Home ಸಿನೆಮಾ ಪ್ರೀತಿ, ವ್ಯಸನದ ಸುತ್ತ ‘ಲಾರ್ಡ್ ಗಾಗ’ ಕಲ್ಟ್ ಜಗತ್ತು!

ಪ್ರೀತಿ, ವ್ಯಸನದ ಸುತ್ತ ‘ಲಾರ್ಡ್ ಗಾಗ’ ಕಲ್ಟ್ ಜಗತ್ತು!

ಸಸ್ಪೆನ್ಸ್‌, ಮನೋವೈಜ್ಞಾನಿಕ ತಿರುವುಗಳ ಸಂಗಮ

ವಿಭಿನ್ನ ಕಥನದ ಚಿತ್ರದ ಟೀಸರ್ ಬಿಡುಗಡೆ

ಸಿನಿಮಾದ ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ‘ಲಾರ್ಡ್ ಗಾಗ’ ಇದೀಗ ತನ್ನ ಮೊದಲ ಟೀಸರ್ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಪ್ರೀತಿ, ಭಾವನೆ, ವ್ಯಸನ ಮತ್ತು ಮನುಷ್ಯನ ಮನಸ್ಸಿನ ಆಯಾಮಗಳನ್ನು ವಿಭಿನ್ನವಾಗಿ ತೆರೆದಿಡುವ ಪ್ರಯತ್ನಕ್ಕೆ ಚಿತ್ರತಂಡ ಕೈಹಾಕಿದ್ದು, ಸಸ್ಪೆನ್ಸ್‌ ಹಾಗೂ ರೊಮ್ಯಾಂಟಿಕ್ ಥ್ರಿಲ್ಲರ್ ಅಂಶಗಳೊಂದಿಗೆ ಸಿನಿಮಾ ಮೂಡಿಬರುತ್ತಿದೆ.

ಯುವ ನಿರ್ದೇಶಕ ವೈಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರವನ್ನು ‘ಝೀರೋ ಗ್ರ್ಯಾವಿಟಿ ಫಿಲಂಸ್’ ಬ್ಯಾನರ್‌ನಲ್ಲಿ ಉದ್ಯಮಿ ಮುಕಿ ರೆಘುನಾಥನ್ ನಿರ್ಮಿಸುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಈ ಹಿಂದೆ ಶೀರ್ಷಿಕೆ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿತ್ತು. ಇದೀಗ ಮೊದಲ ಟೀಸರ್ ಅನಾವರಣಗೊಳಿಸಿ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.

ಮನುಷ್ಯನ ಮನಸ್ಸಿನಲ್ಲಿ ಮೂಡುವ ಪ್ರೀತಿ, ಪ್ರೇಮ, ಪ್ರಣಯ, ಭಾವನೆಗಳು, ವ್ಯಸನ ಹಾಗೂ ಬದುಕಿನ ಆಯ್ಕೆಗಳನ್ನು ಕಲ್ಟ್ ಶೈಲಿಯ ನಿರೂಪಣೆಯಲ್ಲಿ ಕಟ್ಟಿಕೊಡುವುದು ಚಿತ್ರದ ವಿಶೇಷ. ಟೀಸರ್‌ನಲ್ಲಿ ಕಥೆಯ ಸಂಪೂರ್ಣ ಎಳೆಯನ್ನು ಬಿಟ್ಟುಕೊಡದೆ, ವಿಭಿನ್ನ ದೃಶ್ಯ ವಿನ್ಯಾಸದ ಮೂಲಕ ಕುತೂಹಲ ಉಳಿಸಿಕೊಳ್ಳಲಾಗಿದೆ.

ಚಿತ್ರದಲ್ಲಿ ಶೂನ್ಯ ನಾಯಕನಾಗಿ ನಟಿಸಿದ್ದು, ಸ್ವರೂಪಿಣಿ ಮತ್ತು ದಿಶಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕ ಮುಕಿ ರೆಘುನಾಥನ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ.

ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ, ಹಿಂದಿ, ಬೆಂಗಾಲಿ ಹಾಗೂ ಭೋಜಪುರಿ ಸೇರಿದಂತೆ ಏಳಕ್ಕೂ ಹೆಚ್ಚು ಭಾಷೆಗಳಲ್ಲಿ ಚಿತ್ರವನ್ನು ಏಕಕಾಲಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ಮುಂದಿನ ದಿನಗಳಲ್ಲಿ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ.

ಹೊಸ ಕಥೆ, ವಿಭಿನ್ನ ನಿರೂಪಣೆ ಮತ್ತು ಮನೋವೈಜ್ಞಾನಿಕ ತಿರುವುಗಳೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿರುವ ‘ಲಾರ್ಡ್ ಗಾಗ’ ಯಾವ ರೀತಿಯ ಅನುಭವ ನೀಡಲಿದೆ ಎಂಬ ಕುತೂಹಲ ಈಗಿನಿಂದಲೇ ಮೂಡಿದೆ.