವಣಾ ಆಯೋಗದ ಕೇಂದ್ರ ಕಚೇರಿ ತೀರ್ಮಾನಿಸಲಿದೆ.
ವಿಜಯನಗರ ೧.೦೭ ಲಕ್ಷ ಹೊರಕ್ಕೆ
ವಿಜಯನಗರ ಜಿಲ್ಲೆಯಲ್ಲಿನ ಐದು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ೧೧.೪೨ ಲಕ್ಷ ಮತದಾರರಿದ್ದು. ಅದರಲ್ಲಿ ೧.೦೭ ಲಕ್ಷ ಮತದಾರರನ್ನು ಕೈಬಿಡುವ ಪ್ರಯತ್ನ ನಡೆಸಲಾಗಿದೆ. ವಿಜಯನಗರ ಕ್ಷೇತ್ರದಲ್ಲಿ ೩೫ ಸಾವಿರ, ಹಗರಿಬೊಮ್ಮನಹಳ್ಳಿ ೨೦ ಸಾವಿರ, ಹಡಗಲಿ ೧೩ ಸಾವಿರ, ಕೂಡ್ಲಿಗಿ ೧೯ ಸಾವಿರ, ಹರಪನಹಳ್ಳಿಯಲ್ಲಿ ೧೮ ಸಾವಿರ ಮತದಾರರ ಹೊರಗುಳಿಯಲಿದ್ದಾರೆ. ಸತ್ತವರು ಒಕೆ ಉಳಿದ ಮತದಾರರು ಸಿಗುತ್ತಿಲ್ಲ ಎಂದರೆ ಅವರು ಎಲ್ಲಿಗೆ ಹೋದರು ಇದರ ಪರಿಶೀಲನೆ ನಡೆಸಬೇಕು.
ಪತ್ರಿಕಾ ಗೋಷ್ಠಿಯಲ್ಲಿ ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ಜಿಲ್ಲಾ ಉಪಾಧ್ಯಕ್ಷರಾದ ಕೆ.ಎಂ.ಹಾಲಪ್ಪ, ಮುಖಂಡರಾದ ರಶ್ಮಿ ರಾಜಶೇಖರ್ ಹಿಟ್ನಾಳ್ ಇದ್ದರು.





















