
ಸಂಜೆವಾಣಿ ವಾರ್ತೆ
ಮಂಡ್ಯ:ಸೆ.30- ಕರ್ನಾಟಕದಲ್ಲಿ ಬರ ನಿರ್ವಹಣೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿ,ರಾಜ್ಯದ ಬರ ಪರಿಸ್ಥಿತಿಯನ್ನು ರಾಷ್ಟ್ರೀಯ ದುರಂತವೆಂದು ಘೋಷಿಸು ವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕದಸಂಸ) ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಅಲ್ಲಿ ಕೆಲಕಾಲ ಧರಣಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿ ಯಯ್ಯ ಮಾತನಾಡಿ, ಮಳೆಯ ಕೊರತೆಯಿಂದ ಕರ್ನಾಟಕ ಬರ ಪರಿಸ್ಥಿತಿ ಯನ್ನು ಎದುರಿಸುತ್ತಿದ್ದು, ರಾಜ್ಯದ ಬರ ದುರಂತವನ್ನು ತಕ್ಷಣವೇ ರಾಷ್ಟ್ರೀಯ ದುರಂತವೆಂದು ಘೋಷಿಸ ಬೇಕು.
ಬರದಿಂದ ಉಂಟಾಗಿರುವ ನಷ್ಟಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ಉಂಟಾಗಿ ನಾಲ್ಕು ತಿಂಗಳು ಕಳೆದಿದ್ದರೂ, ಸಮರ್ಪಕವಾಗಿ ಬರ ನಿರ್ವಹಣೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲ ವಾಗಿದೆ.ಬರವನ್ನು ರಾಷ್ಟ್ರೀಯ ದುರಂತವೆಂದು ಪರಿಗಣಿಸಲು ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಕೇಂದ್ರ ಸರ್ಕಾರವೂ ವಿಫಲವಾಗಿದೆ ಎಂದು ಆರೋಪಿಸಿದರು.
ಪ್ರತಿ ಎಕರೆಗೆ ಕೇವಲ 2,500 ರೂ. ತಾತ್ಕಾಲಿಕ ಪರಿಹಾರ ಘೋಷಿಸಿರುವುದು ರೈತರಿಗೆ ಮಾಡಿದ ಅನ್ಯಾಯವಾಗಿದೆ. ಕೃಷಿ ನಷ್ಟಕ್ಕೆ ಅನುಗುಣವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರತಿ ಎಕರೆಗೆ ಕನಿಷ್ಠ 50 ಸಾವಿರ ರೂ. ಬೆಳೆ ಪರಿಹಾರ ನೀಡಬೇಕು. ರೈತರ ಕೃಷಿ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ರೈತ ಕುಟುಂಬಗಳ ವಿದ್ಯಾರ್ಥಿಗಳ ಶಿಕ್ಷಣ ಶುಲ್ಕವನ್ನು ಸರ್ಕಾರವೇ ಭರಿಸಬೇಕು ಎಂದು ಆಗ್ರಹಿಸಿದರು.
ಬರ ಪರಿಸ್ಥಿತಿಯನ್ನು ಸಮರೋಪಾದಿಯಲ್ಲಿ ನಿರ್ವಹಿಸಲು ಸರ್ಕಾರಗಳು ಮುಂದಾಗಬೇಕು.ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವು ಒದಗಿಸಬೇಕು. ಉದ್ಯೋಗ ಅರಸಿ ಗುಳೆ ಹೋಗುತ್ತಿರುವ ಗ್ರಾಮೀಣ ಜನರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸುವುದರ ಜತೆಗೆ ಆಹಾರ ಸಾಮಗ್ರಿ ಗಳನ್ನು ಒದಗಿಸಿ ಸಂಕಷ್ಟ ದಲ್ಲಿರುವ ಕುಟುಂಬಗಳಿಗೆ ನೆರವಾಗಬೇಕು. ಮಂಡ್ಯ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸ ಬೇಕು ಎಂದು ಒತ್ತಾಯಿಸಿ ದರು.
ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ಬಿ.ಆನಂದ್, ಸುಶ್ಮಿತ ಜಿ.ಹೊಸಹಳ್ಳಿ, ಈಚಗೆರೆ ನಾಗರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.

























