
ಪೊಲೀಸ್ ಆಯುಕ್ತರಿಂದ ಪೊಲೀಸ್ ಮಹಾನಿರ್ದೇಶಕರಿಗೆ ಪ್ರಸ್ತಾವನೆ ಸಲ್ಲಿಕೆ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಐದು ಮಹಾನಗರ ಪಾಲಿಕೆಗಳ ಮಾದರಿಯಲ್ಲೇ, ರಾಜಧಾನಿಯ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಆಡಳಿತವನ್ನು ಮತ್ತಷ್ಟು ಬಲಪಡಿಸಲು ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು ಐದು ಪ್ರತ್ಯೇಕ ಕಮಿಷನರೇಟ್‌ಗಳಾಗಿ ವಿಭಜಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ ಅವರಿಗೆ ವಿಸ್ತೃತ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಹೆಚ್ಚುತ್ತಿರುವ ಜನಸಂಖ್ಯೆ (೧.೫೬ ಕೋಟಿ), ತೀವ್ರ ವಾಹನ ದಟ್ಟಣೆ, ಸೈಬರ್ ಅಪರಾಧಗಳ ಏರಿಕೆ ಹಾಗೂ ನಗರದ ಗಡಿ ವಿಸ್ತರಣೆಯನ್ನು ಗಮನದಲ್ಲಿಟ್ಟುಕೊಂಡು ಈ ಬೃಹತ್ ಬದಲಾವಣೆಗೆ ಚಾಲನೆ ನೀಡಲಾಗಿದೆ. ಈ ಯೋಜನೆಗೆ ಸರ್ಕಾರದಿಂದ ಅನುಮೋದನೆ ದೊರೆತರೆ ರಾಜಧಾನಿಯ ರಕ್ಷಣಾ ವ್ಯವಸ್ಥೆಯಲ್ಲಿ ಐತಿಹಾಸಿಕ ಬದಲಾವಣೆಯಾಗಲಿದೆ.
ಹೊಸ ಆಡಳಿತ ರಚನೆ ಮತ್ತು ವೆಚ್ಚದ ವಿವರ:
ಇಡೀ ನಗರದ ಆಡಳಿತ ಸುಪರ್ದಿಗೆ ’ಚೀಫ್ ಪೊಲೀಸ್ ಕಮಿಷನರ್’ ಹುದ್ದೆಯನ್ನು ಸೃಜಿಸಲಾಗುತ್ತದೆ. ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ಎಂಬ ಐದು ವಲಯಗಳಿಗೆ ಐಜಿಪಿ/ಡಿಐಜಿಪಿ ದರ್ಜೆಯ ಪ್ರತ್ಯೇಕ ಪೊಲೀಸ್ ಆಯುಕ್ತರನ್ನು ನೇಮಿಸಲಾಗುವುದು. ಈ ಬೃಹತ್ ಯೋಜನೆಗೆ ೭೬೪.೮೭ ಕೋಟಿ ಅಂದಾಜು ವೆಚ್ಚವಾಗಲಿದೆ. ಇದರಲ್ಲಿ ?೩೬೮.೭೧ ಕೋಟಿ ಆವರ್ತಕ (ಸಿಬ್ಬಂದಿ ವೇತನ) ವೆಚ್ಚ ಹಾಗೂ ೩೯೬.೧೬ ಕೋಟಿ ಮೂಲಸೌಕರ್ಯ, ವಾಹನ ಮತ್ತು ತಂತ್ರಜ್ಞಾನಕ್ಕಾಗಿ ವ್ಯಯಿಸಲಾಗುತ್ತದೆ.
ಒಟ್ಟು ೬,೬೩೩ ನೂತನ ಹುದ್ದೆಗಳ ಸೃಜನೆಗೆ ಶಿಫಾರಸು ಮಾಡಲಾಗಿದೆ.
ವಲಯವಾರು ಕಮಿಷನರೇಟ್ ಹಾಗೂ ವ್ಯಾಪ್ತಿ
ಕೇಂದ್ರ ಕಮಿಷನರೇಟ್‌ವ್ಯಾಪ್ತಿ ವಿಧಾನಸೌಧ, ಉಚ್ಚ ನ್ಯಾಯಾಲಯ, ಸಿಬಿಡಿ ವಲಯ, ಕಂಠೀರವ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ಮೆಜೆಸ್ಟಿಕ್ ಪ್ರಮುಖ ಭಾಗಗಳು. ೬ ಡಿಸಿಪಿ ವಿಭಾಗಗಳು. ಹೊಸದಾಗಿ ’ಇಂದಿರಾನಗರ’ ಮತ್ತು ’ಗಾಂಧೀನಗರ’ ಕಾನೂನು ಸುವ್ಯವಸ್ಥೆ ವಿಭಾಗಗಳು. ೬೭೭ ಹೊಸ ಹುದ್ದೆಗಳು (?೧೩೧.೫೧ ಕೋಟಿ ವೆಚ್ಚ).
ಪೂರ್ವ ಕಮಿಷನರೇಟ್ ವ್ಯಾಪ್ತಿ: ವೈಟ್‌ಫೀಲ್ಡ್, ಕೆ.ಆರ್. ಪುರಂ, ಮಹದೇವಪುರ ಮತ್ತು ಇತರೆ. ೫ ಡಿಸಿಪಿ ವಿಭಾಗಗಳು. ಕೊಡತಿ, ಕಸ್ತೂರಿ ನಗರ, ಬಿದರಹಳ್ಳಿ, ಮಾರತಹಳ್ಳಿ ಟ್ರಾಫಿಕ್, ವರ್ತೂರು ಟ್ರಾಫಿಕ್ ಸೇರಿದಂತೆ ಹೊಸ ಠಾಣೆಗಳ ಸ್ಥಾಪನೆ. ೨,೭೩೪ ಹೊಸ ಹುದ್ದೆಗಳು (೧೭೬.೪೫ ಕೋಟಿ ವೆಚ್ಚ).
ಪಶ್ಚಿಮ ಕಮಿಷನರೇಟ್ ವಿಜಯನಗರ, ಪೀಣ್ಯ, ಕೆಂಗೇರಿ, ಆರ್‌ಆರ್ ನಗರ ಮತ್ತು ಕೈಗಾರಿಕಾ ಪ್ರದೇಶಗಳು. ೬ ಡಿಸಿಪಿ ವಿಭಾಗಗಳು. ತಾವರೆಕೆರೆ, ಅಂಧ್ರಹಳ್ಳಿ, ಕಡಬಗೆರೆ, ಆರ್‌ಆರ್ ನಗರ ಟ್ರಾಫಿಕ್ ಸೇರಿ ೧೦ ಹೊಸ ಠಾಣೆಗಳು. ೧,೨೩೫ ಹೊಸ ಹುದ್ದೆಗಳು (?೧೯೦.೫೮ ಕೋಟಿ ವೆಚ್ಚ).
ಉತ್ತರ ಕಮಿಷನರೇಟ್ ವ್ಯಾಪ್ತಿ: ಯಲಹಂಕ, ದೇವನಹಳ್ಳಿ, ಕೆಐಎಬಿ ವಿಮಾನ ನಿಲ್ದಾಣ, ಯಶವಂತಪುರ ಹಾಗೂ ಸುತ್ತಮುತ್ತಲಿನ ಭಾಗಗಳು. ೬ ಡಿಸಿಪಿ ವಿಭಾಗಗಳು. ಕೊತ್ತನೂರು ಸೇರಿದಂತೆ ೩ ಹೊಸ ಠಾಣೆಗಳು. ೯೪೪ ಹೊಸ ಹುದ್ದೆಗಳು (?೧೩೪.೨೭ ಕೋಟಿ ವೆಚ್ಚ).
ದಕ್ಷಿಣ ಕಮಿಷನರೇಟ್ ವ್ಯಾಪ್ತಿ ಜಯನಗರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ, ಸರಜಾಪುರ, ಆನೇಕಲ್ ಮತ್ತು ಕಗ್ಗಲಿಪುರ. ೬ ಡಿಸಿಪಿ ವಿಭಾಗಗಳು. ಜಿಗಣಿ, ಅತ್ತಿಬೆಲೆ, ಬನ್ನೇರುಘಟ್ಟ, ಸೂರ್ಯನಗರ ಸೇರಿ ನೂತನ ಠಾಣೆಗಳು. ೧,೦೪೩ ಹೊಸ ಹುದ್ದೆಗಳು (೧೫೨ ಕೋಟಿ ವೆಚ್ಚ).
ಬೆಂಗಳೂರು ಸಿಟಿ ಪೊಲೀಸ್‌ನ ಅತ್ಯಂತ ಪ್ರಮುಖ ತನಿಖಾ ಘಟಕವಾದ ಸಿಸಿಬಿ ಯಾವುದೇ ವಿಭಜನೆ ಇಲ್ಲದೆ, ನೇರವಾಗಿ ’ಮುಖ್ಯ ಪೊಲೀಸ್ ಆಯುಕ್ತರ’ ಸುಪರ್ದಿಯಲ್ಲೇ ಕಾರ್ಯನಿರ್ವಹಿಸಲಿದೆ. ಅದೇ ರೀತಿ, ಸಂಚಾರ ವಿಭಾಗಕ್ಕೂ ಪ್ರತ್ಯೇಕ ಕಮಿಷನರ್ ಇದ್ದು, ಟ್ರಾಫಿಕ್ ನಿರ್ವಹಣೆ ಹಾಗೂ ತರಬೇತಿ ಕೇಂದ್ರಗಳ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಹಿರಿಯ ಅಧಿಕಾರಿಗಳ ಸಮಾಲೋಚನೆ ಬಳಿಕ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಪ್ರಸ್ತಾವನೆಗೆ ಅಂತಿಮ ಅನುಮೋದನೆ ನೀಡಲಿದ್ದಾರೆ.
































