
ಸಂಜೆವಾಣಿ ವಾರ್ತೆ
ಚಾಮರಾಜನಗರ, ಅ.02-ಬಸವಾದಿ ಶರಣರ ಕಾಲಕ್ಕೂ ಇಂದಿನ ಸಂವಿಧಾನಕ್ಕೂ ಪರಸ್ಪರ ಹೋಲಿಕೆ ಇದೆ ಎಂದು ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಸಾಹಿತಿ ಪ್ರೊ.ಡಿ.ಎಸ್. ಸದಾಶಿವಮೂರ್ತಿ ಬಣ್ಣಿಸಿದರು.
ಅವರು ನಗರದ ಜೆಎಲ್ಬಿ ರಸ್ತೆಯಲ್ಲಿರುವ ಸಾಹುಕಾರ್ ಕಬ್ಬಳ್ಳಿ ಚನ್ನಬಸಪ್ಪನವರ ವೀರಶೈವ ಆಶ್ರಮದಲ್ಲಿ ಅಖಿಲ ಭಾರತ ಶರಣ ಪರಿಷತ್ತು ನಗರ ಘಟಕ ಹಾಗೂ ಸಾಹುಕಾರ್ ಕಬ್ಬಳ್ಳಿ ಚನ್ನಬಸಪ್ಪನವರ ವೀರಶೈವ ಆಶ್ರಮದ ಧರ್ಮದರ್ಶಿ ಮಂಡಳಿ ವತಿಯಿಂದ ನಡೆದ ದಾನಶೀಲ ಸಾಹುಕಾರ್ ಕಬ್ಬಳ್ಳಿ ಚನ್ನಬಸಪ್ಪನವರ ಸ್ಮರಣಾರ್ಥ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶರಣರ ವಚನಗಳಲ್ಲಿ ಸಂವಿಧಾನದ ಆಶಯಗಳು ಎಂಬ ವಿಚಾರದ ಬಗ್ಗೆ ಮಾತನಾಡಿ, ಬಸವಾದಿ ಶರಣರ ಕಾಲದಲ್ಲಿಯೇ ಇಂದಿನ ಸಂವಿಧಾನದ ಕಲ್ಪನೆಗಳು ಜಾರಿಯಲ್ಲಿದ್ದವು.
12ನೇ ಶತಮಾನದಲ್ಲಿಯೇ ಇಂದಿನ ಸಂವಿಧಾನದಲ್ಲಿರುವ ಸಾಮಾಜಿಕ ನ್ಯಾಯ, ಸಮಾನತೆ, ಅಸ್ಪøಶ್ಯತೆ, ಕಲ್ಯಾಣ ಸಮಾಜದ ಪರಿಕಲ್ಪನೆಗಳು ಕಂಡು ಬಂದಿವೆ. ಈ ಮೌಢ್ಯಗಳನ್ನು ತೊಡೆದು ಹಾಕಲು ಬಸವಣ್ಣನವರು ದೊಡ್ಡ ಕ್ರಾಂತಿಯನ್ನೇ ಮಾಡಿದ್ದರು. ಮೇಲು ಕೀಳು ಎನ್ನದೇ ಕಾಯಕ ಮಾಡುವ ಎಲ್ಲ ವರ್ಗದವರೂ ಸಾಮಾಜಿಕ ಸಮಾನರು ಎಂದು ಪರಿಗಣಿಸಿದ್ದರು. ಅಸ್ಪøಶ್ಯತೆ ವಿರುದ್ಧ ಹೋರಾಟ ಮಾಡಿದರು. ಇದಕ್ಕಾಗಿ ಎಲ್ಲ ವರ್ಗದವರನ್ನೂ ಒಗ್ಗೂಡಿಸುವ ನಿಟ್ಟಿನಲ್ಲಿ ವಿಶ್ವದ ಮೊದಲ ಸಂಸತ್ ಭವನವೆನಿಸಿದ ಅನುಭವ ಮಂಟಪ ಸ್ಥಾಪನೆ ಮಾಡಿದರು.
ಎಲ್ಲರಿಗೂ ಸಮಾನ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ದಾಸೋಹದ ಮೂಲಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಬಸವಾದಿ ಶರಣರು ಪ್ರೇರಣೆ ನೀಡಿದ್ದರು.
ಒಟ್ಟಾರೆ ಅಂಬೇಡ್ಕರ್ ರವರ ನೇತೃತ್ವದಲ್ಲಿ ರಚನೆಯಾಗಿರುವ ಇಂದಿನ ಸಂವಿಧಾನದ ಸಾಮಾಜಿಕ ನ್ಯಾಯದ ಪರಿಕಲ್ಪನೆಗಳು ಅಂದಿನ ಬಸವಾದಿ ಶರಣರ ಕಾಲದಲ್ಲಿಯೇ ಜಾರಿಗೆ ಬಂದಿದ್ದವು ಎಂದ ಅವರು ಚಿಂತನೆಗಳನ್ನು ಬಣ್ಣಿಸಿದರು.
ಇದೇ ರೀತಿ ಬಸವಾದಿ ಶರಣರ ಹಾದಿಯಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ ಕಬ್ಬಳ್ಳಿ ಗ್ರಾಮದ ಸಾಹುಕಾರ್ ಕಬ್ಬಳ್ಳಿ ಚನ್ನಬಸಪ್ಪನವರು ಗ್ರಾಮೀಣ ಭಾಗದ ಜನರಿಗೆ ಶಿಕ್ಷಣದ ದೊರೆಯದೆ ತೊಂದರೆ ಅನುಭವಿಸುತ್ತಿರುವುದನ್ನು ಮನಗಂಡು ವಿದ್ಯಾರ್ಥಿಗಳಿಗಾಗಿ ಶಾಲಾ ಕಾಲೇಜುಗಳನ್ನು ತೆರೆದರು. ಹಾಗೂ ವಿದ್ಯಾರ್ಥಿಗಳು ಬಡತನದಿಂದ ಶಿಕ್ಷಣದಿಂದ ವಂಚಿತರಾಗಬಾರದು ಎಂದು ನಗರ ಪ್ರದೇಶಗಳಲ್ಲಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪನೆ ಮಾಡಿ ವಿದ್ಯಾರ್ಥಿಗಳಿಗೆ ಉಚಿತ ವಸತಿ ಊಟ ಕಲ್ಪಿಸಿದರು. ತಮ್ಮ ಸ್ವ ಹಸ್ತದಿಂದಲೇ ಶಿಕ್ಷಕರಿಗೆ ವೇತನವನ್ನು ನೀಡಿದರು. ಅವರ ಬದುಕು ನಮ್ಮೆಲ್ಲರಿಗೂ ಆದರ್ಶ ಎಂದು ಕಬ್ಬಳ್ಳಿ ಚನ್ನಬಸಪ್ಪ ರವರ ಗುಣಗಾನ ಮಾಡಿದರು.
ಕಬ್ಬಳ್ಳಿ ಚನ್ನಬಸಪ್ಪನವರ ವಿದ್ಯಾರ್ಥಿನಿಲಯದ ಹಿರಿಯ ವಿದ್ಯಾರ್ಥಿ ಹೆಚ್.ಎಂ. ಬಸವರಾಜು ಅವರು ಮಾತನಾಡಿ, ಗುರು ಶಿಷ್ಯರ ಸಂಬಂಧ ಉತ್ತಮವಾಗಿರಬೇಕು. ಶಿಷ್ಯ ಪ್ರಜ್ಞೆ ಇದ್ದರೆ ಮಾತ್ರ ಉತ್ತಮ ವಿದ್ಯಾರ್ಥಿ ಆಗಲು ಸಾಧ್ಯ. ವಿದ್ಯಾರ್ಥಿಗಳು ಶಿಕ್ಷಣ ನೀಡುವ ಗುರುಗಳನ್ನು ಗೆಲ್ಲಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಪರಿಸರ ದೊರೆಯಬೇಕು. ಹಾಗೂ ವಿದ್ಯಾರ್ಥಿಗಳು ಏಕಾಗ್ರತೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಖಿಲ ಭಾರತ ಶರಣ ಪರಿಷತ್ತು ನಗರ ಘಟಕದ ಅಧ್ಯಕ್ಷ ಡಾ.ಜಯಪ್ಪ ಹೊನ್ನಾಳಿ ಮಾತನಾಡಿ, ವೇದನೆ ಇಲ್ಲದೆ ಸಾಧನೆಯಿಲ್ಲ. ಸಾಧಕರಿಗೆ ಸಾವಿಲ್ಲ. ಅದರಂತೆ ಸಾಹುಕಾರ್ ಕಬ್ಬಳ್ಳಿ ಚನ್ನಬಸಪ್ಪನವರ ಸಾಮಾಜಿಕ ಕಾರ್ಯಗಳ ಬಗ್ಗೆ ಎಷ್ಟು ಹೇಳಿದರೂ ಸಾಲದು, ಚನ್ನಬಸಪ್ಪನವರ ಸಾಧನೆ ಅವಿಸ್ಮರಣೀಯವಾದದು ಎಂದು ಅವರ ಸಾಧನೆಯನ್ನು ಸ್ಮರಿಸಿದರು.
ಇದೇ ಸಮಯದಲ್ಲಿ ಕಬ್ಬಳ್ಳಿ ಚನ್ನಬಸಪ್ಪನವರ ಆಶ್ರಮದ ಹಿರಿಯ
ವಿದ್ಯಾರ್ಥಿಗಳಾದ ಪ್ರೊ. ಹೆಚ್.ಎಂ. ಬಸವರಾಜಪ್ಪ, ಎಂ.ಎಸ್. ಶಿವಸ್ವಾಮಿ, ಕೆ.ಸಿ. ರುದ್ರಮೂರ್ತಿ, ರುದ್ರಪ್ಪ, ಶ್ರೀಕಂಠಯ್ಯ, ಹೆಚ್.ಎಸ್. ಪ್ರಭುಸ್ವಾಮಿ, ಹೆಚ್.ಸಿ. ಮೋಹನ್ಶಂಕರ್, ಬಿ. ವಿಶ್ವನಾಥಪ್ರಸಾದ್, ಉಮೇಶ್, ಪಿ.ಎಂ. ಗುರುಸ್ವಾಮಿ ರವರುಗಳಿಗೆ ಪೇಟ, ಹಾರ, ಫಲ ತಾಂಬೂಲ, ಫಲಕ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಹಿರಿಯ ವಿದ್ಯಾರ್ಥಿ ಬಸವರಾಜು ರವರು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಮೈಸೂರಿನ ಸಾಹುಕಾರ್ ಕಬ್ಬಳ್ಳಿ ಚನ್ನಬಸವಪ್ಪನವರ ವೀರಶೈವ ಆಶ್ರಮದ ಅಧ್ಯಕ್ಷ ಎಚ್.ಜಿ. ಗುರುಪ್ರಸಾದ್, ಉಪಾಧ್ಯಕ್ಷ ಚಿನ್ನಸ್ವಾಮಿ, ಖಜಾಂಚಿ ಡಾ. ಮುದ್ದುಮಲ್ಲೇಶ್, ಸಂಚಾಲಕ ಡಾ. ಹೆಚ್.ಎನ್. ಲೋಕೇಶಪ್ಪ ಹಾಗೂ ಅಖಿಲ ಭಾರತ ಶರಣ ಪರಿಷತ್ತು ನಗರ ಘಟಕದ ಕಾರ್ಯದರ್ಶಿ ಬಿ.ಎನ್. ನಂದೀಶ್ವರ, ಹಿರಿಯ ವಿದ್ಯಾರ್ಥಿಗಳಾದ ದುಗ್ಗಹಟ್ಟಿ ಮಲ್ಲಿಕಾರ್ಜುನಸ್ವಾಮಿ, ಸಾಹುಕಾರ್ ಕಬ್ಬಳ್ಳಿ ಚನ್ನಬಸಪ್ಪನವರ ವೀರಶೈವ ಆಶ್ರಮದ ಧರ್ಮದರ್ಶಿ ಮಂಡಳಿ ಸದಸ್ಯರುಗಳಾದ ಚಾಮರಾಜನಗರ ಜಿ.ಪಂ. ಮಾಜಿ ಉಪಾಧ್ಯಕ್ಷ ಕೆ.ಎಸ್. ಮಹೇಶ್, ಎಂ.ಪಿ. ಸುನೀಲ್ ಸೇರಿದಂತೆ ಆಶ್ರಮದ ಅನೇಕ ಹಿರಿಯ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗಹಿಸಿದ್ದರು.

























