Home ಜಿಲ್ಲೆ ಮೈಸೂರು ದೇಶ ಸೇವೆಗೆ ಯುವಜನತೆ ಮುಂದಾಗಲಿ: ಕರ್ನಲ್ ಜಯರಾಮ್

ದೇಶ ಸೇವೆಗೆ ಯುವಜನತೆ ಮುಂದಾಗಲಿ: ಕರ್ನಲ್ ಜಯರಾಮ್

ಸಂಜೆವಾಣಿ ನ್ಯೂಸ್
ಮೈಸೂರು, ಸೆ.30:-
ದೇಶದ ಸೇವೆ ಅತ್ಯಂತ ಮಹತ್ವದ್ದು, ಯುವಕರು ಕೇವಲ ಭೂಸೇನೆ ಮಾತ್ರವಲ್ಲದೆ ನೌಕಾಸೇನೆ, ವಾಯುಸೇನೆ, ಪ್ಯಾರಾ ಮಿಲಿಟರಿ ಅಥವಾ ಪೆÇಲೀಸ್ ಪಡೆ ಯಾವುದಾದರೂ ಒಂದು ಪಡೆಯಲ್ಲಿ ಸೇವೆ ಸಲ್ಲಿಸುವ ಮೂಲಕ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರ್ನಲ್ ಜಯರಾಮ್ ಅವರು ಯುವಜನತೆಗೆ ಕರೆ ನೀಡಿದರು.


ಅವರು ಇಂದು ಮಾನಸಗಂಗೋತ್ರಿಯ ಕುವೆಂಪು ಬಯಲು ರಂಗಮಂದಿರದಲ್ಲಿ ನಡೆದ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಯುವ ಸಂಭ್ರಮದ 2ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಯುವಜನತೆಯ ಉತ್ಸಾಹ ಮತ್ತು ಎನರ್ಜಿಯನ್ನು ಕಂಡು ಪ್ರಶಂಸೆ ವ್ಯಕ್ತಪಡಿಸಿದರು. ತಮ್ಮ ಜೀವನದಲ್ಲಿ ಇದು ಎರಡನೇ ಬಾರಿ ಮೈಸೂರು ದಸರಾ ಹಾಗೂ ಯುವ ಸಂಭ್ರಮದಲ್ಲಿ ಭಾಗವಹಿಸುತ್ತಿದ್ದು, ಯುವಕರ ಈ ಸಮ್ಮೇಳನವನ್ನು ಕಂಡು ಅತ್ಯಂತ ಸಂತೋಷವಾಗುತ್ತಿದೆ ಎಂದರು.
ಜೈ ಜವಾನ್, ಜೈ ಕಿಸಾನ್ ಎಂಬಂತೆ ಈ ದೇಶಕ್ಕೆ ರೈತರು ಹಾಗೂ ಯೋಧರು ಇಬ್ಬರೂ ಅತ್ಯಂತ ಮುಖ್ಯ. ಭಾರತದಾದ್ಯಂತ ನಾನು ಸೇವೆ ಸಲ್ಲಿಸಿದ್ದು, ಸೇನೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಅದರಲ್ಲೂ ಮೈಸೂರು ಭಾಗದಲ್ಲಿ ಅಧಿಕಾರಿಗಳ ಸಂಖ್ಯೆ ತೀರಾ ಕಡಿಮೆಯಿದೆ. ಈ ನಿಟ್ಟಿನಲ್ಲಿ ಮೈಸೂರು ಭಾಗದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಶಸ್ತ್ರ ಪಡೆಗಳನ್ನು ಸೇರುವ ಮೂಲಕ ದೇಶದ ಸೇವೆಗೆ ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ 2ನೇ ದಿನದಂದು ಮೈಸೂರು ಹಾಗೂ ಸುತ್ತಮುತ್ತಲಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ವೈವಿಧ್ಯಮಯ ಉಡುಪುಗಳೊಂದಿಗೆ ಸುಂದರ ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಒಟ್ಟು 40 ಕಾಲೇಜುಗಳ ವಿದ್ಯಾರ್ಥಿಗಳು ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.


ಕೊಳ್ಳೇಗಾಲದ ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂವಿಧಾನ ಮತ್ತು ಶಾಸನ ಹಾಗೂ ಕರ್ತವ್ಯಗಳನ್ನು ತಿಳಿಸುವ ನೃತ್ಯ, ಯಾಲಚನಹಳ್ಳಿಯ  ಶ್ರೀ ನಾದಾನಂದನಾಥ ಸ್ವಾಮೀಜಿ ಪದವಿ ಪೂರ್ವ ಕಾಲೇಜು ಪೌರಾಣಿಕ ನೃತ್ಯ, ಹುಲಿಯೂರು ದುರ್ಗದ ಶ್ರೀ ವೆಂಕಟೇಶ್ವರ ಐಟಿಐ ಕಾಲೇಜು ರೈತ ಕೃಷಿ ಚಟುವಟಿಕೆ ರಾಸಾಯನಿಕ ಬಳಕೆ ಮಿತಗೊಳಿಸುವಿಕೆ ಸಂಬಂದಿಸಿದ ನೃತ್ಯ, ಹುಣಸೂರಿನ ಶ್ರೀ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜು ಜಿಲ್ಲಾ ಕೇಂದ್ರೀತ ಪ್ರಸಿದ್ಧ ನೃತ್ಯ, ಮೈಸೂರಿನ ಹೆಬ್ಬಾಳದ ಇನ್ಸಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜೆಂಟ್ ಅಂಡ್ ಕಲ್ನರಿ ಕಾಲೇಜು ಗೊರವ ಕುಣಿತ, ಮರಗಾಲು ಕುಣಿತ, ಕೊಡವ ನೃತ್ಯ ಹುಲಿ ವೇಷ ಅದಿವಾಸಿ ನೃತ್ಯ, ಮಳವಳ್ಳಿಯ ಸರ್ಕಾರಿ ಪ್ರಥಮ


ದರ್ಜೆ ಕಾಲೇಜು ಮೈಸೂರು ಮಹಾರಾಜರ ಕೊಡುಗೆಗೆ ಸಂಬಂಧಿಸಿದ ನೃತ್ಯ ಹೀಗೆ ನಾನಾ ರೀತಿಯ  ಪೌರಾಣಿಕ, ಹಳೆಯ ಮತ್ತು ಹೊಸ ಗೀತೆಗಳ ಸಂಯೋಜನೆಯೊಂದಿಗೆ ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ಎತ್ತಿಹಿಡಿಯುವ ನೃತ್ಯರೂಪಕಗಳು ಪ್ರದರ್ಶನಗೊಂಡವು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ, ಅಪರ ಪ್ರಾದೇಶಿಕ ಅಯಕ್ತರಾದ ಡಾ; ಪಿ. ಶಿವರಾಜು, ಯುವ ಸಂಭ್ರಮ ಉಪ ಸಮಿತಿಯ ಅಧ್ಯಕ್ಷ ಡಾ. ರಾಕೇಶ್, ಉಪಾಧ್ಯಕ್ಷ ಕೃಷ್ಣಮೂರ್ತಿ, ಸದಸ್ಯರಾದ ರಾಜೇಂದ್ರ, ರಂಗಸ್ವಾಮಿ, ಚೇತನ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.