Home ಜಿಲ್ಲೆ ಪಂಪ ಕನ್ನಡ ಸಾಹಿತ್ಯದ ಶ್ರೇಷ್ಠ ಕವಿ:ಚನ್ನಬಸವಣ್ಣ

ಪಂಪ ಕನ್ನಡ ಸಾಹಿತ್ಯದ ಶ್ರೇಷ್ಠ ಕವಿ:ಚನ್ನಬಸವಣ್ಣ

ಸಂಜೆವಾಣಿ ವಾರ್ತೆ

ಬಳ್ಳಾರಿ  ಸೆ ,5 ಪಂಪ ಕನ್ನಡ ಸಾಹಿತ್ಯದ ಒಬ್ಬ ಶ್ರೇಷ್ಠ ಕವಿ. ಭಾರತೀಯ ಭಾಷೆಗಳಲ್ಲಿಯೇ ಉತ್ಕೃಷ್ಟ ಕಾವ್ಯವನ್ನು ರಚಿಸಿ ನಂತರದ ಕವಿಗಳಿಗೆ ಮಾರ್ಗದರ್ಶಕನಾಗಿರುವುದು ಹೆಮ್ಮೆಯ ಸಂಗತಿ ಎಂದು ಲೋಹಿಯಾ ಪ್ರಕಾಶನದ ಸಿ. ಚೆನ್ನಬಸವಣ್ಣ ಅಭಿಪ್ರಾಯ ಪಟ್ಟರು.

 ನಗರದ  ಸರಳಾದೇವಿ ಕಾಲೇಜಿನಲ್ಲಿ ನಿನ್ನೆ  ಆಂತರಿಕ ಗುಣಮಟ್ಟ ಭರವಸೆಯ ಕೋಶ ಹಾಗೂ  ಕನ್ನಡ ವಿಭಾಗದಿಂದ ಆಯೋಜಿಸಿದ್ದ ‘ಪಂಪನ ಕರ್ಣ ’ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪಂಪನ ಕಾವ್ಯತತ್ವ, ಚಿಂತನೆ, ಲೋಕಾನುಭವ ವಿಶಿಷ್ಟವಾದುದು. ಅವರ ಅಪರೂಪದ ಸಾಹಿತ್ಯವನ್ನು ಮತ್ತೆ ಮತ್ತೆ ಓದುವುದರ ಮೂಲಕ ನಾವು ಕನ್ನಡದ ಹೆಮ್ಮೆಯ ವಾರಸುದಾರರಾಗಬೇಕಿದೆ ಎಂದರು.

ಲೇಖಕ ಡಾ.ಜಾಜಿ ದೇವೇಂದ್ರಪ್ಪ ವಿಶೇಷ ಉಪನ್ಯಾಸ ನೀಡಿ ಪಂಪನ ಭಾರತವು ಬರಿ ಮಹಾಭಾರತದ ಕಥೆಯಲ್ಲ. ಅದು ದೇಸಿಯ ಕಥೆ. ಪಂಪಭಾರತ ಮಹಾಕಾವ್ಯದಲ್ಲಿ ಬರುವ ಯುದ್ಧದ ಪ್ರಸಂಗ, ಮಾತುಕತೆ, ಶೈಲಿ ಎಲ್ಲವೂ ದೇಸಿಯತೆಯನ್ನು ಎತ್ತಿ ಹಿಡಿಯುತ್ತವೆ ಎಂದು ಬಣ್ಣಿಸಿದರು.

ಅರಿವನ್ನು ಬೆಳೆಸುವುದೇ ನಿಜವಾದ ಧರ್ಮ ಎಂದು ಹೇಳಿದ ಪಂಪ ಎಲ್ಲ ಕಾಲಕ್ಕೂ ಸಲ್ಲುವ ಕವಿ. ಅಪಾರವಾದ ಪ್ರೇಮ, ಪರಿಸರ ಮತ್ತು ನೆಲದ ಪ್ರೀತಿ ಆತನ ಸಾಹಿತ್ಯದುದ್ದಕ್ಕೂ ಹಾಸುಹೊಕ್ಕಾಗಿದೆ. ಆಂಧ್ರದಲ್ಲಿ ಜನಿಸಿದ್ದರೂ ಆತ ಬರೆದದ್ದು, ಆಲೋಚಿಸಿದ್ದು, ಉಸಿರಾಡಿದ್ದು  ಕನ್ನಡದಲ್ಲಿ ಎನ್ನುವುದು ವಿಶೇಷ ಎಂದು ವಿಶ್ಲೇಷಿಸಿದರು.

ಪಂಪನ ಪ್ರತಿ ನಾಯಕ ಕರ್ಣನಾಗಿದ್ದು. ಕರ್ಣನ ಮೂಲಕ ಪಂಪ ನಿಷ್ಠೆ,ತ್ಯಾಗ, ಔದಾರ್ಯದ ಗುಣಗಳನ್ನು ಓದುಗರಿಗೆ ದಾಟಿಸಿದ್ದಾನೆ.ಕುಂತಿಯ ಮೂಲಕ ಪಂಪ ಹೆಣ್ಣಿನ ಆತಂಕ, ತಲ್ಲಣ, ಮಾನಸಿಕ ಹೊಯ್ದಾಟಗಳನ್ನು ಉಪಮೆ, ಪ್ರತಿಮೆಗಳ ಮೂಲಕ ಅನನ್ಯವಾದ ಕಾವ್ಯಗಳನ್ನು ಕೊಟ್ಟು ಸಾಹಿತ್ಯ ಲೋಕದಲ್ಲಿ ಅಜರಾಮರರಾಗಿದ್ದಾರೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ  ಕನ್ನಡ ವಿಭಾಗದ ಮುಖ್ಯಸ್ಥ ದಸ್ತಗೀರಸಾಬ್ ದಿನ್ನಿ, ಇಂದು ಹಳೆಗನ್ನಡ ಸಾಹಿತ್ಯವನ್ನು ಓದುವ, ಬೋಧಿಸುವ ಕೆಲಸ ಕಡಿಮೆಯಾಗುತ್ತಿದೆ. ಹಳೆಗನ್ನಡ ಸಾಹಿತ್ಯದಲ್ಲಿ ಈ ಹೊತ್ತಿಗೂ ಬೇಕಾಗುವ ಜೀವನ ಮೌಲ್ಯಗಳು, ಚಿಂತನಾ ಧಾರೆಗಳಿವೆ. ಹೊಸ ತಲೆಮಾರಿಗೆ ಹಳೆಗನ್ನಡ ಸಾಹಿತ್ಯದ ಬಗೆಗೆ ಪ್ರೀತಿ, ಅಭಿರುಚಿ ಬೆಳೆಸಲು ಈ ಬಗೆಯ ಕಾರ್ಯಕ್ರಮಗಳು ನೆರವಾಗಬಲ್ಲವು ಎಂದರು .     

ಅಧ್ಯಕ್ಷತೆಯನ್ನು  ಪ್ರಾಂಶುಪಾಲ ಡಾ. ಪ್ರಹ್ಲಾದ್ ಚೌದ್ರಿ  ವಹಿಸಿದ್ದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾ ಬಿ.ರಾಮಸ್ವಾಮಿ, ಲಿಂಗಪ್ಪ ಇದ್ದರು.