Home ಜಿಲ್ಲೆ ಬಾಕಿ ವೇತನ ಪಾವತಿಗೆ ಆಗ್ರಹಿಸಿ ಹಂಪಿ ಕವಿವಿ ಅತಿಥಿ ಉಪನ್ಯಾಸಕರು ಹಾಗೂ ಸಿಬ್ಬಂದಿ ಮುಷ್ಕರ

ಬಾಕಿ ವೇತನ ಪಾವತಿಗೆ ಆಗ್ರಹಿಸಿ ಹಂಪಿ ಕವಿವಿ ಅತಿಥಿ ಉಪನ್ಯಾಸಕರು ಹಾಗೂ ಸಿಬ್ಬಂದಿ ಮುಷ್ಕರ

ಸಂಜೆವಾಣಿ ವಾರ್ತೆ

ಹೊಸಪೇಟೆ.ಸೆ.22 ಬಾಕಿ ವೇತನ ಪಾವತಿಗೆ ಒತ್ತಾಯಿಸಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರು ಹಾಗೂ ತಾತ್ಕಾಲಿಕ ಆಡಳಿತ ಸಿಬ್ಬಂದಿ ಕನ್ನಡ ವಿಶ್ವವಿದ್ಯಾಲಯದ ಆಡಳಿತ ಕಛೇರಿ ಕ್ರಿಯಾಶಕ್ತಿ ಎದುರು ಸೋಮವಾರ ಒಂದು ದಿನದ ಸಾಂಕೇತಿಕ ಮುಷ್ಕರ ನಡೆಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ್ಲ ಕಳೆದ 10 ರಿಂದ 20 ವರ್ಷಗಳಿಂದ ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಹಾಗೂ ತಾತ್ಕಾಲಿಕ ಆಡಳಿತ ಸಿಬ್ಬಂದಿಗಳು ವೇತನವಿಲ್ಲದೆ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಈ ಹಿನ್ನಲೆಯಲ್ಲಿ ಶೀಘ್ರವೇ ವೇತನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಸಾಂಕೇತಿಕ ಮುಷ್ಕರವನ್ನು ನಡೆಸಿದರು.

ವಿಶ್ವವಿದ್ಯಾಲಯದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳು ಸುಸೂತ್ರವಾಗಿ ನಡೆಯಲು ಹಗಲಿರುಳು ಶ್ರಮಿಸುತ್ತಿರುವ ಸಿಬ್ಬಂದಿಗಳಿಗೆ ಹಲವು ತಿಂಗಳಿಂದ ವೇತನ ದೊರೆತಿಲ್ಲ. ಅತಿಥಿ ಉಪನ್ಯಾಸಕರಿಗೆ ಹಿಂದಿನ 11 ತಿಂಗಳ ಬಾಕಿ ಹಾಗೂ ಪ್ರಸ್ತುತ ಸಾಲಿನ 5 ತಿಂಗಳು ಸೇರಿ ಒಟ್ಟು 16 ತಿಂಗಳ ವೇತನ ಬಾಕಿ ಉಳಿದಿದೆ. ಹಾಗೆಯೇ, ತಾತ್ಕಾಲಿಕ ಆಡಳಿತ ಸಿಬ್ಬಂದಿಗೆ ಹಿಂದಿನ 7 ತಿಂಗಳ ಬಾಕಿ ಹಾಗೂ ಪ್ರಸ್ತುತ ಸಾಲಿನ 5 ತಿಂಗಳು ಸೇರಿ ಒಟ್ಟು 12 ತಿಂಗಳ ವೇತನ ಪಾವತಿಯಾಗದೆ ಬಾಕಿ ಉಳಿದಿದೆ.

ದೀರ್ಘಕಾಲದಿಂದ ವೇತನವಿಲ್ಲದೆ ದಿನನಿತ್ಯದ ಜೀವನ ನಿರ್ವಹಣೆ, ಮನೆಯ ಬಾಡಿಗೆ, ವೈದ್ಯಕೀಯ ವೆಚ್ಚ ಹಾಗೂ ಮಕ್ಕಳ ಶಿಕ್ಷಣವನ್ನು ಭರಿಸಲಾಗದೆ ಸಿಬ್ಬಂದಿಗಳು ತೀವ್ರ ಮಾನಸಿಕ ಮತ್ತು ಆರ್ಥಿಕ ಒತ್ತಡಕ್ಕೆ ಸಿಲುಕಿದ್ದಾರೆ. ಈ ಕುರಿತು ಕುಲಪತಿಗಳು, ಕುಲಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ತಮ್ಮ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಅನಿವಾರ್ಯವಾಗಿ ಸಾಂಕೇತಿಕ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದ್ದು, ಮುಂಬರುವ ಎರಡು ವಾರದೊಳಗೆ ನಮ್ಮ ಸಮಗ್ರ ಬಾಕಿ ವೇತನವನ್ನು ಬಿಡುಗಡೆ ಮಾಡದಿದ್ದಲ್ಲಿ, ಮುಂದಿನ ಹಂತದಲ್ಲಿ ಅನಿರ್ದಿಷ್ಟಾವಧಿ ಮುಷ್ಕರವನ್ನು  ಹಮ್ಮಿಕೊಳ್ಳಲಾಗುವುದು. ಇದಕ್ಕೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯೇ ನೇರ ಹೊಣೆಯಾಗಿರುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಮತ್ತು ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಮನವಿಪತ್ರ ಸ್ವೀಕರಿಸಿ ಮಾತನಾಡಿದ ಕುಲಪತಿ ಡಾ,ಡಿ,ವಿ,ಪರಮಶಿವಮೂರ್ತಿ ಅವರು ಇದೇ ಅ.5 ರಂದು ಕಲಬುರಗಿಯಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು, ವಿಶ್ವವಿದ್ಯಾಲಯಗಳ ಕುಂದುಕೊರತೆಗಳ ಸಭೆ ಕರೆದಿದ್ದು. ಆ ಸಭೆಯಲ್ಲಿ ಅತಿಥಿ ಉಪನ್ಯಾಸಕರು ಹಾಗೂ ತಾತ್ಕಾಲಿಕ ಆಡಳಿತ ಸಿಬ್ಬಂದಿಗಳ ಬಾಕಿ ವೇತನ ಕುರಿತು ಸಚಿವರ ಗಮನಕ್ಕೆ ತಂದು ವೇತನ ಪಾವತಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರಾದ ಡಾ.ತಿಮ್ಮಣ್ಣ ಭೀಮರಾಯ, ಡಾ. ಕೃಷ್ಣೆಗೌಡ, ಕ್ರಿಷ್ಣ ನಾಯಕ್, ವಿರೂಪಾಕ್ಷಪ್ಪ ಇಟಗಿ, ತಾತ್ಕಾಲಿಕ ಆಡಳಿತ ಸಿಬ್ಬಂದಿಗಳಾದ ಡಾ. ಎ. ನಾಗವೇಣಿ, ಶ್ರೀನಿವಾಸ ಕೆ. ಕಲಾಲ್, ಜೆ. ಬಸವರಾಜ, ಜೆ. ಶಿವಕುಮಾರ, ಬಿ. ಗಂಗಾಧರ, ಮಹ್ಮದ್ಶಫಿ, ಮಲ್ಲಿಕಾರ್ಜುನ್ ಮಹಾಮುನಿ, ಸುನಿಲ, ಭೀಮಣ್ಣ, ಗುಂಡಪ್ಪ, ಅಶ್ವಿನಿ, ಸುಮಾ, ನಂದಿನಿ, ಕೆ. ಪಂಪಾಪತಿ, ಕೆ. ವೀರೇಶ, ಸಂತೋಷ, ರವಿಕುಮಾರ, ಕೆ ಗಿರಿರಾಜ್, ಶ್ರೀಕಾಂತ ಚೌಟಿಗಿ, ಡಾ. ರೇವಣ್ಣಸಿದ್ಧಪ್ಪ, ದೊಡ್ಡ ಬಸಪ್ಪ, ಹನುಮಂತಪ್ಪ, ರಾಮಮೂರ್ತಿ ಸೇರಿದಂತೆ ಇತರರು ಭಾಗವಹಿಸಿದ್ದರು.