
ಬೆಂಗಳೂರು: ಅ,೧೬-ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ರಾಜಧಾನಿ ಬೆಂಗಳೂರಿಗೆ ಹಿಂಗಾರು ಮಳೆ ತಂಪೆರೆದಿದೆ. ಮುಂಗಾರು ಮುಕ್ತಾಯಗೊಂಡು ಹಿಂಗಾರು ಆರಂಭವಾದ ಬಳಿಕ ನಗರದಲ್ಲಿ ಮೊದಲ ಮಳೆಯಾಗಿದ್ದು, ಗುರುವಾರ ಸಂಜೆ ನಗರದ ಬಹುತೇಕ ಪ್ರದೇಶಗಳಲ್ಲಿ ಗುಡುಗು, ಗಾಳಿ ಸಹಿತ ವರ್ಷಧಾರೆಯಾಗಿದೆ.
ಏಕಾಏಕಿ ಸುರಿದ ಮಳೆಯಿಂದ ರಸ್ತೆಗಳು ಜಲಾವೃತಗೊಂಡು, ವಾಹನ ಸವಾರರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡುವಂತಾಯಿತು. ವಿವಿಧೆಡೆ ಮರಗಳು ಧರೆಗುರುಳಿದ್ದು, ಒಂದು ಬೈಕ್ ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬ್ಯಾಟರಾಯನಪುರ, ಜಕ್ಕೂರು, ಥಣಿಸಂದ್ರ ಹಾಗೂ ಯಲಹಂಕದ ಕೆಂಪೇಗೌಡ ವಲಯ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಿದೆ. ಎಚ್ಎಎಲ್ ವಿಮಾನ ನಿಲ್ದಾಣದ ಸುತ್ತಮುತ್ತ, ಶಾಂತಿನಗರ, ಬಸವನಗುಡಿ, ಕತ್ರಿಗುಪ್ಪೆ, ಚಿಕ್ಕಲಸಂದ್ರ, ಉತ್ತರಹಳ್ಳಿ, ಅರೆಕೆರೆ, ಹಂಪಿನಗರ, ಅಂಜನಾಪುರ, ಗೊಟ್ಟಿಗೆರೆ, ಗಾಳಿ ಆಂಜನೇಯ ದೇವಸ್ಥಾನ ಪ್ರದೇಶ ಹಾಗೂ ಗಿರಿನಗರದಲ್ಲಿಯೂ ಮಳೆ ಸುರಿದಿದೆ.
ಮೆಜೆಸ್ಟಿಕ್, ಟೌನ್ಹಾಲ್, ಕೆ.ಆರ್. ಮಾರುಕಟ್ಟೆ, ಜಯನಗರ, ಶೇಷಾದ್ರಿಪುರಂ, ವಿಧಾನಸೌಧದ ಸುತ್ತಮುತ್ತ, ಮಲ್ಲೇಶ್ವರ, ರಾಜಾಜಿನಗರ, ಮೈಸೂರು ಬ್ಯಾಂಕ್ ವೃತ್ತ ಹಾಗೂ ಕಾರ್ಪೊರೇಷನ್ ವೃತ್ತ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಮಳೆಯ ಅಬ್ಬರ ಕಂಡುಬಂದಿದೆ. ಸಂಜೆ ಕಚೇರಿ ಕೆಲಸ ಮುಗಿಸಿ ಮನೆಗಳತ್ತ ತೆರಳುತ್ತಿದ್ದವರು ಮಳೆಯಿಂದಾಗಿ ರಸ್ತೆಗಳಲ್ಲೇ ಸಿಲುಕಿಕೊಂಡರು. ಮಳೆಯಿಂದ ತಪ್ಪಿಸಿಕೊಳ್ಳಲು ಹಲವರು ಬಸ್ ನಿಲ್ದಾಣಗಳ ಆಶ್ರಯ ಪಡೆದರು.
ರಸ್ತೆಯೋ, ಚರಂಡಿಯೋ ತಿಳಿಯದ ಸ್ಥಿತಿ!
ನಗರದ ಹಲವು ಪ್ರಮುಖ ರಸ್ತೆಗಳು ಮಳೆನೀರಿನಿಂದ ತುಂಬಿಕೊಂಡಿದ್ದವು. ಕೆಲವು ಕಡೆ ಒಳಚರಂಡಿಗಳು ಉಕ್ಕಿಹರಿದ ಪರಿಣಾಮ ಕೊಳಚೆ ನೀರು ರಸ್ತೆಗೆ ನುಗ್ಗಿ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟುಮಾಡಿತು. ಶೇಷಾದ್ರಿಪುರಂ, ಬಳ್ಳಾರಿ ರಸ್ತೆ ಹಾಗೂ ಬನ್ನೇರುಘಟ್ಟ ರಸ್ತೆಯ ಸಾಗರ ಅಪೊಲೊ ಜಂಕ್ಷನ್ ಬಳಿ ಚರಂಡಿ ನೀರು ರಸ್ತೆಯ ಮೇಲೆ ಹರಿಯಿತು.
ಬಳ್ಳಾರಿ ರಸ್ತೆಯ ಸಂಜಯನಗರ ಸಮೀಪ, ಸಂಪಂಗಿರಾಮನಗರ, ಶ್ರೀ ಜಯಚಾಮರಾಜೇಂದ್ರ ಪಾರ್ಕ್ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ನೀರು ನಿಂತಿತ್ತು. ಟೌನ್ಹಾಲ್ ಮುಂಭಾಗ, ಆಚಾರ್ಯ ಲೇಔಟ್, ಎಂ.ಜಿ. ರಸ್ತೆ, ಶಾಂತಿನಗರದ ವಿವಿಧ ರಸ್ತೆಗಳು, ಕಮೀಷರೆಟ್ ರಸ್ತೆ ಹಾಗೂ ಲಾಲ್ಬಾಗ್ ಸಿದ್ದಾಪುರ ರಸ್ತೆಯಲ್ಲಿ ಮಳೆನೀರು ಸಂಗ್ರಹಗೊಂಡು ಸಂಚಾರಕ್ಕೆ ಅಡ್ಡಿಯಾಯಿತು.
ಶ್ರೀ ಜಯಚಾಮರಾಜೇಂದ್ರ ಪಾರ್ಕ್ ಬಳಿ ನೀರು ನಿಂತಿರುವ ಮಾಹಿತಿ ತಿಳಿಯುತ್ತಿದ್ದಂತೆ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಂಡರು.
ಮೂರು ಕಡೆ ಮರಗಳು ಧರೆಗುರುಳಿಕೆ:
ಭಾರಿ ಗಾಳಿ ಸಹಿತ ಮಳೆಯಿಂದ ನಗರದ ಮೂರು ಕಡೆ ಮರಗಳು ಉರುಳಿಬಿದ್ದಿವೆ. ಪುಲಕೇಶಿನಗರದ ರಾಬರ್ಟ್ಸನ್ ರಸ್ತೆಯಲ್ಲಿ ಮರ ಬಿದ್ದ ಪರಿಣಾಮ ರಸ್ತೆಬದಿಯಲ್ಲಿದ್ದ ಬೈಕ್ ನಜ್ಜುಗುಜ್ಜಾಗಿದೆ. ಎಚ್ಎಸ್ಆರ್ ಲೇಔಟ್ನ ಎಂಟನೇ ಮುಖ್ಯ ರಸ್ತೆಯಲ್ಲಿ ಬೃಹತ್ ಮರವೊಂದು ಉರುಳಿಬಿದ್ದಿದೆ. ಜೆ.ಪಿ. ನಗರದ ಎಂಟನೇ ಹಂತದ ಆರನೇ ಮುಖ್ಯ ರಸ್ತೆಯ ಒಂದನೇ ಕ್ರಾಸ್ನಲ್ಲಿಯೂ ಮರ ಧರೆಗುರುಳಿದೆ. ಇನ್ನು ಹಲವು ಕಡೆ ಮರಗಳ ರೆಂಬೆ-ಕೊಂಬೆಗಳು ಮುರಿದುಬಿದ್ದಿವೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ವೈಟ್ಟಾಪಿಂಗ್ ರಸ್ತೆಗಳಲ್ಲಿ ನೀರು ನಿಲ್ಲುವ ಸಮಸ್ಯೆ:
ಬೆಂಗಳೂರು ಕೇಂದ್ರ ನಗರಪಾಲಿಕೆ ವ್ಯಾಪ್ತಿಯ ಎಂ.ಜಿ. ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳೂ ಮಳೆಯಿಂದ ಜಲಾವೃತಗೊಂಡಿದ್ದವು. ವೈಟ್ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿರುವ ಕೆಲವು ರಸ್ತೆಗಳಲ್ಲಿ ಮಳೆನೀರು ಸರಾಗವಾಗಿ ಹರಿಯದೆ ಅಲ್ಲಲ್ಲೇ ನಿಂತುಕೊಂಡಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು.
ಮಳೆಗಾಲ ಮುಗಿದ ಬಳಿಕವೂ ನಗರದಲ್ಲಿ ಒಳಚರಂಡಿ ವ್ಯವಸ್ಥೆ, ಮಳೆನೀರು ಹರಿವಿನ ಮಾರ್ಗ ಹಾಗೂ ರಸ್ತೆ ಬದಿಯ ಚರಂಡಿಗಳ ನಿರ್ವಹಣೆ ಸಮರ್ಪಕವಾಗಿಲ್ಲ ಎಂಬುದು ಮತ್ತೊಮ್ಮೆ ಗೋಚರಿಸಿದೆ. ಅಲ್ಪಾವಧಿಯ ಮಳೆಗೆ ರಸ್ತೆಗಳು ಜಲಾವೃತಗೊಳ್ಳುತ್ತಿರುವುದು ವಾಹನ ಸವಾರರು ಮತ್ತು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಮಳೆನೀರು ನಿಲ್ಲುವ ಪ್ರದೇಶಗಳನ್ನು ಗುರುತಿಸಿ, ಶಾಶ್ವತ ಪರಿಹಾರ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.
ಇನ್ನೂ ಹವಾಮಾನ ಇಲಾಖೆ ಮುಂದಿನ ಎರಡು ದಿನಗಳು ನಗರದಲ್ಲಿ ಮಳೆ ಅಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದೆ.ಇತ್ತ ಐದು ನಗರಪಾಲಿಕೆ ಸಿಬ್ಬಂದಿಗಳು ಅಲರ್ಟ ಅಗಿ ಇರೋದಕ್ಕೆ ಅಯಾ ನಗರಪಾಲಿಕೆ ಅಯುಕ್ತರು ಸೂಚನೆ ನೀಡಿದರೆ..


























