Home ಜಿಲ್ಲೆ ಮೈಸೂರು ಜೆಡಿಎಸ್ ಬೆಂಬಲಿತ ಸಹಕಾರ ಸಂಘಗಳಿಗೆ ಅನಗತ್ಯ ಕಿರುಕುಳ ವಿರೋಧಿಸಿ ಪ್ರತಿಭಟನೆ

ಜೆಡಿಎಸ್ ಬೆಂಬಲಿತ ಸಹಕಾರ ಸಂಘಗಳಿಗೆ ಅನಗತ್ಯ ಕಿರುಕುಳ ವಿರೋಧಿಸಿ ಪ್ರತಿಭಟನೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಅ.13:
ಪಟ್ಟಣದ ಹೊರವಲಯದಲ್ಲಿರುವ ಮನ್ ಮುಲ್ ಹಾಲು ಶಿಥಲೀಕರಣ ಘಟಕದ ಉಪ ಕೇಂದ್ರದಲ್ಲಿ ಹಾಲು ಪೂರೈಕೆ ಮಾಡುವ ಸಹಕಾರ ಸಂಘಗಳಿಗೆ ಅನಗತ್ಯ ತೊಂದರೆ ನೀಡುತ್ತಿದ್ದು ರೈತ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು ಮತ್ತು ಹಾಲು ಪರೀಕ್ಷಕರಿಗೆ ಅನಗತ್ಯ ಕಿರುಕುಳವಾಗುತ್ತಿದ್ದು ಇದನ್ನು ತಕ್ಷಣವೇ ನಿಲ್ಲಿಸಬೇಕು. ಎಸ್.ಎನ್.ಎಫ್ ಹೆಸರಿನಲ್ಲಿ ರೈತರು ಪೂರೈಕೆ ಮಾಡಿದ ಶುದ್ದ ಹಾಲಿಗೂ ಕಳಪೆ ಹಣೆಪಟ್ಟಿ ಹಚ್ಚಿ ರೈತರಿಗೆ ಅನ್ಯಾಯ ಮಾಡುತ್ತಿದ್ದು ಇದರಿಂದ ರೈತ ಸಮುದಾಯಕ್ಕೆ ಆಗಿರುವ ನಷ್ಠವನ್ನು ಭರಿಸಿಕೊಡಬೇಕು ಹಾಗೂ ಪಕ್ಷಪಾತ ನೀತಿಯ ಮೂಲಕ ರೈತರಿಗೆ ವಂಚನೆ ಮಾಡಿರುವ ಸೂಪರ್ ವೈಸರ್ ಗಳನ್ನು ತಕ್ಷಣವೇ ಅಮಾನತ್ತು ಮಾಡಿ ವಿಚಾರಣೆಗೆ ಒಳಪಡಿಸುವಂತೆ ಆಗ್ರಹಿಸಿ ತಾಲೂಕು ಜೆಡಿಎಸ್ ಪಕ್ಷದ ವತಿಯಿಂದ ಪಟ್ಟಣದ ಹೊರವಲಯದಲ್ಲಿರುವ ಮನ್ ಮುಲ್ ಹಾಲು ಶಿಥಲೀಕರಣ ಘಟಕದ ಉಪ ಕೇಂದ್ರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.


ತಾಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್ ನೇತೃತ್ವದಲ್ಲಿ ಮನ್ ಮುಲ್ ಉಪ ಕೇಂದ್ರಕ್ಕೆ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಿದರು. ಈ ಸಂದರ್ಭದಲ್ಲಿ ಪೆÇಲೀಸರು ಪ್ರತಿಭಟನಾಕಾರರನ್ನು ಕೇಂದ್ರದ ಒಳಗೆ ಬಿಡದೆ ಬಾಗಿಲಿನಲ್ಲಿಯೇ ತಡೆದು ನಿಲ್ಲಿಸಿದರು. ಇದರಿಂದ ಆಕ್ರೋಶಗೊಂಡ ಜೆಡಿಎಸ್ ಕಾರ್ಯಕರ್ತರು ಪೆÇಲೀಸರ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿ ಮೈಸೂರು-ಚನ್ನರಾಯಪಟ್ಟಣ ಮುಖ್ಯ ರಸ್ತೆಯಲ್ಲಿಯೇ ಶಾಮಿಯಾನ ಹಾಕಿ ಪ್ರತಿಭಟನೆಗೆ ಮುಂದಾದರು. ಇದರಿಂದಾಗಿ ರಾಜ್ಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಯಿತು. ಪರಿಸ್ಥಿತಿ ಅರಿತ ಪೆÇಲೀಸರು ಅನಂತರ ಶಿಥಲೀಕರಣದ ಘಟಕದ ಆವರಣದಲ್ಲಿ ಪ್ರತಿಭಟನೆಗೆ ಅವಕಾಶ ಕಲ್ಪಿಸಿದರು.


ತಾಲೂಕಿನಿಂದ ಚುನಾಯಿತರಾಗಿರುವ ಮನ್ ಮುಲ್ ನಿರ್ದೇಶಕ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಜೆಡಿಎಸ್ ಪಕ್ಷದ ಪರ ಇರುವ ಸಹಕಾರ ಸಂಘಗಳ ಕಾರ್ಯದರ್ಶಿಗಳು ಮತ್ತು ಹಾಲು ಪರೀಕ್ಷಕರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಮನ್ ಮುಲ್ ಮೂಲಕ ಹಾಲು ಉತ್ಪಾದಕರ ಸಹಕಾರ ಸಂಘಗಳ ರೈತರಿಗೆ ನೀಡಬೇಕಾದ ಸವಲತ್ತುಗಳ ಪೂರೈಕೆಯಲ್ಲಿಯೂ ತಾರತಮ್ಯ ಮಾಡಲಾಗುತ್ತಿದೆ. ನಿರ್ದೇಶಕನ ಪರ ಇರುವ ಮಹಿಳಾ ಸಹಕಾರ ಸಂಘಗಳಲ್ಲಿ ಕಾರ್ಯದರ್ಶಿಯ ಕುಟುಂಬದ ಪುರುಷರು ಕಾರ್ಯದರ್ಶಿಯ ಪರವಾಗಿ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಆದರೆ ಜೆಡಿಎಸ್ ಪರ ಇರುವ ಮಹಿಳಾ ಸಂಘಗಳಲ್ಲಿ ಮಹಿಳಾ ಕಾರ್ಯದರ್ಶಿಗಳೇ ಕ್ಯಾನ್ ಎತ್ತಿ ವ್ಯಾನಿಗೆ ತುಂಬಬೇಕಾಗಿದೆ. ಎಲ್ಲಾ ಸಹಕಾರ ಸಂಘಗಳಲ್ಲೂ ರೈತರು ಶುದ್ದ ಹಾಲನ್ನೆ ಡೈರಿಗಳಿಗೆ ಪೂರೈಕೆ ಮಾಡುತ್ತಿದ್ದಾರೆ. ಹಾಲು ಪರೀಕ್ಷಕರು ಪರೀಕ್ಷೆ ಮಾಡಿಯೇ ಶುದ್ದ ಹಾಲನ್ನು ತೆಗೆದುಕೊಂಡು ಮನ್ ಮುಲ್ ಗೆ ಪೂರೈಕೆ ಮಾಡುತ್ತಾರೆ. ಜೆಡಿಎಸ್ ಪರ ಇರುವ ಡೈರಿಗಳು ಪೂರೈಕೆ ಮಾಡುವ ಹಾಲನ್ನು ಎಸ್.ಎನ್.ಎಫ್ ಕಡಿಮೆಯಿದೆ ಎಂದು ಸೀಲಿಂಗ್ ಸೆಂಟರ್ ಸಿಬ್ಭಂಧಿಗಳು ಕಡಿಮೆ ದರ ನಿಗಧಿ ಪಡಿಸಿ ರೈತರಿಗೆ ವಂಚನೆ ಮಾಡುತ್ತಿದ್ದಾರೆ. ಆದರೆ ಸಿಲೀಂಗ್ ಸೆಂಟರ್ ನಲ್ಲಿ ಪೇಲ್ ಆದ ಅದೇ ಹಾಲನ್ನು ಎಸ್.ಎನ್.ಎಫ್ ಹೆಚ್ಚಾಗಿದೆ ಎಂದು ತೋರಿಸಿಕೊಂಡು ಗೆಜ್ಜಲಗೆರೆಯ ಮನ್ ಮುಲ್ ಕೇಂದ್ರಕ್ಕೆ ಪೂರೈಕೆ ಮಾಡಿ ತಾವು ಹಣ ಲಪಟಾಯಿಸುತ್ತಿದ್ದಾರೆ. ಎಸ್.ಎನ್.ಎಫ್ ಫೇಲ್ ಹೆಸರಿನ ದಂದೆಯಲ್ಲಿ ತಾಲೂಕಿನ ಹಾಲು ಉತ್ಪಾದಕರಿಗೆ ಕನಿಷ್ಠ 3 ಕೋಟಿಗೂ ಅಧಿಕ ಹಣ ನಷ್ಠವಾಗಿದೆ. ಶುದ್ದ ಹಾಲು ಪೂರೈಕೆ ಮಾಡಿದ್ದರೂ ಕಡಿಮೆ ಕೊಬ್ಬಿನಂಶ ತೋರಿಸಿ ರೈತರಿಗೆ ವಂಚನೆ ಮಾಡುತ್ತಿರುವುದರಿಂದ ಬಹುತೇಕ ಕಡೆ ರೈತರು ಮನ್ ಮುಲ್ ಡೈರಿಗೆ ಹಾಲು ಪೂರೈಕೆ ಮಾಡುವ ಬದಲು ಖಾಸಗಿ ಡೈರಿಗಳತ್ತ ಮುಖ ಮಾಡುತ್ತಿದ್ದಾರೆ. ನಿರ್ದೇಶಕರ ಬೆಂಬಲದಿಂದ ಕೆಲವು ಡೈರಿಗಳು ರೈತರಿಗೆ ಹಾಲಿನ ತೂಕದಲ್ಲಿಯೂ ವಂಚನೆ ಮಾಡುತ್ತಿರುವುದು ಬಹಿರಂಗಗೊಂಡಿದೆ. ಮನ್ ಮುಲ್ ಹಾಲಿನಪುಡಿ ಹಗರಣ ಈಗಾಗಲೇ ಬೆಳಕಿಗೆ ಬಂದಿದೆ. ಇದೀಗ ಸಿ.ಸಿ ಕೆಂದ್ರದಲ್ಲಿಯೂ ರೈತರಿಗೆ ಕಡಿಮೆ ಎಸ್.ಎನ್.ಎಫ್ ತೋರಿಸಿ ಅನಂತರ ಅದೇ ಹಾಲನ್ನು ಒಕ್ಕೂಟಕ್ಕೆ ಪೂರೈಕೆ ಮಾಡಿ ಹಣ ಲೂಟಿ ಮಾಡಲಾಗುತ್ತಿದೆ. ಡೈರಿಗಳಿಗೆ ನಿದೇಶಕರುಗಳ ಹಸ್ತಕ್ಷೇಪ ಮತ್ತು ದಬ್ಬಳಿಕೆ ನಿಲ್ಲಬೇಕು. ರೈತರಿಗೆ ವಂಚನೆ ಮಾಡುತ್ತಿರುವ ಸಿಬ್ಬಂಧಿಗಳನ್ನು ತಕ್ಷಣವೇ ಅಮಾನತ್ತು ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.


ಶಾಸಕರ ಬೆಂಬಲ:- ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಹೆಚ್.ಟಿ.ಮಂಜು ಪಕ್ಷದ ಕಾರ್ಯಕರ್ತರ ಹೋರಾಟಕ್ಕೆ ಬೆಂಬಲ ನೀಡಿದರು. ನಿರ್ದೇಶಕರ ಒತ್ತಡಕ್ಕೆ ಮಣಿದು ಮನ್ ಮುಲ್ ಅಧಿಕಾರಿಗಳು ತಾಲೂಕಿನ ವಿವಿಧ ಡೈರಿಗಳ ಮೇಲೆ ತೋರಿಸುತ್ತಿರುವ ತಾತರಮ್ಯ ನೀತಿ ಮತ್ತು ದಬ್ಬಾಳಿಕೆಗೆ ಸಂಬಂಧಿಸಿದ ವಿವರಗಳನ್ನು ದಾಖಲೆ ಸಮೇತ ಪ್ರಸ್ತಾಪಿಸಿ ಅಧಿಕಾರಿಗಳನ್ನು ಪ್ರಶ್ನಿಸಿದ ಶಾಸಕರು ಸಹಕಾರ ಸಂಘಗಳಲ್ಲಿ ರಾಜಕೀಯ ಸಲ್ಲದು. ಸಹಕಾರ ಸಂಘಗಳಲ್ಲಿ ರಾಜಕೀಯ ಮಾಡುತ್ತಿರುವ ನೌಕರರ ಅಗತ್ಯತೆ ನಮಗಿಲ್ಲ. ದಬ್ಬಾಳಿಕೆ ನಡೆಸುತ್ತಿರುವ ಡೈರಿ ಸೂಪರ್ ವೈಸರ್ ಮೇಲೆ ಶಿಸ್ತಿನ ಕ್ರಮ ತೆಗೆದುಕೊಳ್ಳುವಂತೆ ಸ್ಥಳದಲ್ಲಿದ್ದ ಮನ್ ಮುಲ್ ಎಂ.ಡಿ ರಘು ಅವರನ್ನು ಆಗ್ರಹಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್, ಪಕ್ಷದ ಮುಖಂಡರಾದ ಹೆಚ್.ಟಿ.ಲೋಕೇಶ್, ಎಸ್.ಎಲ್.ಮೋಹನ್, ದಿಶಾ ಸಮಿತಿಯ ಸದಸ್ಯ ನರಸನಾಯಕ್,ಹೆಚ್.ಕೆ.ಅಶೋಕ್, ಹುಲ್ಲೇಗೌಡ, ಅಕ್ಕಿಹೆಬ್ಬಾಳು ರಘು, ಕಿಕ್ಕೇರಿ ಮಧು, ಕಿಕ್ಕೇರಿ ಕೃಷ್ಣೇಗೌಡ, ಟಿ.ಬಲದೇವ್, ಮೆಣಸ ಮಹದೇವೇಗೌಡ, ಕೊರಟೀಕೆರೆ ದಿನೇಶ್, ಐನೋರಹಳ್ಳಿ ಮಲ್ಲೇಶ್, ವಕೀಲ ಧನಂಜಯ, ದಿಲೀಪ್ ಕುಮಾರ್, ರವಿಕುಮಾರ್,ಬೇಲದಕೆರೆ ನಂಜಪ್ಪ, ರಾಜೇನಹಳ್ಳಿ ಕುಮಾರಸ್ವಾಮಿ,ಹುಬ್ಬನಹಳ್ಳಿ ಬಲರಾಮ್, ಅರಳಕುಪ್ಪೆ ಪ್ರತಾಪ, ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಸೇರಿದಂತೆ ನೂರಾರು ಜನ ಪ್ರತಿಭಟನಯಲ್ಲಿದ್ದು ಮಾತನಾಡಿದರು.