Home ಜಿಲ್ಲೆ ಬದಲಾಗುತ್ತಿರುವ ಜೀವನ ಶೈಲಿಯೇ ಮೆದುಳಿನ ಆರೋಗ್ಯಕ್ಕೆ ಮಾರಕ : ಡಿಹೆಚ್ಓ ಡಾ.ಟಿ.ಲಿಂಗರಾಜು

ಬದಲಾಗುತ್ತಿರುವ ಜೀವನ ಶೈಲಿಯೇ ಮೆದುಳಿನ ಆರೋಗ್ಯಕ್ಕೆ ಮಾರಕ : ಡಿಹೆಚ್ಓ ಡಾ.ಟಿ.ಲಿಂಗರಾಜು

ಸಂಜೆವಾಣಿ ವಾರ್ತೆ

ಹೊಸಪೇಟೆ.ಆ.4 ಮೆದುಳು ಮಾನವ ದೇಹದ ನಿಯಂತ್ರಣ ಕೇಂದ್ರ. ಮೆದುಳಿಗೆ ತೊಂದರೆ ಉಂಟಾದರೆ ಅದು ಕೇವಲ ಒಬ್ಬ ವ್ಯಕ್ತಿಯ ಆರೋಗ್ಯವನ್ನಷ್ಟೇ ಅಲ್ಲ, ಇಡೀ ಕುಟುಂಬದ ಆರ್ಥಿಕ ಹಾಗೂ ಮಾನಸಿಕ ನೆಮ್ಮದಿಯನ್ನೇ ಕಸಿದುಕೊಳ್ಳುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ. ಲಿಂಗರಾಜು ಅವರು ಕಳವಳ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸೋಮವಾರ ಹೊಸಪೇಟೆ ಉಪವಿಭಾಗದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ವಿಶ್ವ ಮೆದುಳು ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ, ರಕ್ತದೊತ್ತಡ, ಮಧುಮೇಹ, ದುಶ್ಚಟಗಳು ಅಸಮರ್ಪಕ ಆಹಾರ ಪದ್ಧತಿ ಹಾಗೂ ಶಾರೀರಿಕ ಶ್ರಮ ಅಥವಾ ವ್ಯಾಯಾಮದ ಕೊರತೆಯಿಂದ ಮೆದುಳು ಸಂಬಂಧಿತ ರೋಗಗಳು ಹೆಚ್ಚಾಗುತ್ತಿವೆ. ಪಾರ್ಶ್ವವಾಯು, ಮೆದುಳಿನ ರಕ್ತಸ್ರಾವ, ನರಗಳ ದೌರ್ಬಲ್ಯ ಹಾಗೂ ಮರೆವಿನ ಕಾಯಿಲೆ ಹೆಚ್ಚಾಗಿ ಕಂಡು ಬರುತ್ತಿದ್ದು, ಸಕಾಲದಲ್ಲಿ ಚಿಕಿತ್ಸೆ ಪಡೆದು ಜಾಗೃತಿ ವಹಿಸುವುದು ತೀರಾ ಅಗತ್ಯವಾಗಿದೆ ಎಂದರು.

ಮನುಷ್ಯ ಆರೋಗ್ಯಕರ ಜೀವನ ನಡೆಸಲು ಪ್ರತಿದಿನ 7 ರಿಂದ 9 ಗಂಟೆಗಳ ಕಾಲ ನಿದ್ರೆ ಮಾಡಬೇಕು. ಸಮಯಕ್ಕೆ ಸರಿಯಾಗಿ ಪೌಷ್ಟಿಕ ಆಹಾರ ಸೇವಿಸಬೇಕು. ಜಂಕ್ ಫುಡ್ಗಳಿಂದ ದೂರವಿರುವುದು. ಹೊಸ ಕೌಶಲ್ಯಗಳನ್ನು ಕಲಿಯುವುದರಿಂದ ಮೆದುಳು ಚುರುಕಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿ ಹೇಳಿದರು.

ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಭರತ್ ಮಾತನಾಡಿ, ಈ ಹಿಂದೆ ಪಾರ್ಶ್ವವಾಯು ಕೇವಲ ಹಿರಿಯ ನಾಗರಿಕರಲ್ಲಿ ಮಾತ್ರ ಕಂಡು ಬರುತ್ತಿತ್ತು. ಆದರೆ ಬದಲಾದ ಕೆಟ್ಟ ಅಭ್ಯಾಸಗಳಿಂದಾಗಿ ಇತ್ತೀಚೆಗೆ ಯುವ ಸಮುದಾಯದಲ್ಲೂ ಈ ಸಮಸ್ಯೆ ಉಲ್ಬಣಿಸುತ್ತಿದೆ. ಪಾರ್ಶ್ವವಾಯು ಲಕ್ಷಣಗಳು ಕಂಡು ಬಂದಾಗ ಗೋಲ್ಡನ್ ಅವರ್ ಅಂದರೆ ಘಟನೆ ಸಂಭವಿಸಿದ 4 ಗಂಟೆಗಳ ಒಳಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದರೆ ಜೀವ ಉಳಿವು ಸಾಧ್ಯ ಎಂದರು. ಕಳೆದ ವರ್ಷ ಸೂಕ್ತ ಸಮಯಕ್ಕೆ ಆಸ್ಪತ್ರೆ ತಲುಪಿದ 15 ರಿಂದ 17 ರೋಗಿಗಳನ್ನು ಯಶಸ್ವಿಯಾಗಿ ಗುಣಪಡಿಸಲಾಗಿದೆ ಎಂದು ಹೇಳಿದರು.

ಫಿಸಿಯೋಥೆರಪಿ ಜಾಗೃತಿ: ನಿಮ್ಹಾನ್ಸ್ ಸಹಯೋಗದಲ್ಲಿ ಉಜ್ಜೀವನ್ ಬ್ಯಾಂಕ್ನ ಫಿಸಿಯೋಥೆರಪಿಸ್ಟ್ ದಿಶಾಂತ್ ರವರು ಮೆದುಳಿನ ಆರೈಕೆ ಹಾಗೂ ಚಿಕಿತ್ಸೆಯಲ್ಲಿ ಫಿಸಿಯೋಥೆರಪಿ ಉಪಕರಣಗಳ ಬಳಕೆಯ ಕುರಿತು ಪ್ರಾತ್ಯಕ್ಷಿಕೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ.ಕೆ.ರಾಧಿಕಾ, ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಜಂಬಯ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ, ಡಾ.ಸತೀಶ್ ಚಂದ್ರ, ಡಾ.ಫಜಲುದ್ದೀನ್, ಡಾ.ರಾಘವೇಂದ್ರ, ಡಾ.ಸಿದ್ಧಲಿಂಗಪ್ಪ, ಡಾ.ಆಶಾ ಕೋರಿ ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.