Home ಜಿಲ್ಲೆ ಬೆಂಗಳೂರು ದಲಿತ ಕುಟುಂಬದ ಜಮೀನು ಸವರ್ಣೀಯರ ಹೆಸರಿಗೆ ಖಾತೆ

ದಲಿತ ಕುಟುಂಬದ ಜಮೀನು ಸವರ್ಣೀಯರ ಹೆಸರಿಗೆ ಖಾತೆ

oplus_0

ಕೆಜಿಎಫ್,ಅ.೧೬:ದಲಿತ ಕುಟುಂಬಕ್ಕೆ ಸೇರಿದ ಜಮೀನಿನ ಒಂದು ಭಾಗವನ್ನು ಕಂದಾಯ ಅಧಿಕಾರಿಗಳು ಅಕ್ರಮವಾಗಿ ಬೇರೊಬ್ಬರ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಬೇತಮಂಗಲ ಬ್ಲಾಕ್ ಕಾಂಗ್ರೆಸ್ ಎಸ್‌ಸಿ/ಎಸ್‌ಟಿ ಘಟಕದ ಅಧ್ಯಕ್ಷ ವೆಂಕಟ್ರಾಮ್ ಗಂಭೀರ ಆರೋಪ ಮಾಡಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಳೆದ ಸುಮಾರು ೪೦ ವರ್ಷಗಳಿಂದ ತಮ್ಮ ಕುಟುಂಬದ ಅನುಭವದಲ್ಲಿರುವ ಜಮೀನಿನ ಖಾತೆಯನ್ನು ಬೇರೊಬ್ಬರ ಹೆಸರಿಗೆ ಬದಲಾಯಿಸಿರುವುದು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದ್ದಾರೆ.


ಕ್ಯಾಸಂಬಳ್ಳಿ ಹೋಬಳಿಯ ಕಂಗಾಂಡ್ಲಹಳ್ಳಿ ಗ್ರಾಮದ ನಿವಾಸಿಯಾಗಿರುವ ತಮಗೆ ಕಣ್ಣೂರು ಗ್ರಾಮದಲ್ಲಿ ಸರ್ವೆ ನಂಬರ್ ೪೮/೨೫ರಲ್ಲಿ ೨.೨೩ ಗುಂಟೆ ಜಮೀನು ಇದೆ. ಈ ಜಮೀನಿನಲ್ಲಿ ೧.೧೩ ಗುಂಟೆಯನ್ನು ಕಣ್ಣೂರು ಗ್ರಾಮದ ನಿವಾಸಿ ಸೋಮಶೇಖರ್ ನಾಯ್ಡು ಬಿನ್ ರಂಗಪ್ಪ ನಾಯ್ಡು ಹೆಸರಿಗೆ ಕಂದಾಯ ಅಧಿಕಾರಿಗಳು ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.


ನಮ್ಮತಂದೆ ಹನುಮಂತಪ್ಪ ಈ ಜಮೀನಿನ ಮೂಲ ಸಾಗುವಳಿದಾರರಾಗಿದ್ದು,ಸರ್ಕಾರದಿಂದ ಜಮೀನು ಮಂಜೂರಾಗಿತ್ತು.ತಂದೆಯವರು ೨೦೧೮ರಲ್ಲಿ ಮೃತಪಟ್ಟ ಬಳಿಕ, ೨೦೧೯ರಲ್ಲಿ ಜಮೀನನ್ನು ನನ್ನ ಹೆಸರಿಗೆ ಪೌತಿ ಖಾತೆ ಮಾಡಲಾಗಿದೆ. ತಂದೆಯವರ ಕಾಲದಿಂದಲೂ ನಮ್ಮ ಕುಟುಂಬ ಈ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದೆ. ನಮಗೆ ಜೀವನ ನಿರ್ವಹಣೆಗೆ ಬೇರೆ ಯಾವುದೇ ಆಧಾರವಿಲ್ಲ ಎಂದು ವೆಂಕಟ್ರಾಮ್ ತಿಳಿಸಿದರು.


ತಮ್ಮ ಕುಟುಂಬಕ್ಕೆ ಸೇರಿದ ಜಮೀನಿನ ವಿಚಾರದಲ್ಲಿ ನ್ಯಾಯ ದೊರಕಿಸಿಕೊಡದಿದ್ದರೆ ಕುಟುಂಬ ಸಮೇತರಾಗಿ ಜಮೀನಿನಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.