
ಸಂಜೆವಾಣಿ ವಾರ್ತೆ
ನಂಜನಗೂಡುಸೆ.30:– ರಾಜಕಾರಣದಲ್ಲಿ ಸಾಕಷ್ಟು ಅನ್ಯಾಯವಾದರು ಅವೆಲ್ಲವನ್ನು ಮೆಟ್ಟಿ ನಿಂತ ಧೀಮಂತ ಸ್ವಾಭಿಮಾನಿ ನಾಯಕ ಯಾರಾದರೂ ಇದ್ದರೆ ಅದು, ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್. ಅವರಿಗೆ ಅವರೇ ಸಾಟಿ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಇನ್ನಿತರರು ಅಭಿಪ್ರಾಯಪಟ್ರು.
ಇಂದು ಮಂಗಳವಾರ ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಸ್ವಾಭಿಮಾನಿ ಚಕ್ರವರ್ತಿ, ದಲಿತರ ಧೀಮಂತ ನಾಯಕ ಸೌಹಾರ್ದತೆಯ ಪ್ರತೀಕ, ಶೋಷಿತರ ಧ್ವನಿ, ನೈತಿಕತೆಯ ನಿತ್ಯ ಸಂಸದರಾದ ಹಿರಿಯ ರಾಜಕೀಯ ಮುತ್ಸದ್ಧಿ ದಿ. ವಿ. ಶ್ರೀನಿವಾಸ ಪ್ರಸಾದ್ ಅವರ 79ನೇ ಜನ್ಮದಿನಾಚರಣೆ ಆಯೋಜಿಸಲಾಗಿತ್ತು.
ವಿ. ಶ್ರೀನಿವಾಸ್ ಪ್ರಸಾದ್ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಸ್ವಾಭಿಮಾನಿಯ ಧೀಮಂತ ಹೆಜ್ಜೆಗಳು-79′ ಹೆಸರಿನಲ್ಲಿ ವಿಶೇಷ ಕಾರ್ಯಕ್ರಮವನ್ನು ಟಿ. ನರಸೀಪುರ ನಳಂದ ಬುದ್ಧ ವಿಹಾರದ ಪ್ರಧಾನ ಭಿಕ್ಷುಗಳಾದ ಪೂಜ್ಯ ಬೋಧಿರತ್ನ ಭಂತೇಜಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಕೌಟಿಲ್ಯ ರಘು, ಮಾಜಿ ಶಾಸಕ ಬಿ .ಹರ್ಷವರ್ಧನ್, ಹಾಗೂ ಭಾಗ್ಯಲಕ್ಷ್ಮಿ ಶ್ರೀನಿವಾಸ್ ಪ್ರಸಾದ್, ಹಿರಿಯ ಪತ್ರಕರ್ತರು ಅಂಶಿ ಪ್ರಸನ್ನ, ಸೇರಿದಂತೆ ಇನ್ನಿತರೆ ಗಣ್ಯರು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ಮುಖಂಡರಾದ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ವಿ. ಶ್ರೀನಿವಾಸ್ ಪ್ರಸಾದ್ ರಾಜ್ಯ ಕಂಡ ಧೀಮಂತ ರಾಜಕಾರಣಿ. ನಂಜನಗೂಡು ಕ್ಷೇತ್ರದ ಬಗ್ಗೆ ಶ್ರೀನಿವಾಸ ಪ್ರಸಾದ್ ಅವರಿಗೆ ವಿಶೇಷ ಅಭಿಮಾನವಿತ್ತು. ಕ್ಷೇತ್ರದ ಜನರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದ ಅವರು, ಸಮುದಾಯದ ಭವನ ನಿರ್ಮಾಣ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳಿಗೆ ಕೊಡುಗೆ ನೀಡಿದ್ದಾರೆ. ಆದರೆ ಅವರಿಗೆ ರಾಜಕೀಯವಾಗಿ ಸೂಕ್ತ ಸ್ಥಾನಮಾನಗಳು ಸಿಗಲಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವತ್ತು ಅವರನ್ನ ಮಂತ್ರಿ ಸ್ಥಾನದಿಂದ ಕಿತ್ತುಹಾಕಿ, ಅವರ ರಾಜಕಾರಣವನ್ನು ತೇಜೋದೆ ಮಾಡುದ್ರು. ವಿ. ಶ್ರೀನಿವಾಸ ಪ್ರಸಾದ್ ಮಾತ್ರವಲ್ಲದೆ, ಬಸವಲಿಂಗಪ್ಪ ಸೇರಿದಂತೆ ಅನೇಕ ರಾಜಕೀಯ ನಾಯಕರಿಗೂ ಕಾಂಗ್ರೆಸ್ ಇದೇ ರೀತಿ ದ್ರೋಹ ಬಗೆದಿದೆ. ಕಾಂಗ್ರೆಸ್ ನ ಕೆಲವೇ ಕೆಲವು ದಲಿತರ ರಾಜಕೀಯ ಉದ್ದಾರಕ್ಕಾಗಿ, ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡ ಶ್ರೀ ಶ್ರೀನಿವಾಸ ಪ್ರಸಾದ್ ಸೇರಿದಂತೆ ಅನೇಕ ದಲಿತ ನಾಯಕರನ್ನು ಆ ಪಕ್ಷ ಮೂಲೆಗುಂಪು ಮಾಡಿದೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಕೇವಲ ದಲಿತ ಸಮಾಜದ ನಾಯಕರಲ್ಲ, ಬಡ ಜನರ ಪರ ಅವರೊಳಗಿನ ಅನೇಕ ಕನಸು, ನನಸಾಗಲೇ ಇಲ್ಲ. ಇಂತಹ ಮಹಾನ್ ನಾಯಕನನ್ನು ಕಳೆದುಕೊಂಡಿದ್ದು ದುರಂತ ಎಂದು ವಿಷಾದ ವ್ಯಕ್ತಪಡಿಸಿ,
ವಿ. ಶ್ರೀನಿವಾಸ್ ಪ್ರಸಾದ್ ಅವರ ವ್ಯಕ್ತಿತ್ವ ಮತ್ತು ಸಾಧನೆಗಳ ಗುಣಗಾನ ಮಾಡಿದರು.
ವಿಧಾನಪರಿಷತ್ ಸದಸ್ಯ ಕೌಟಿಲ್ಯ ರಘು ಮಾತನಾಡಿ, ವಿ. ಶ್ರೀನಿವಾಸ್ ಪ್ರಸಾದ್ ದಲಿತರು ಮತ್ತು ಬಡವರ ಬಗ್ಗೆ ಅನೇಕ ಚಿಂತನೆಗಳನ್ನು ಇಟ್ಟುಕೊಂಡು ರಾಜಕಾರಣ ಮಾಡಿದರು. ತತ್ವ ಸಿದ್ಧಾಂತವನ್ನು ಅಳವಡಿಸಿಕೊಂಡು ಅನೇಕ ನಾಯಕರಿಗೆ ರಾಜಕೀಯವಾಗಿ ಹಾಲೆರೆದ ಅವರಿಗೆ, ಕೆಲವರು ವಿಷವನ್ನು ಕುಡಿಸಿದರು. ಇದನ್ನು ನಾನು ಕಣ್ಣಾರೆ ನೋಡಿದ್ದೇನೆ, ಆ ವಿಚಾರ ಬೇಡ ಎಂದು ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಅವರ ಗುಣಗಾನ ಮಾಡಿದರು.
ಟಿ. ನರಸೀಪುರ ನಳಂದ ಬುದ್ಧ ವಿಹಾರದ ಪ್ರಧಾನ ಭಿಕ್ಷುಗಳಾದ ಪೂಜ್ಯ ಬೋಧಿರತ್ನ ಭಂತೇಜಿ ಮಾತನಾಡಿ, ವಿ. ಶ್ರೀನಿವಾಸ ಪ್ರಸಾದ್ ಅವರು ತತ್ವ ಸಿದ್ಧಾಂತವನ್ನು ಬಿಟ್ಟು ರಾಜಕಾರಣ ಮಾಡಿದವರಲ್ಲ. ಸ್ವಾಭಿಮಾನಿಗೆ ಧಕ್ಕೆ ತಂದುಕೊಟ್ಟು ಅಧಿಕಾರದ ಹಿಂದೆ ಹೋದವರಲ್ಲ. ಬುದ್ದ , ಬಾಬಾ ಸಾಹೇಬ್ ಅಂಬೇಡ್ಕರ್ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ರಾಜಕೀಯವಾಗಿ ದಲಿತರು ಮತ್ತು ಬಡವರ ಉದ್ಧಾರ ಮಾಡಿದ ಅವರ ಸಾಧನೆಗಳು ಸದಾ ಜೀವಂತ ಎಂದು ಅಭಿಪ್ರಾಯಪಟ್ಟರು.
ಮಜಿ ಶಾಸಕ ಹರ್ಷವರ್ಧನ್ ಕೂಡ ಮಾತನಾಡಿ, ಶ್ರೀ ಶ್ರೀನಿವಾಸ ಪ್ರಸಾದ್ ನನಗೆ ಕುಟುಂಬದ ಸದಸ್ಯರು ಮತ್ತು ರಾಜಕೀಯ ಮಾರ್ಗದರ್ಶಕರು ಕೂಡ ಆಗಿದ್ದರು. ನಾನು ಮಾಜಿ ಶಾಸಕನಾಗಿ ಇವತ್ತು ವೇದಿಕೆಯಲ್ಲಿ ಮಾತನಾಡುತ್ತಿದ್ದೇನೆ ಅಂದರೆ ಅದಕ್ಕೆ ಇದಕ್ಕೆ ಅವರ ಹೆಸರು ಮತ್ತು ಅವರು ಮಾಡಿದ ಕೆಲಸಗಳು ಕಾರಣ. ರಾಜಕೀಯವಾಗಿ ಅನೇಕ ವಿಚಾರಗಳನ್ನು ನಾನು ತುಂಬಾ ಹತ್ತಿರದಿಂದ ಅವರಿಂದ ತಿಳಿಯಲು ಸಾಧ್ಯವಾಯಿತು. ನಾನು ಶಾಸಕನಾಗಿ ಅಧಿಕಾರದಲ್ಲಿದ್ದಾಗ ಅವರು ಹೇಳುತ್ತಿದ್ದ ಮಾತುಗಳು ನೆನಪಾಗುತ್ತಿತ್ತು. ಇವತ್ತಿಗೂ ಸಹ ಬಡಜನರ ಬಗ್ಗೆ ಅವರು ಇಟ್ಟುಕೊಂಡಿದ್ದ ಪ್ರೀತಿ ಮತ್ತು ಕಾಳಜಿ ಅಪಾರ ಮತ್ತು ಅನನ್ಯ ಎಂದು ತಮ್ಮ ಹಾಗೂ ಅವರ ನಡುವಿನ ಒಡನಾಟವನ್ನು ಬಿಚ್ಚಿಟ್ಟು, ಶ್ರೀ ಶ್ರೀನಿವಾಸ ಪ್ರಸಾದ್ ಅವರ ಸಾಧನೆಗಳನ್ನು ಕೊಂಡಾಡಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಮಾತನಾಡಿ,
ವಿ.ಶ್ರೀನಿವಾಸ ಪ್ರಸಾದ್ ಅವರು ಹಳೆ ಮೈಸೂರು ಭಾಗದಲ್ಲಿ ಆರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದು, ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು. ತಮ್ಮ ದೀರ್ಘ ರಾಜಕೀಯ ಜೀವನದಲ್ಲಿ ಹಲವು ಪ್ರಧಾನಮಂತ್ರಿಗಳ ಅವಧಿಯಲ್ಲಿ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದರು ಎಂದು ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಎಜುಕೇಷನಲ್ & ಕಲ್ಚರಲ್ ಟ್ರಸ್ಟ್ ಅಧ್ಯಕ್ಷೆ ಭಾಗ್ಯಲಕ್ಷ್ಮಿ ವಿ. ಶ್ರೀನಿವಾಸ ಪ್ರಸಾದ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ , ಬಿಜೆಪಿ ಜಿಲ್ಲಾಧ್ಯಕ್ಷ ಕುಂಬ್ರಹಳ್ಳಿ ಸುಬ್ಬಣ್ಣ, ಮಾಜಿ ಕಂಪೆÇೀಸ್ ನಿಗಮ ಅಧ್ಯಕ್ಷ ಎಸ್. ಮಹದೇವಯ್ಯ, ಬಿಜೆಪಿ ತಾಲೂಕು ಅಧ್ಯಕ್ಷ ಹರದನಹಳ್ಳಿ ಕೆಂಡಗಣ್ಣಪ್ಪ, ನಗರಾಧ್ಯಕ್ಷ ಸಿದ್ದರಾಜು, ವೀರಶೈವ ತಾಲೂಕು ಘಟಕ ಅಧ್ಯಕ್ಷ ಕೆಂಪಣ್ಣ, ಚಿಕ್ಕ ರಂಗ ನಾಯಕ, ಜೆಡಿಎಸ್ ನರಸಿಂಹಸ್ವಾಮಿ, ಪದ್ಮನಾಭ ರಾವ್, ಮಹದೇವಪ್ಪ,ಮಂಗಳ ಸೋಮಶೇಖರ್, ಬದನವಾಳು ರಾಮು, ಸೇರಿದಂತೆ ಬಿಜೆಪಿ ಹಲವಾರು ಮುಖಂಡರು ಹಾಗೂ ವಿ. ಶ್ರೀನಿವಾಸ್ ಪ್ರಸಾದ್ ಅಭಿಮಾನಿ ಬಳಗದ ಸದಸ್ಯರು ಭಾಗವಹಿಸಿದ್ದರು.

























