Home ಜಿಲ್ಲೆ ಮೈಸೂರು ಗ್ರಾಮೀಣ ವಿದ್ಯಾರ್ಥಿಗಳಿಗೆ ಕಾನೂನು ಶಿಕ್ಷಣದ ಅವಕಾಶ: ಜ್ಞಾನಧಾರಾ ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆ

ಗ್ರಾಮೀಣ ವಿದ್ಯಾರ್ಥಿಗಳಿಗೆ ಕಾನೂನು ಶಿಕ್ಷಣದ ಅವಕಾಶ: ಜ್ಞಾನಧಾರಾ ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆ

ಸಂಜೆವಾಣಿ ವಾರ್ತೆ
ಹುಣಸೂರು, ಸೆ.28:-
ಜ್ಞಾನಧಾರಾ ಎಜುಕೇಶನಲ್ ಫೌಂಡೇಶನ್ ವತಿಯಿಂದ ನೂತನವಾಗಿ ಪ್ರಾರಂಭಿಸಿರುವ ಜ್ಞಾನಧಾರಾ ಕಾನೂನು ಕಾಲೇಜನ್ನು ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಉದ್ಘಾಟಿಸಿದರು.


ಕಾಡಸಿದ್ದೇಶ್ವರ ಮಠದ ಡಾ. ಕರಿವೃಷಭದೇಶೀಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿ, ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ಡಾ. ತ್ರಿನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮೀಜಿ ಹಾಗೂ ಗಾವಡಗೆರೆ ಮಠದ ನಟರಾಜ ಸ್ವಾಮೀಜಿಗಳ ನೇತೃತ್ವದಲ್ಲಿ ಗುರುಬೂದಿ ಮಂಗಳ ಮಂಟಪದಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು.
ಸಮಾರಂಭದಲ್ಲಿ ಮಾತನಾಡಿದ ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ಸುತ್ತಮುತ್ತಲಿನ ಎರಡು ಜಿಲ್ಲೆಗಳ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಡಾ. ನಾಗೇಂದ್ರ ಹಾಗೂ ಡಾ. ಯಮುನಾ ದಂಪತಿಯ ನೇತೃತ್ವದ ಜ್ಞಾನಧಾರಾ ಶಿಕ್ಷಣ ಸಂಸ್ಥೆ ಕಾನೂನು ಕಾಲೇಜು ಆರಂಭಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ವಿದ್ಯಾಭ್ಯಾಸದ ಜೊತೆಗೆ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವಂತಹ ಉದ್ಯೋಗಾಧಾರಿತ (ಜಾಬ್ ಓರಿಯೆಂಟೆಡ್) ಕೋರ್ಸ್‍ಗಳನ್ನು ಆರಂಭಿಸುವ ಮೂಲಕ ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಬೇಕು ಎಂದು ಅವರು ಆಶಿಸಿದರು.


ತಮ್ಮ ತಾಲ್ಲೂಕಿನಲ್ಲಿ ಯಾರೇ ಶಿಕ್ಷಣ ಸಂಸ್ಥೆ ಆರಂಭಿಸಿ ವಿದ್ಯಾರ್ಥಿಗಳ ಬದುಕಿಗೆ ದಾರಿ ದೀಪವಾಗುವಂತಹ ಕಾರ್ಯ ಕೈಗೊಂಡರೂ ಅವರಿಗೆ ಸದಾ ಬೆಂಬಲವಾಗಿ ನಿಲ್ಲುವುದಾಗಿ ಮಂಜುನಾಥ್ ಭರವಸೆ ನೀಡಿದರು.
ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಡಾ. ಕರಿವೃಷಭದೇಶೀಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿ ಮಾತನಾಡಿ, ಇಂದಿನ ಕಾಲದಲ್ಲಿ ವಿದ್ಯೆಯೇ ಪ್ರಧಾನ ಎಂಬುದನ್ನು ಅರಿತಿರುವ ಡಾ. ನಾಗೇಂದ್ರ ಹಾಗೂ ಡಾ. ಯಮುನಾ ದಂಪತಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಕಾನೂನು ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಕಾನೂನು ಕಾಲೇಜು ಆರಂಭಿಸಿರುವುದು ಉತ್ತಮ ಕಾರ್ಯವಾಗಿದೆ ಎಂದರು.


ಕಳೆದ 14 ವರ್ಷಗಳಿಂದ ಪದವಿ ಕಾಲೇಜು ನಡೆಸಿಕೊಂಡು ಉತ್ತಮ ಶಿಕ್ಷಣ ನೀಡುತ್ತಿರುವ ಸಂಸ್ಥೆಗೆ ಸರ್ಕಾರದಿಂದ ಎರಡು ಎಕರೆ ಜಮೀನು ಒದಗಿಸಿಕೊಡುವಂತೆ ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಅವರಲ್ಲಿ ಮನವಿ ಮಾಡಿದರು.
ಕರ್ತವ್ಯದಲ್ಲಿ ನಿಷ್ಠೆ, ದೇವರಲ್ಲಿ ಭಕ್ತಿ ಹಾಗೂ ಹಿರಿಯರಲ್ಲಿ ಪ್ರೀತಿ ಇದ್ದಾಗ ಮಾತ್ರ ನಿಜವಾದ ಧರ್ಮವನ್ನು ಪಾಲಿಸಿದಂತಾಗುತ್ತದೆ. ಇವುಗಳನ್ನು ಮರೆತರೆ ಸಮಾಜದಲ್ಲಿ ಸಮಸ್ಯೆಗಳು ಎದುರಾಗುತ್ತವೆ ಎಂದು ಹೇಳಿದರು.


ಹಿಂದೆ ಗಂಡ-ಹೆಂಡತಿ ನಡುವಿನ ವ್ಯಾಜ್ಯಗಳನ್ನು ಬಗೆಹರಿಸಲು ಬೆರಳೆಣಿಕೆಯಷ್ಟು ನ್ಯಾಯಾಲಯಗಳಿದ್ದವು. ಆದರೆ ಇಂದು ದಂಪತಿಗಳ ನಡುವೆ ಸಾಮರಸ್ಯದ ಕೊರತೆಯಿಂದ ವ್ಯಾಜ್ಯಗಳು ಹೆಚ್ಚಾಗಿದ್ದು, ನ್ಯಾಯಾಲಯಗಳ ಸಂಖ್ಯೆಯೂ ಹೆಚ್ಚಾಗಿದೆ ಎಂದು ಅವರು ವಿಷಾದಿಸಿದರು.
ವಕೀಲಿ ವೃತ್ತಿಯನ್ನು ಸಮಾಜದ ಪೆÇೀಷಣೆಗೆ ಬಳಸಿಕೊಳ್ಳಿ: ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ಡಾ. ತ್ರಿನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮೀಜಿ ಮಾತನಾಡಿ, ಭಾರತವು ವಿವಿಧ ಧರ್ಮ, ಜಾತಿ ಹಾಗೂ ಮತಗಳ ಸಮನ್ವಯದಿಂದ ಕೂಡಿದ ಜ್ಞಾನದ ನೆಲವಾಗಿದೆ. `ನಾವು ಅಂದರೆ ದೇಶ’ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದರು.


ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ನಿಷ್ಠೆ, ಛಲ, ಏಕಾಗ್ರತೆ, ಪರಿಶ್ರಮ ಹಾಗೂ ಧೈರ್ಯ ಇದ್ದಾಗ ಮಾತ್ರ ತಮ್ಮ ಗುರಿಯನ್ನು ಸಾಧಿಸಿ, ಕನಸುಗಳನ್ನು ನನಸಾಗಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಇಂದು ಎಲ್ಲ ಕ್ಷೇತ್ರಗಳಲ್ಲೂ ಕೆಲವು ರೀತಿಯ ಕಲುಷಿತತೆ ಕಂಡುಬರುತ್ತಿದೆ. ವಕೀಲಿ ವೃತ್ತಿಯನ್ನು ಶೋಷಣೆಯ ಮಾರ್ಗವಾಗಿ ಬಳಸಿಕೊಳ್ಳದೆ, ಸಮಾಜದ ಪೆÇೀಷಣೆಗೆ ಹಾಗೂ ನ್ಯಾಯದ ರಕ್ಷಣೆಗೆ ಬಳಸಿಕೊಳ್ಳುವ ವಕೀಲರಾಗಿ ಹೊರಹೊಮ್ಮಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಗಾವಡಗೆರೆ ಮಠದ ನಟರಾಜ ಸ್ವಾಮೀಜಿ ಆಶೀರ್ವಚನ ನೀಡಿದರು.


ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜೆ.ಸಿ.ನಾಗೇಂದ್ರ ಮಾತನಾಡಿ, ಕಾಡಸಿದ್ದೇಶ್ವರ ಮಠದ ಸ್ವಾಮೀಜಿಗಳು, ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಸೇರಿದಂತೆ ಹಲವರ ಸಹಕಾರದಿಂದ ಇಂದು ಕಾನೂನು ಕಾಲೇಜು ಸ್ಥಾಪಿಸಲು ಸಾಧ್ಯವಾಗಿದೆ. ಸಹಕರಿಸಿದ ಎಲ್ಲರಿಗೂ ತಾವು ಚಿರಋಣಿಯಾಗಿರುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಕಾಡಸಿದ್ದೇಶ್ವರ ಮಠದ ಆಡಳಿತಾಧಿಕಾರಿ ನಟೇಶ್, ಸಂಸ್ಥೆಯ ಅಧ್ಯಕ್ಷೆ ಡಾ. ಯಮುನಾ, ಕಿಡ್‍ವೆಂಟೋ ಸಂಸ್ಥೆಯ ನಿರ್ದೇಶಕ ವಾಗೀಶ್ ಕುಮಾರ್, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಆಯುಕ್ತ ಶಿವಪ್ರಕಾಶ್, ದೆಹಲಿಯ ನ್ಯಾಷನಲ್ ಚೀಫ್ ಅಡ್ವೆಂಚರ್ ರಾಮಪ್ರಕಾಶ್ ಶರ್ಮ, ಸಮಾಜಸೇವಕ ಪ್ರದೀಪ್ ಕುಮಾರ್, ಆಡಿಟರ್ ರಘು, ರಮೇಶ್ ಬಾಬು ಸೇರಿದಂತೆ ಹಲವರು ಉಪಸ್ಥಿತರಿದ್ದರು.