
ನವದೆಹಲಿ, ಅ. ೧೬- ಕಾಕ್ರೋಚ್ ಜನತಾಪಾರ್ಟಿ ರಾಜಧಾನಿ ದೆಹಲಿಯ ಕನ್ನಾಟ್ ಪ್ಲೇಸ್ನ ಲ್ಲಿ ಇಂದು ಸಂಜೆ
ತ್ರಿವರ್ಣ ಧ್ವಜ ಹಾರಿಸುವ ಪ್ರತಿಭಟನೆ ನಡೆಸಲಿರುವ ಹಿನ್ನೆಲೆಯಲ್ಲಿ ರಾಜಧಾನಿ ದೆಹಲಿಯಲ್ಲಿ ಅಭೂತ ಪೂರ್ವ ಬಿಗಿಭದ್ರತೆ ಕೈಗೊಳ್ಳಲಾಗಿದೆ.
ಸಿಜೆಪಿ ನಡೆಸಲು ಉದ್ದೇಶಿಸಿರುವ ತ್ರಿವರ್ಣ ಧ್ವಜ ಪ್ರತಿಭಟನೆಗೆ ನಿನ್ನೆ ತಡೆಯಾಜ್ಞೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು. ಆದರೆ ಪ್ರತಿಭಟನಾಕಾರರ ಚಟುವಟಿಕೆ ನಿಯಂತ್ರಿಸಲು ಅಗತ್ಯವಿರುವ ಎಲ್ಲಾ ಬಿಗಿ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ನ್ಯಾಯಾಲಯಕ್ಕೆ ನೀಡಿರುವ ಭರವಸೆಯನ್ನು ದಾಖಲು ಮಾಡಿಕೊಂಡಿವೆ.
ಇಂದು ನಡೆಯಲಿರುವ ತ್ರಿವರ್ಣ ಧ್ವಜ ಹಾರಿಸುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಿಜೆಪಿ ಸಂಸ್ಥಾಪಕ ಅಧ್ಯಕ್ಷ ಅಭಿಜಿತ್ ದಿಪ್ಕೆ ಕರೆ ಕೊಟ್ಟಿದ್ದಾರೆ.
ಶಾಂತಿಯುತವಾಗಿ ತೆರಳಿ, ತ್ರಿವರ್ಣ ಧ್ವಜ ಹಾರಿಸುತ್ತೇವೆ. ದೇಶದಲ್ಲಿ ತಿರಂಗ ಹಾರಿಸಿದ್ದಕ್ಕಾಗಿ ಜೈಲಿಗೆ ಹೋಗಬೇಕಾಗಿ ಬಂದರೂ ಅದನ್ನು ಎದುರಿಸಲು ಸಿದ್ಧರಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ.
ಪೊಲೀಸರು ನನ್ನ ಮೇಲೆ ಸೂಕ್ಷ್ಮ ನಿಗಾವಹಿಸಿದ್ದು, ಯಾವುದೇ ಕ್ಷಣದಲ್ಲೂ ವಶಕ್ಕೆ ಪಡೆಯುವ ಸಾಧ್ಯತೆಯಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಎಸ್ ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವುದನ್ನು ವಿರೋಧಿಸಿ, ಸಿಜೆಪಿ ದೆಹಲಿಯಲ್ಲಿ ಭಾರಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾಗ ಸಿಜೆಪಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ತಿಹಾರ್ ಜೈಲಿಗೆ ಕಳುಹಿಸಿದ್ದರು.
ಜಂತರ್- ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಪೊಲೀಸರು ವಿಧಿಸಿದ್ದ ನಿರ್ಬಂಧ ಉಲ್ಲಂಘಿಸಿ ಜಂತರ್- ಮಂತರ್ಗೆ ನುಗ್ಗಿ ಸಿಜೆಪಿ ತ್ರಿವರ್ಣ ಧ್ವಜ ಹಾರಿಸಿತ್ತು.
ಆದರೂ ಕೇಂದ್ರ ಚುನಾವಣಾ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ನೀಡುವ ತನಕ ಹೋರಾಟ ಮುಂದುವರೆಸಲೂ ಬಿಜೆಪಿ ಮುಂದಾಗಿದೆ. ಇದರ ಭಾಗವಾಗಿ ದೆಹಲಿಯಲ್ಲಿ ತಿರಂಗಾ ಧ್ವಜ ಹಾರಿಸಲು ಮುಂದಾಗಿದೆ.
ಎಲ್ಲೆಡೆ ಪೊಲೀಸ್ ಸರ್ಪಗಾವಲು
ಸಿಜೆಪಿ ತಿರಂಗಾ ಧ್ವಜ ಪ್ರತಿಭಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ೬ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಕೇಂದ್ರ ಶಸ್ತ್ರಾಸ್ತ್ರ ಪೊಲೀಸ್ ಪಡೆಯ ೨೨೦ ತುಕಡಿಗಳನ್ನು ಹಾಗೂ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಷೆಯಾಗುವ ರೀತಿಯಲ್ಲಿ ಕನ್ನಾಟ್ ಪ್ಲೇಸ್, ರಾಜೀವ್ ಚೌಕ್, ಸೆಂಟ್ರಲ್ ಪಾರ್ಕ್, ಜಂತರ್- ಮಂತರ್, ಪಾಲಿಕಾ ಬಜಾರ್, ಈ ಪ್ರದೇಶ ಸಮೀಪವಿರುವ ಮೆಟ್ರೋ ನಿಲ್ದಾಣಗಳು ಮತ್ತು ಲ್ಯೂಟಿಯನ್ಸ್ ದೆಹಲಿಯ ಪ್ರಮುಖ ಸೂಕ್ಮಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇತರ ಜಿಲ್ಲೆಗಳಲ್ಲಿಂದಲೂ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ.
ಕನ್ನಾಟ್ ಪ್ಲೇಸ್, ಪಟೇಲ್ ಚೌಕ್, ಐಟಿಒ ಮತ್ತು ಸಂಸತ್ ಮಾರ್ಗ ಸೇರಿದಂತೆ ಹಲವೆಡೆ ಬ್ಯಾರಿಕೇಡ್ ಗಳನ್ನು ಅಳವಡಿಸಿ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ತುರ್ತು ವಿಚಾರಣೆಗೆ ಸುಪ್ರೀಂ ನಕಾರ
ಇಂದು ಸಂಜೆ ಸಿಜೆಪಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಲಿರುವ ಹಿನ್ನೆಲೆಯಲ್ಲಿ ಕನ್ನಾಟ್ ಪ್ಲೇಸ್ ನಲ್ಲಿರುವ ಸೆಂಟ್ರಲ್ ಪಾರ್ಕ್ ಮುಚ್ಚುವಂತೆ ದೆಹಲಿ ಪಾಲಿಕೆ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ತುರ್ತಾಗಿ ಕೈಎತ್ತಿ ಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಸಂಬಂಧಪಟ್ಟ ಎಲ್ಲರಲ್ಲೂ ಒಳ್ಳೇಯ ತಿಳುವಳಿಕೆ ಮೂಡಲಿ ಎಂದು ಸುಪ್ರೀಂಕೋರ್ಟ್ ಹೇಳಿದೆ.
೨ ದಿನ ಬಂದ್
ಸಿಜೆಪಿ ತ್ರಿವರ್ಣ ಧ್ವಜ ಹಾರಿಸುವ ಹಿನ್ನೆಲೆಯಲ್ಲಿ ದೆಹಲಿಯ ಕನ್ನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ ಅನ್ನು ನವದೆಹಲಿ ಮಹಾನಗರ ಪಾಲಿಕೆಯೂ ಎರಡು ದಿನಗಳ ಕಾಲ ಬಂದ್ ಮಾಡಿ, ಪ್ರಕಟಣೆ ಹೊರಡಿಸಿದೆ.
ಆಡಳಿತಾತ್ಮಕ ಕಾರಣಗಳಿಂದಾಗಿ ಇಂದು ಮತ್ತು ನಾಳೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.


























