
ಮುಂಬೈ, ಜು.28:- ಭಾರತದ ಅತ್ಯಂತ ಜನಪ್ರಿಯ ರ್ಯಾಪರ್‍ಗಳಲ್ಲಿ ಒಬ್ಬರಾದ ಬಾದ್‍ಶಾ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳ ನಡುವೆ ಅವರ ಎರಡನೇ ಪತ್ನಿ ಹಾಗೂ ಪಂಜಾಬಿ ನಟಿ ಇಶಾ ರಿಖಿ ಅಂತಿಮವಾಗಿ ತಮ್ಮ ಮೌನ ಮುರಿದಿದ್ದಾರೆ. ಪತಿಯ ಅಧಿಕಾರ ಮತ್ತು ಪ್ರಭಾವಕ್ಕೆ ಹೆದರಿ ಇಷ್ಟು ದಿನ ಸುಮ್ಮನಿದ್ದೆ ಎಂದು ಬಹಿರಂಗಪಡಿಸಿರುವ ಅವರು, ಕೊನೆಗೂ ತಮ್ಮ ಭಯವನ್ನು ಬದಿಗಿಟ್ಟು ಧೈರ್ಯವಾಗಿ ಮಾತನಾಡಲು ನಿರ್ಧರಿಸಿದ್ದಾರೆ.
ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೆÇೀಸ್ಟ್ ಹಂಚಿಕೊಂಡಿರುವ ಇಶಾ, ದಾಂಪತ್ಯದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ.
“ಕೆಲವು ಹೋರಾಟಗಳಲ್ಲಿ ಹೊರಗೆ ಕಾಣಿಸುವ ಗಾಯದ ಗುರುತುಗಳಿರುವುದಿಲ್ಲ. ಪತಿಯ ಶಕ್ತಿ, ಪ್ರಭಾವ ಮತ್ತು ಅಧಿಕಾರಕ್ಕೆ ಹೆದರಿ ನಾನು ದೀರ್ಘಕಾಲ ಮೌನವಾಗಿದ್ದೆ. ಸುಮ್ಮನಿರುವುದೇ ಸುರಕ್ಷಿತ ಎಂದು ನನ್ನ ಮನಸ್ಸಿಗೆ ನಾನೇ ಸಮಜಾಯಿಷಿ ಕೊಟ್ಟುಕೊಂಡಿದ್ದೆ” ಎಂದು ಇಶಾ ಬರೆದುಕೊಂಡಿದ್ದಾರೆ.
ಮಾತು ಮುಂದುವರಿಸಿದ ಅವರು, “ಮೌನವಾಗುವುದೆಂದರೆ ಎಲ್ಲವನ್ನೂ ಒಪ್ಪಿಕೊಂಡಿದ್ದೇನೆ ಎಂದರ್ಥವಲ್ಲ. ಅದು ಕೇವಲ ಪರಿಸ್ಥಿತಿಯನ್ನು ಎದುರಿಸಿ ಬದುಕುವ ಒಂದು ಮಾರ್ಗವಾಗಿತ್ತು. ಆದರೆ ಇಂದು ನಾನು ಭಯಕ್ಕಿಂತ ಧೈರ್ಯವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಪೂರ್ತಿ ಕಥೆಯನ್ನು ಹೇಳಲು ನಾನು ಇನ್ನೂ ಸಿದ್ಧವಾಗಿಲ್ಲದಿರಬಹುದು, ಆದರೆ ಎಲ್ಲವೂ ಸರಿಯಾಗಿದೆ ಎಂದು ನಟಿಸುವುದನ್ನು ಇಂದಿನಿಂದ ನಿಲ್ಲಿಸುತ್ತಿದ್ದೇನೆ” ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾದ ವೀಡಿಯೊ
ಇಶಾ ರಿಖಿ ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಜೀವನದ ಕೆಲವು ಕ್ಷಣಗಳ ವೀಡಿಯೊ ಒಂದನ್ನು ಹಂಚಿಕೊಂಡಾಗ ಈ ವಿಚ್ಛೇದನದ ವದಂತಿಗಳು ಕಾವು ಪಡೆದುಕೊಂಡಿದ್ದವು. ಆ ವೀಡಿಯೊಗೆ, “ಪ್ರತಿಯೊಂದು ಬಿರುಗಾಳಿಯೂ ಒಂದು ಪಾಠ. ಪ್ರತಿಯೊಂದು ಪ್ರಾರ್ಥನೆಯೂ ಒಂದು ಭರವಸೆ” ಎಂಬ ಶೀರ್ಷಿಕೆ ನೀಡಿದ್ದರು.
ಈ ಪೆÇೀಸ್ಟ್‍ಗೆ ಚಿತ್ರರಂಗದ ಪ್ರಮುಖರು ಪ್ರತಿಕ್ರಿಯಿಸಿದ್ದು, ನಟಿ ಜಾಸ್ಮಿನ್ ಭಾಸಿನ್ “ಧೈರ್ಯವಾಗಿರು” ಎಂದು ಕಾಮೆಂಟ್ ಮಾಡಿದ್ದಾರೆ. ನಟಿ ಶ್ರುತಿ ಸೋಧಿ “ಖಂಡಿತವಾಗಿಯೂ ಇದೊಂದು ದೊಡ್ಡ ಪಾಠ” ಎಂದು ಬರೆದರೆ, ಪಾಯಲ್ ದೇವ್ ಮತ್ತು ಮನ್ನತ್ ಸಿಂಗ್ ಹೃದಯದ ಎಮೋಜಿಗಳನ್ನು ಪೆÇೀಸ್ಟ್ ಮಾಡುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಇದು ದಂಪತಿಯ ನಡುವಿನ ಭಿನ್ನಾಪ್ರಾಯದ ಊಹಾಪೆÇೀಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ಇಶಾ ಬಹಿರಂಗವಾಗಿ ಮಾತನಾಡಿದ ನಂತರ, ಅಭಿಮಾನಿಗಳು ಈಗ ರ?ಯಾಪರ್ ಬಾದ್‍ಶಾ ಅವರ ಪ್ರತಿಕ್ರಿಯೆಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.
6 ವರ್ಷಗಳ ನಂತರ ಎರಡನೇ ಮದುವೆಯಾಗಿದ್ದ ಬಾದ್‍ಶಾ
ಇಶಾ ರಿಖಿ ಅವರು ಬಾದ್‍ಶಾ ಅವರ ಎರಡನೇ ಪತ್ನಿಯಾಗಿದ್ದಾರೆ. ಬಾದ್‍ಶಾ ಅವರು ಈ ಹಿಂದೆ ಜಾಸ್ಮಿನ್ ಮಸಿಹ್ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ 2017 ರಲ್ಲಿ ‘ಜೆಸ್ಸಾಮಿ ಗ್ರೇಸ್ ಮಸಿಹ್ ಸಿಂಗ್’ ಎಂಬ ಹೆಣ್ಣು ಮಗು ಜನಿಸಿತ್ತು. ತದನಂತರ 2020 ರಲ್ಲಿ ಇಬ್ಬರೂ ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡಿದ್ದರು.
ಮೊದಲ ಪತ್ನಿಯಿಂದ ಬೇರ್ಪಟ್ಟ ಸುಮಾರು 6 ವರ್ಷಗಳ ನಂತರ ಬಾದ್‍ಶಾ ಮತ್ತು ಇಶಾ ರಿಖಿ ಪರಸ್ಪರ ಸ್ನೇಹಿತರ ಪಾರ್ಟಿಯೊಂದರಲ್ಲಿ ಭೇಟಿಯಾಗಿದ್ದರು. ಆರಂಭದ ಸ್ನೇಹ ಬಳಿಕ ಪ್ರೀತಿಯಾಗಿ ಬದಲಾಗಿ, ಇಬ್ಬರೂ ಮದುವೆಯಾಗಿದ್ದರು. ಆದರೆ ಈಗ ಈ ದಾಂಪತ್ಯದಲ್ಲೂ ಬಿರುಗಾಳಿ ಎದ್ದಿದೆ.




























