
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಸೆ.30:– ಪೌರಕಾರ್ಮಿಕರ ಬಡಾವಣೆ ನಿರ್ಮಾಣ ಮಾಡಲು ಸರ್ಕಾರಿ ಜಮೀನು ಗುರುತಿಸುವಂತೆ ಪುರಸಭೆ ಮುಖ್ಯಾಧಿಕಾರಿ ಮತ್ತು ತಹಶೀಲ್ದಾರರಿಗೆ ಸೂಚನೆ ನೀಡಲಾಗಿದ್ದು, ಆನಂತರ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ವಿವರಿಸಿದರು.
ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು ಹೆಚ್ಚು ಪೌರಕಾರ್ಮಿಕರು ವಾಸಿಸುವ 5ನೇ ವಾರ್ಡನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ ಎಂದು ನುಡಿದರು.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೌರಕಾರ್ಮಿಕರ ಬದುಕನ್ನು ಹಸನು ಮಾಡಬೇಕೆಂಬ ಉದ್ದೇಶದಿಂದ ಹಂತ ಹಂತವಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳಲ್ಲಿ ಪ್ರಮುಖವಾಗಿ ನಗದುರಹಿತ ಆರೋಗ್ಯ ವಿಮೆ ಕಾರ್ಡನ್ನು ಈಗಾಗಲೇ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಎಲ್ಲಾ ತಾಲೂಕು ಕೇಂದ್ರಗಳಲ್ಲಿಯೂ ಪೌರಕಾರ್ಮಿಕರಿಗೆ ಸಮುದಾಯ ಭವನ ನಿರ್ಮಿಸಲು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದು, ಮುಂದಿನ ವರ್ಷದಿಂದ ಭವನದ ಕಾಮಗಾರಿಗೆ ಅನುದಾನ ನೀಡಲಿದ್ದಾರೆ ಎಂದು ಭರವಸೆ ನೀಡಿದರು.
ಕೆ.ಆರ್.ನಗರದ ಪುರಸಭೆ ಸ್ವಚ್ಚತೆಯಲ್ಲಿ ಮೂರು ಬಾರಿ ಕೇಂದ್ರ ಪುರಸ್ಕೃತ ಪ್ರಶಸ್ತಿ ಪಡೆಯಲು ಪೌರಕಾರ್ಮಿಕರು ಕಾರಣರಾಗಿದ್ದು, ಇವರನ್ನು ಅಭಿನಂದಿಸುವುದರ ಜತೆಗೆ ಅವರು ವಾಸಿಸುವ ಬಡಾವಣೆಗಳನ್ನು ಅಭಿವೃದ್ಧಿಪಡಿಸಲು ವಿಶೇಷ ಅನುದಾನ ನೀಡಲಾಗುತ್ತದೆ. ಅವರ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಲು ಟ್ಯಾಬ್ ವಿತರಿಸಲಾಗಿದೆ ಎಂದು ತಿಳಿಸಿದರು.
ಪುರಸಭೆ ಮಾಜಿ ಅಧ್ಯಕ್ಷರಾದ ಕೋಳಿಪ್ರಕಾಶ್, ಮಾಜಿ ಸದಸ್ಯರಾದ ಸಿ.ಶಂಕರ್, ಕೆ.ವಿನಯ್, ಕೆ.ಎಸ್.ಶಂಕರ್, ಮುಖ್ಯಾಧಿಕಾರಿ ಜಿ.ಎಸ್.ರಮೇಶ್, ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ರಾಜು, ಜಿಲ್ಲಾ ಸಫಾಯಿ ಕರ್ಮಚಾರಿಗಳ ಜಾಗೃತಿ ವೇದಿಕೆ ಸಂಚಾಲಕ ನಂಜಪ್ಪಬಸವನಗುಡಿನಂಜಪ್ಪ ಮಾತನಾಡಿದರು.
ಇದೇ ಸಂದರ್ಭದಲ್ಲಿ ಎಲ್ಲಾ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಪೌರಕಾರ್ಮಿಕರ ಸಂಘದ ಪದಾಧಿಕಾರಿಗಳಾದ ಆರ್.ವಸಂತಕುಮಾರಿ, ದಿನೇಶ್ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ, ಉಪಾಧ್ಯಕ್ಷ ಸೋಮಣ್ಣ, ಮುಖಂಡರಾದ ನವೀದ್ಅಹಮದ್, ವೃಷಭೇಂದ್ರ, ಪುರಸಭೆ ಅಭಿಯಂತರರಾದ ಬಿ.ಎಸ್.ಮಧುಸೂದನ್, ಸೌಮ್ಯ, ಹಿರಿಯ ಆರೋಗ್ಯ ನಿರೀಕ್ಷಕ ಎಸ್.ಪಿ.ರಾಜೇಂದ್ರಕುಮಾರ್, ಸಿಬ್ಬಂದಿಗಳಾದ ಸ್ವಪ್ನ, ಲಕ್ಷ್ಮಿ, ಜ್ಞಾನೇಶ್, ಫರೀದಾ ಹಾಜರಿದ್ದರು.

























