
ಸಂಜೆವಾಣಿ ವಾರ್ತೆ
ಹನೂರು.ಅ.2:- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಚಾಮರಾಜನಗರ ಜಿಲ್ಲಾ ಶಾಖೆಯ ಪದಾಧಿಕಾರಿಗಳು, ರಾಜ್ಯದಲ್ಲಿ 140 ವರ್ಷಗಳ ನಂತರ ಎದುರಾಗಿರುವ ಭೀಕರ ಬರಗಾಲದ ಹಿನ್ನೆಲೆಯಲ್ಲಿ ರೈತರ ಹಿತ ಕಾಪಾಡುವಂತೆ 18 ಪ್ರಮುಖ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.
ಕೊಳ್ಳೇಗಾಲ ಪಟ್ಟಣದ ಅತಿಥಿ ಗೃಹದಲ್ಲಿ ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತನಾಡಿದ ರೈತ ಮುಖಂಡರು, ರಾಜ್ಯದಲ್ಲಿ ಕೆರೆ-ಕಟ್ಟೆ, ಜಲ ಮೂಲಗಳು ಬತ್ತಿಹೋಗಿದ್ದು, ರೈತರು ಹಾಕಿದ್ದ ಫಸಲುಗಳು ಕರಕಲಾಗಿ ಸಂಪೂರ್ಣ ನಷ್ಟವಾಗಿದೆ. ಅಂತರ್ಜಲ ಬತ್ತಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಒಣಗಿವೆ. ಜನರು ಜೀವನೋಪಾಯಕ್ಕಾಗಿ ಹೊರ ರಾಜ್ಯ ಮತ್ತು ಬೇರೆ ಜಿಲ್ಲೆಗಳಿಗೆ ವಲಸೆ ಹೋಗುತ್ತಿದ್ದಾರೆ.
ಧರೆಯೇ ಹತ್ತಿ ಉರಿಯುತ್ತಿದ್ದು ಜನ ಬೀದಿಗೆ ಬರಲು ತ್ರಾಸವಾಗಿದೆ. ಇಷ್ಟೆಲ್ಲಾ ಸಂಕಷ್ಟ ಎದುರಾಗಿದ್ದರೂ ರಾಜ್ಯ ಸರ್ಕಾರ ಕೇವಲ 101 ತಾಲೂಕುಗಳನ್ನು ಬರ ಎಂದು ಘೋಷಿಸಿ, ಮುತ್ತಷ್ಟು ತಾಲೂಕುಗಳನ್ನು ಪಟ್ಟಿಗೆ ಸೇರಿಸಲು ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಚಾಮರಾಜನಗರ ಜಿಲ್ಲಾ ಶಾಖೆಯ ರೈತರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಅವರಿಗೆ ಮನವಿಯನ್ನ ಸಲ್ಲಿಸಿದರು ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ರೈತ ಸಂಘದ ಪ್ರಮುಖ ಬೇಡಿಕೆಗಳು :-
ಭೂ ಸುಧಾರಣಾ ಕಾಯ್ದೆಯನ್ನು ವಾಪಸ್ ಪಡೆದು, ಹಿಂದಿನ 79 ಎ,ಬಿ ಮತ್ತು ಸಿ ತಿದ್ದುಪಡಿ ತರುವ ವಿಷಯದಲ್ಲಿ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು.
ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ನಷ್ಟ, ಪ್ರಾಣ ಹಾನಿ ಹೆಚ್ಚಿದ್ದು, ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಕಾಡು ಪ್ರಾಣಿಯಿಂದ ಮೃತಪಟ್ಟ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಬೇಕು.
ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು.
ಮೈಕ್ರೋ ಫೈನಾನ್ಸ್ ಹಾವಳಿಗೆ ಕಡಿವಾಣ ಹಾಕಬೇಕು.
ರೈತರಿಗೆ ಪ್ರತಿ ಲೀಟರ್ ಹಾಲಿಗೆ ರೂ. 10/- ಹೆಚ್ಚಳ ಮಾಡಬೇಕು. ಕಬ್ಬಿಗೆ ಪ್ರತಿ ಟನ್ಗೆ ರೂ. 5000/- ನೀಡಬೇಕು. ರೈತರಿಗೆ ಬರ ಪರಿಹಾರವಾಗಿ ಪ್ರತಿ ಎಕರೆಗೆ ರೂ. 50,000/- ನೀಡಬೇಕು.
ಜಿಲ್ಲೆಯ ಎಲ್ಲಾ ಕೆರೆಗಳಿಗೂ ಏಕಕಾಲದಲ್ಲಿ ಕಬಿನಿ ನದಿ ಮೂಲದಿಂದ ನೀರು ತುಂಬಿಸಲು ಕ್ರಮ ವಹಿಸಬೇಕು.
ರೈತರ ಕೃಷಿ ಪಂಪ್ಸೆಟ್ಗಳಿಗೆ ಹಗಲಿನ ವೇಳೆ 7 ತಾಸು ನಿರಂತರ ವಿದ್ಯುತ್ ಹಾಗೂ ರಾತ್ರಿ 6-00 ರಿಂದ ಬೆಳಿಗ್ಗೆ 6-00 ಗಂಟೆಯವರೆಗೆ ತೋಟದ ಮನೆಗಳಿಗೆ ವಿದ್ಯುತ್ ಕಡಿತಗೊಳಿಸಬಾರದು.
ಹನೂರು ತಾಲೂಕು, ಉಡುತೊರೆ ಹಳ್ಳ ಏತ ನೀರಾವರಿ ಯೋಜನೆಗೆ ಬಜೆಟ್ನಲ್ಲಿ 491 ಕೋಟಿ ಘೋಷಣೆಯಾಗಿದ್ದು, ಶೀಘ್ರ ಹಣ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಬೇಕು.
ಸತ್ಯಗಾಲ (ಜಾಗೇರಿ) ಸರ್ವೆ ನಂ. 174 ರಲ್ಲಿ ವಾಸ ಮಾಡುವ ಎಲ್ಲಾ ರೈತರಿಗೆ ಸಾಗುವಳಿ ಪತ್ರ ನೀಡಲು ಜಂಟಿ ಸರ್ವೆ ನಡೆಸಬೇಕು.
ಕಳೆದ 50-60 ವರ್ಷಗಳಿಂದ ಕಂದಾಯ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ, ಪೆÇೀಡಿ ಮತ್ತು ದುರಸ್ತಿ ಮಾಡಬೇಕು. ಗುಂಡ್ಲುಪೇಟೆಯಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಬಗ್ಗೆ ಕ್ರಮ ಕೈಗೊಳ್ಳಬೇಕು.
ಗೋಮಾಳದಲ್ಲಿ ವ್ಯವಸಾಯ ಮಾಡಲು ಅವಕಾಶ ನೀಡಿ, ಗಣಿಗಾರಿಕೆಗೆ ನೀಡಿರುವ ಭೂಮಿಯನ್ನು ವಾಪಸ್ ಪಡೆಯಬೇಕು.
ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗಳನ್ನು ನಿಲ್ಲಿಸಬೇಕು ಹಾಗೂ ಹೊರ ರಾಜ್ಯಕ್ಕೆ ಹೋಗುತ್ತಿರುವ ನಮ್ಮ ಜಿಲ್ಲೆಯ ಖನಿಜ ಸಂಪತ್ತನ್ನು ತಕ್ಷಣ ನಿಲ್ಲಿಸಲು ಸೂಕ್ತ ಕ್ರಮ ವಹಿಸಬೇಕು.
ಗ್ರಾಮೀಣ ಪ್ರದೇಶದಲ್ಲಿ ವಸತಿ ರೈತರಿಗೆ ಪ್ರತಿ ಜಿಲ್ಲೆಯ ಸರ್ಕಾರಿ ಜಾಗದಲ್ಲಿ 50,000 ನಿವೇಶನ ನೀಡುವ ಯೋಜನೆ ಜಾರಿಗೊಳಿಸಬೇಕು.
ನೇರ ಮಾರುಕಟ್ಟೆ ಯೋಜನೆಯನ್ನು ಎಲ್ಲಾ ಹೋಬಳಿ ಕೇಂದ್ರದಲ್ಲಿ ತೆರೆಯಬೇಕು.
ಗುಂಡ್ಲುಪೇಟೆ ತಾಲೂಕಿನಿಂದ ಅಂತರ್ ರಾಜ್ಯಕ್ಕೆ ಸಂಪರ್ಕವಿದ್ದು, ರಾಷ್ಟ್ರೀಯ ಹೆದ್ದಾರಿ 766 ರಲ್ಲಿ ಹೆಚ್ಚು ಅಪಘಾತ ಸಂಭವಿಸುತ್ತಿದ್ದು, ಬಜೆಟ್ನಲ್ಲಿ ಮಂಜೂರಾಗಿರುವ ಸಂಚಾರಿ ಪೆÇಲೀಸ್ ಠಾಣೆಯನ್ನು ಶೀಘ್ರ ಮಂಜೂರು ಮಾಡಬೇಕು.
ಸರ್ಕಾರಿ ಜಾಗವಿಲ್ಲದ ಗ್ರಾಮೀಣ ಪ್ರದೇಶದಲ್ಲಿ ಭೂ ಸ್ವಾಧೀನಪಡಿಸಿ, ನಿವೇಶನ ಮತ್ತು ಮನೆಯನ್ನು ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ, ಸಚಿವರಾದ ಚೆಲುವರಾಯಸ್ವಾಮಿ, ಶಾಸಕ ಎ.ಆರ್ ಕೃಷ್ಣಮೂರ್ತಿ, ಎಂ ಆರ್ ಮಂಜುನಾಥ್, ಗಣೇಶ್ ಪ್ರಸಾದ್, ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಕಾರ್ಯಾಧ್ಯಕ್ಷ ಎ.ಎಂ. ಮಹೇಶ್ಪ್ರಭು, ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ. ಭಾಸ್ಕರ್, ಮಹಿಳಾ ತಾಲೂಕು ಅಧ್ಯಕ್ಷೆ ಕನಕಮ್ಮ, ಮಲ್ಲಪ್ಪ, ಶಿವಣ್ಣ ಮಲ್ಲಯ್ಯನಪುರ, ಹನೂರು ತಾಲೂಕು ಅಧ್ಯಕ್ಷ ಪಳನಿಸ್ವಾಮಿ, ಕೊಳ್ಳೇಗಾಲ ಉಪಾಧ್ಯಕ್ಷ ಬೆಟ್ಟೇಗೌಡ ಸೇರಿದಂತೆ ಇನ್ನಿತರರು ಇದ್ದರು.

























